Advertisement

ಬಸವನಾಡಲ್ಲಿ ವಿಜಯದಶಮಿ ಸಂಭ್ರಮ

11:51 AM Oct 09, 2019 | Naveen |

ವಿಜಯಪುರ: ಹಿಂದೂಗಳ ಪ್ರಮುಖ ಪವಿತ್ರ ಹಬ್ಬಗಳಲ್ಲಿ ಒಂದಾದ ವಿಜಯ ದಶಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಅತ್ಯಂತ ಸಡಗರ, ಶ್ರದ್ಧೆ, ಭಕ್ತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು.

Advertisement

ಶರನ್ನವರಾತ್ರಿ ನಿಮಿತ್ತ ಕಳೆದ 9 ದಿನದಿಂದ ಶ್ರೀದೇವಿಗೆ ವಿವಿಧ ಪೂಜೆ ನಡೆಸಿದ ಭಕ್ತರು, ಸೋಮವಾರ ಆಯುಧ ಪೂಜೆ ನಡೆಸಿ ಮಂಗಳವಾರ ವಿಜಯದಶಮಿ ಆಚರಿಸಿದರು. ದಸರೆ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಇದ್ದರೂ ಶ್ರೀದೇವಿಯ ಪೂಜೆ ಹಾಗೂ ಅಲಂಕರಾಕ್ಕಾಗಿ ಕಬ್ಬು, ಬಾಳೆದಿಂಡು, ಮಾವಿನ ಎಲೆ, ತೋಪು, ವಿವಿಧ ಬಗೆಯ ಹೂ, ಹಣ್ಣು ಖರೀದಿಯೂ ಜೋರಾಗಿತ್ತು.

ಸೋಮವಾರ ಮನೆಗಳಲ್ಲಿ, ವ್ಯಾಪಾರಿಗಳು ತಮ್ಮ ವ್ಯಾಪಾರಿ ಕೇಂದ್ರಗಳನ್ನು ಸಿಂಗರಿಸಿ, ಆಯುಧ ಪೂಜೆ ಮೂಲಕ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಯುಧ ಪೂಜೆ ದಿನ ಅತ್ಯಂತ ಶುಭವಾಗಿದ್ದರಿಂದ ಬಂಗಾರ ಖರೀದಿ, ಹೊಸ ಬೈಕ್‌-ಕಾರ್‌, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಖರೀದಿ ಜೋರಾಗಿತ್ತು. ದಸರೆ ನಿಮಿತ್ತ ವಿವಿಧ ವಸ್ತುಗಳು, ವಾಹನಗಳ ಖರೀದಿ ಮೇಲೆ ಉದ್ಯಮಗಳು, ವ್ಯಾಪಾರಿ ಸಂಸ್ಥೆಗಳು ವಿಶೇಷ ರಿಯಾಯ್ತಿ ಹಾಗೂ ಕೊಡುಗೆ ನೀಡಿದ ಜಾಹೀರಾತುಗಳಿಂದಾಗಿ ವ್ಯಾಪಾರಿ ಮಳಿಗೆಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ಮಂಗಳವಾರ ಬೆಳಗ್ಗೆಯಿಂದಲೇ ಜಿಲ್ಲೆಯಾದ್ಯಂತ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿತ್ತು. ಮಹಿಳೆಯರು, ಮಕ್ಕಳು ಎನ್ನದೇ ಅಬಾಲ ವೃದ್ಧರು ಹೊಸಬಟ್ಟೆ ತೊಟ್ಟು ಸಡಗರದಲ್ಲಿದ್ದರು. ಮಹಾನವಮಿಗಾಗಿ ವಿವಿಧ ಖಾದ್ಯಗಳನ್ನು ತಯಾರಿಸಿ ಶ್ರೀದೇವಿಯ ದಶಮಿ ಪೂಜೆ ಸಲ್ಲಿಸಿ ಹಬ್ಬದ ವಿಶೇಷವಾದ ಬನ್ನಿಎಲೆಯನ್ನು ಅರ್ಪಿಸಿ ಭಕ್ತಿ ಸಮರ್ಪಿಸಿದರು.

ದಸರೆ ನಿಮಿತ್ತ ನಗರದ ವಿವಿಧ ದೇವಾಲಯಗಳು ಹಾಗೂ ವಿವಿಧ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಶ್ರೀದೇವಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಪ್ರಸಾದ ಅರ್ಪಿಸಿ, ತಮ್ಮ ಬದುಕಿಗೆ ಯಾವ ಸಂಕಷ್ಟಗಳು ಬಾರದಿರಲಿ ಹಾಗೂ ಸಮೃದ್ಧಿ ಕೊಡು ಎಂದು ಪ್ರಾರ್ಥಿಸಿದರು.

Advertisement

ರಾತ್ರಿ ವೇಳೆ ಪ್ರತಿ ಕುಟುಂಬದಲ್ಲೂ ಕಿರಿಯರು ಹಿರಿಯರಿಗೆ ಬನ್ನಿ ಸಮರ್ಪಿಸಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಬನ್ನಿ ತಗೊಂಡು ಬಂಗಾರದಂಗ ಇರೋಣ ಎಂದು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ನಂತರ ಬಂಧುಗಳು, ನೆರೆ ಹೊರೆಯವರು, ಸ್ನೇಹಿತರ ಮನೆ-ಮನೆಗೆ ತೆರಳಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ವರ್ಷ ಪೂರ್ತಿ ಬನ್ನಿ ಪಡೆದು ಬಂಗಾರದಂಗ ಇರೋಣ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.

ಇದಲ್ಲದೇ ಕಳೆದ ದಸರೆಯ ಮೊದಲ ದಿನದಿಂದಲೇ ಫೇಸ್‌ಬುಕ್‌, ಟ್ವೀಟರ್‌ ಹಾಗೂ ವ್ಯಾಟ್ಸ್‌ಆ್ಯಪ್‌, ಇನ್‌ ಸ್ಟ್ರಾಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲಿ ದಸರಾ ಹಬ್ಬ ಶುಭಾಶಯ ವಿನಿಮಯ, ನವಮಿ ಹಾಗೂ ದಶಮಿಗಳಂದು ನಿರೀಕ್ಷೆ ಮೀರಿ ಹರಿದಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next