Advertisement

ವಿಜಯಪುರ ಇಬ್ಬರು ದಳಪತಿಗಳಿಗೆ ಬಿಜೆಪಿ ಗಾಳ!

07:55 PM Nov 27, 2019 | Naveen |

„ವಿಶೇಷ ವರದಿ
ವಿಜಯಪುರ:
ರಾಜ್ಯದಲ್ಲಿ ಜೆಡಿಎಸ್‌ನ ಇನ್ನೂ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ, ಉಪ ಚುನಾವಣೆ ಬಳಿಕ ಇನ್ನೂ ಹಲವರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕರು ಹೇಳುತ್ತಿರುವ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಇಬ್ಬರು ಜೆಡಿಎಸ್‌ ಶಾಸಕರ ನಡೆ ಕುತೂಹಲ ಮೂಡಿಸಿದೆ.

Advertisement

ನಾನಂತೂ ಜೆಡಿಎಸ್‌ ತೊರೆಯಲ್ಲ ಎನ್ನುತ್ತಲೇ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಮತದಾರರ ನಿರ್ಧಾರದಂತೆ ನಾನು ಮುನ್ನಡೆಯುತ್ತೇನೆ ಎನ್ನುವ ಮೂಲಕ ದೇವಾನಂದ ಚವ್ಹಾಣ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನ ಹುಟ್ಟುಹಾಕಿದೆ. ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಅವರು ಜೆಡಿಎಸ್‌ನ ದೇವಾನಂದ ಚವ್ಹಾಣ, ಎಂ.ಸಿ.ಮನಗೂಳಿ ನನ್ನ ಸಂಪರ್ಕದಲ್ಲಿದ್ದಾರೆ.

ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿ ಇನ್ನೋರ್ವ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಜೆಡಿಎಸ್‌ನ ಹಲವು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವುದು ಜಿಲ್ಲೆಯ ಇಬ್ಬರು ಜೆಡಿಎಸ್‌ ಶಾಸಕರ ನಡೆಯ ಮೇಲೂ ಅನುಮಾನ ಹುಟ್ಟು ಹಾಕಿದೆ.

ಇದಕ್ಕೆ ಪುಷ್ಟಿ ನೀಡುವಂತೆ ನಗರದಲ್ಲಿ ಎರಡು ದಿನಗಳ ಹಿಂದೆ ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಹಾಗೂ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್‌ ಶಾಸಕ ಡಾ| ದೇವಾನಂದ ಚವ್ಹಾಣ ಭೇಟಿ, ಮಾತುಕತೆ ಕುತೂಹಲಕ್ಕೆ ಮತ್ತಷ್ಟು ರಾಜಕೀಯ ಅನುಮಾನಗಳನ್ನು ಹೆಚ್ಚುವಂತೆ ಮಾಡಿದೆ. ಕಳೆದ ಹಲವು ದಿನಗಳ ಹಿಂದೆ ಬಿಜೆಪಿ ಶಾಸಕ ಯತ್ನಾಳ ನೇತೃತ್ವದಲ್ಲಿ ಮೈಸೂರಿನಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಸಿಂದಗಿ ಕ್ಷೇತ್ರದ ಶಾಸಕರಾದ ಮಾಜಿ ಸಚಿವ ಎಂ.ಸಿ. ಮನಗೂಳಿ ಹಾಗೂ ದೇವಾನಂದ ಚವ್ಹಾಣ ಭೇಟಿ ಮಾಡಿದ್ದಾರೆ.

ನಾವಂತೂ ಜೆಡಿಎಸ್‌ ಪಕ್ಷ ತೊರೆಯುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಲೇ ಕ್ಷೇತ್ರದ ಅಭಿವೃದ್ಧಿಗೆ ಮೈತ್ರಿ ಸರ್ಕಾರದಲ್ಲಿ ಘೋಷಿತ 120 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಸರ್ಕಾರ ತೊಂದರೆ ಮಾಡುತ್ತಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು, ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ನಿಜ ಎಂದು ಚವ್ಹಾಣ ತಿಳಿಸಿದ್ದಾರೆ.

Advertisement

ಏನಿದು ಆಟ?: ವಿಜಯಪುರ ನಗರದ ಬಿಜೆಪಿ ಶಾಸಕ ಯತ್ನಾಳ ಹಾಗೂ ನನ್ನ ಕ್ಷೇತ್ರಕ್ಕೆ ಸೇರಿದ ವಿಜಯಪುರ ನಗರದ ಕೆಲವು ವಾರ್ಡ್‌ಗಳ ಅಭಿವೃದ್ಧಿಗಾಗಿ ಈಚೆಗೆ ಸಭೆ ನಡೆಸಿದ್ದಾಗ ಇಬ್ಬರೂ ಪರಸ್ಪರ ಭೇಟಿ ಆಗಿದ್ದು ನಿಜ. ಇದಲ್ಲದೇ ಯತ್ನಾಳ ಈ ಹಿಂದೆ ಜೆಡಿಎಸ್‌ ಪಕ್ಷದಲ್ಲೇ ಇದ್ದು ನಮ್ಮೊಂದಿಗೆ ಉತ್ತಮ ರಾಜಕೀಯ ಬಾಂಧವ್ಯ ಹೊಂದಿದ್ದಾರೆ. ವಿಜಯಪುರಕ್ಕೆ ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಇದನ್ನು ಬಳಸಿಕೊಂಡು ಯತ್ನಾಳ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು ಎನ್ನುವ ಮೂಲಕ ನಮ್ಮ-ಅವರ ಮಧ್ಯೆ ರಾಜಕೀಯ ಏನಿಲ್ಲ. ಈ ಭೇಟಿಯ ಫ‌ಲವಾಗಿ ಎಂ.ಸಿ. ಮನಗೂಳಿ ಅವರಿಗೆ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದಾರೆ. ನನ್ನ
ಕ್ಷೇತ್ರಕ್ಕೆ ಅನುದಾನ ಬಾರದ ಕಾರಣ ಅಭಿವೃದ್ಧಿಗೆ ಸಮಸ್ಯೆಯಾಗಿದೆ ಎಂದು ಚವ್ಹಾಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next