ವಿಜಯಪುರ: ಒಂದೆಡೆ ಸರ್ಕಾರ ಲಕ್ಷಾಂತರ ರಿಯಾಯ್ತಿ ಹಣದಲ್ಲಿ ನಿರುದ್ಯೋಗಿಗಳಿಗೆ ಕೊಡಿಸಿದ ಕಾರುಗಳು ಪ್ರವಾಸಿಗರ ಅನುಕೂಲಕ್ಕೆ ಇಲ್ಲವಾಗಿದೆ. ಇತ್ತ ಸರ್ಕಾರ ಕೇವಲ 100 ರೂ. ದರದಲ್ಲಿ ಮಾರ್ಗದರ್ಶಿ (ಗೈಡ್) ಸಮೇತ ಐತಿಹಾಸಿಕ ವಿಜಯಪುರ ಪ್ರವಾಸಿಗರಿಗೆ ನಗರ ದರ್ಶನ ಮಾಡಿಸಲು ನೀಡಿದ್ದ ಬಸ್ ಸೌಲಭ್ಯನ್ನು ಕೊಟ್ಟು ಕಿತ್ತುಕೊಂಡಿದೆ.
Advertisement
ಮಿನಿ ಬಸ್ ಸೇವೆ ವಿಜಯಪುರ ಜಿಲ್ಲೆಯ ಲೆಕ್ಕದ್ದಲ್ಲಿದ್ದರೂ ಸೇವೆ ಮಾತ್ರ ಬೆಂಗಳೂರಿನಲ್ಲಿದೆ. ವಿಜಯಪುರ ಜಿಲ್ಲೆಗೆ ಮಾತ್ರ ಈ ಅನ್ಯಾಯವಾಗಿಲ್ಲ, ಉತ್ತರ ಕರ್ನಾಟಕದ ಪ್ರಮುಖ 3 ಐತಿಹಾಸಿಕ ಪ್ರವಾಸಿ ತಾಣಗಳ ಬಸ್‌ಗಳು ಕೂಡ ಬೆಂಗಳೂರು ಪಾಲಾಗಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳ ಮಲತಾಯಿ ಧೋರಣೆಯಿಂದ ಉತ್ತರ ಕರ್ನಾಟಕಕ್ಕೆ ಪ್ರವಾಸೋದ್ಯಮ ನಲುಗುವಂತಾಗಿದೆ.
Related Articles
Advertisement
150 ರೂ. ದರದಲ್ಲಿ ಸದರಿ ಬಸ್ ಸೇವೆ ಮೂಲಕ ನಗರದ ಐತಿಹಾಸಿಕ ಪ್ರಮುಖ ತಾಣಗಳ ವೀಕ್ಷಣೆಗೆ ಅವಕಾಶ ಇದೆ. ಪ್ರವಾಸಿಗರಿಗೆ ಹೊರೆ ಎಂಬ ಕಾರಣಕ್ಕೆ ದರವನ್ನು 100 ರೂ.ಗೆ ಇಳಿಸಿದ್ದರಿಂದ ವಿಜಯಪುರ ನಗರದ ದರ್ಶನ ಪ್ರವಾಸಿ ಬಸ್ ಸೇವೆಗಂತೂ ಹೆಚ್ಚಿನ ಬೇಡಿಕೆ ಬಂದಿತ್ತು. ಸದರಿ ಬಸ್‌ನಲ್ಲಿ ಪ್ರವಾಸಿಗರಿಗೆ ಆಯಾ ಸ್ಥಳಗಳ ಹಿನ್ನೆಲೆ ವಿವರಿಸಲು ಓರ್ವ ಮಾರ್ಗದರ್ಶಿಯ ವ್ಯವಸ್ಥೆಯೂ ಇದೆ. ಆದರೆ ಬೆಂಗಳೂರು ಮೂಲದ ಚಾಲಕರನ್ನು ಇಲಾಖೆ ಹಾಗೂ ಹೊರ ಗುತ್ತಿಗೆ ನೀಡಿ ಸೇವೆಗೆ ಪಡೆಯುತ್ತಿರುವ ಕಾರಣ ವಿಜಯಪುರ ಜಿಲ್ಲೆಯಲ್ಲಿ ವಾಸಕ್ಕೆ ಅವರು ಮಾನಸಿಕವಾಗಿ ಸಿದ್ಧರಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ನಿಗಮದ ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಿ ಉತ್ತರ ಕರ್ನಾಟಕ ಭಾಗದಿಂದ ಬಸ್ ಸಮೇತ ಬೆಂಗಳೂರಿಗೆ ಸೌಲಭ್ಯವನ್ನು ಹೊತ್ತೂಯ್ಯುತ್ತಿದ್ದಾರೆ.
ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಇಬ್ಬರು ಚಾಲಕರು ಬೆಂಗಳೂರು ಬಟ್ಟು ಬಾರದ ಕಾರಣ ಸ್ಥಾನಿಕವಾಗಿ ನಿತ್ಯವೂ 300 ರೂ. ಸಂಬಳದ ಆಧಾರದಲ್ಲಿ ಓರ್ವ ಚಾಲಕನ ಸೇವೆಯನ್ನೂ ಪಡೆಯಲಾಗಿತ್ತು. ಈ ಚಾಲಕರು ಗಟ್ಟಿಗೊಂಡರೆ ತಮ್ಮ ಸೇವೆಗೆ ಸಂಚಕಾರ ಎಂಬ ಕಾರಣಕ್ಕೆ ಬೆಂಗಳೂರು ಮೂಲದ ಚಾಲಕರು ನಿರಂತರ ಲಾಬಿ ಮಾಡಿ ಮಿನಿ ಬಸ್‌ನ್ನು ಬೆಂಗಳೂರಿಗೆ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೂಂದೆಡೆ ಸದರಿ ಬಸ್‌ನಲ್ಲಿ ಮಾರ್ಗದರ್ಶಿ (ಗೈಡ್) ಕೆಲಸ ಮಾಡುವ ಇಲಾಖೆಯ ಕಾಯಂ ಸಿಬ್ಬಂದಿಯನ್ನು ಉದ್ದೇಶ ಪೂರ್ವಕವಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಮಿನಿ ಬಸ್ ಸೇವೆಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದರಿಂದ ತಾತ್ಕಾಲಿಕವಾಗಿ 13 ಸಾವಿರ ರೂ. ಮಾಸಿಕ ವೇತನಕ್ಕೆ ಸೇವೆ ನೀಡುತ್ತಿದ್ದ ಮಾರ್ಗದರ್ಶಿ ಬೆಂಗಳೂರಿನ ಅಧಿಕ ವೆಚ್ಚದ ಜೀವನ ನಿರ್ವಹಣೆ ಮಾಡದೇ ಕೆಲಸ ಬಿಟ್ಟು, ಗೋಲಗುಂಬಜ್ ಆವರಣದಲ್ಲಿ ಖಾಸಗಿ ಗೈಡ್ ಜೀವನ ನಡೆಸುವಂತಾಗಿದೆ.
ಮಿನಿ ಬಸ್ ವಿಜಯಪುರ ಜಿಲ್ಲೆಯಿಂದ ಎತ್ತಂಗಡಿಯಾಗಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಮಯೂರ ಹೋಟೆಲ್ ಸಿಬ್ಬಂದಿ ಪಾತ್ರವೂ ಇದೆ. ಮಾರ್ಗದರ್ಶಿಗಳು ಸ್ಥಳೀಯರಾದ್ದರಿಂದ ಸದರಿ ಮಿನಿ ಬಸ್ ಸೇವೆ ಇದ್ದರೆ ಹಿಡಿತ ಸಾಧಿಸುತ್ತಾರೆ. ಇರುವ ವ್ಯವಸ್ಥೆಯಲ್ಲಿ ನೆಮ್ಮದಿಯಾಗಿದ್ದು, ಮಿನಿ ಬಸ್ ಇದ್ದರೆ ಹೋಟೆಲ್ಗೆ ಬರುವ ಪ್ರವಾಸಿಗರಿಂದ ಒತ್ತಡವೂ ಹೆಚ್ಚುತ್ತದೆ. ಬಸ್ ಸೇವೆಯ ಲೆಕ್ಕ ನಿರ್ವಹಣೆ ಹೊರೆಯೂ ಬೀಳುತ್ತದೆ. ಇದರಿಂದ ಮುಕ್ತಿ ಪಡೆಯಲೆಂದೇ ಬೆಂಗಳೂರು ಮೂಲದ ಚಾಲಕರಿಂದ ಲಾಬಿ ಮಾಡಿಸಿ ವಿಜಯಪುರ ಸೌಲಭ್ಯವನ್ನು ಸೀಸನ್ ನೆಪದಲ್ಲಿ ಪದೇ ಪದೇ ಬೆಂಗಳೂರಿಗೆ ವರ್ಗಾಯಿಸಿಕೊಳ್ಳುವ ಹುನ್ನಾರ ಮಾಡಲಾಗುತ್ತಿದೆ.
ಆದರೆ ಪ್ರತಿ ನಿತ್ಯವೂ ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ವಿಜಯಪುರ ಮಾತ್ರವಲ್ಲ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ, ರಾಕ್ ಗಾರ್ಡನ್, ಬೋಟಿಂಗ್, ಸಂಗೀರ ಕಾರಂಜಿಗಳು, ಆದಿಲ್ ಶಾಹಿ ಅರಸರ ಕುಮಟಗಿ ಬಳಿಯ ಬೇಸಿಗೆ ಅರಮನೆ, 12ನೇ ಶತಮಾನದ ಕ್ರಾಂತಿ ಪುರುಷ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ, ಐಕ್ಯಭೂಮಿ ಕೂಡಲಸಂಗಮ, ಬಸವೇಶ್ವರರ ಪತ್ನಿ ನೀಲಮ್ಮ ಅವರ ಐಕ್ಯ ಮಂಟಪ ಇರುವ ತಂಗಡಗಿ ನುಲಿಯ ಚಂದಯ್ಯ ಶರಣರ ಶಿವಗಣಿ, ಮಡಿವಾಳ ಮಾಚಿದೇವರ ದೇವರಹಿಪ್ಪರಗಿ ಹೀಗೆ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ನವ ಆವಿಷ್ಕಾರಗಳ ಹಲವು ತಾಣಗಳಿಗೂ ಪ್ರವಾಸಿಗರು ಬರುತ್ತಾರೆ. ಆದರೆ ಸುಲಭವಾಗಿ ಹೋಗಿ ಬರಲು ಸಾರಿಗೆ ಸೌಲಭ್ಯ ಕಲ್ಪಿಸಿಲ್ಲ ಎಂಬ ಕಾರಣಕ್ಕೆ ತಮ್ಮ ಉದ್ದೇಶಿತ ಪ್ರವಾಸ ಕೈ ಬಿಡುತ್ತಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನಡೆ ಕಾರಣವಾಗುತ್ತಿದೆ.
ಸೆಪ್ಟೆಂಬರ್, ನವೆಂಬರ್ ಹಾಗೂ ಬೇಸಿಗೆ ಸಂದರ್ಭದಲ್ಲಿ ವಿಜಯಪುರ, ಬಾದಾಮಿ, ಹಂಪಿ ಸೇರಿದಂತೆ ಉತ್ತರ ಕರ್ನಾಟಕಕ್ಕೆ ದೇಶ-ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಡಿ ನೀಡುತ್ತಾರೆ. ಇಂಥ ಒತ್ತಡದ ಸಂದರ್ಭದಲ್ಲಿ ಈ ಭಾಗಕ್ಕೆ ಪ್ರವಾಸಿಗರ ಒತ್ತಡ ನೀಗಲು ಪ್ರವಾಸಿಗರಿಗೆ ಹೆಚ್ಚುವರಿ ಬಸ್ ಸೇವೆ ನೀಡಿಲ್ಲ. ಸೀಸನ್ ಹೆಸರಿನಲ್ಲಿ ವಿಜಯಪುರ ಸೇರಿದಂತೆ ಉತ್ತರ ಕರ್ನಾಟದಕ ಪ್ರವಾಸಿ ಬಸ್‌ಗಳ ಸೇವೆಯನ್ನು ಕಿತ್ತುಕೊಂಡಿರುವ ಪ್ರವಾಸೋದ್ಯಮ ನಿಗಮದ ಅಧಿಕಾರಿಗಳು, ಒಂದೇ ಒಂದು ಬಾರಿ ಬೆಂಗಳೂರು ಭಾಗದ ಬಸ್‌ಗಳನ್ನು ಸೀಸನ್ ಹೆಸರಿನಲ್ಲಿ ಉತ್ತರ ಕರ್ನಾಟಕಕ್ಕೆ ಕಳಿಸಿಲ್ಲ. ಉತ್ತರ ಕರ್ನಾಟಕದ ಪ್ರವಾಸೋದ್ಯಮವನ್ನು ಹಾಳು ಮಾಡುವ ಇಂಥ ಹುನ್ನಾರ ವ್ಯವಸ್ಥಿತವಾಗಿಯೇ ನಡೆಯುತ್ತಿರುವುದು ಕಣ್ಣಿಗೆ ರಾಚುತ್ತಿದೆ.
ಪ್ರವಾಸೋದ್ಯಮ ವಿಷಯವಾಗಿ ರಾಜಕೀಯ ನಾಯಕರು, ಜನ ಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಗಳು ವೇದಿಕೆಗಳಲ್ಲಿ, ಸಭೆಗಳಲ್ಲಿ ಭಾಷಣ ಮಾಡುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಪದೇ ಪದೇ ಹಲವು ಯೋಜನೆಗಳನ್ನು ರೂಪಿಸುತ್ತಾರೆ. ಆದರೆ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸರ್ಕಾರ ಕಡಿಮೆ ವೆಚ್ಚೆದಲ್ಲಿ ಕಲ್ಪಿಸಿರುವ ನಗರ-ಸ್ಮಾರಕ ದರ್ಶನದ ಸುಲಭ ಸೌಲಭ್ಯ ಕಿತ್ತುಕೊಂಡಿರುವ ಕುರಿತು ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ.
ವಿಜಯಪುರದ ಪ್ರವಾಸಿ ಮಿನಿ ಬಸ್ ಬೆಂಗಳೂರಿನಿಂದ ಕಳೆದ ಫೆಬ್ರವರಿ 1ರಂದು ಮರಳಿತ್ತು. ಆದರೆ ಸೀಸನ್ ಇರುವ ಕಾರಣ ನಿಮಗದ ಅಧಿಕಾರಿಗಳ ಸೂಚನೆ ಮೇರೆಗೆ ಕಳೆದ ಮೇ 1ರಂದು ಮರಳಿ ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಮಿನಿ ಬಸ್ ನಮ್ಮಲ್ಲಿ ಪ್ರವಾಸಿಗರಿಗೆ ಉತ್ತಮ ಸೇವೆ ನೀಡಿದ್ದು, ಉತ್ತಮ ಜಾಗೃತೆ ಕಾರಣ ಪ್ರವಾಸಿಗರಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ ನಿಗಮದ ಮೇಲಧಿಕಾರಿಗಳ ಸೂಚನೆ ಮೇರೆಗೆ ಮಿನಿ ಬಸ್‌ನ್ನು ಬೆಂಗಳೂರಿಗೆ ಕಳಿಸಿದ್ದೇವೆ. ಈ ಹಿಂದೆ ಬಸ್ ಯಾವಾಗ ಬಂದಿತ್ತು, ಯಾವಾಗ ಹೋಗಿದೆ ಎಂಬುದು ನನ್ನ ಗಮನಕ್ಕಿಲ್ಲ.•ರಮೇಶಕುಮಾರ ಸಹಾಯಕ ವ್ಯವಸ್ಥಾಪಕರು,
ಹೊಟೇಲ್ ಮಯೂರ ಆದಿಲ್ ಶಾಹಿ ಅನೇಕ್ಸ್ ಕ.ರಾ.ಪ್ರ.ಅ. ನಿಮಗ-ವಿಜಯಪುರ ವಿಜಯಪುರ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ನೀಡಿರುವ ಪ್ರವಾಸಿ ಬಸ್ ಸೇವೆಯನ್ನು ವಿವಿಧ ಶಕ್ತಿ-ಲಾಬಿಗಳು ಬೆಂಗಳೂರಿಗೆ ಮರಳುವಂತೆ ಮಾಡಿವೆ. 13 ಸಾವಿರ ರೂ. ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಮಾಡಲಾಗದೇ ನಾನು ಪ್ರವಾಸಿ ಮಿನಿ ಬಸ್ ಮಾರ್ಗದರ್ಶಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಉದ್ಯೋಗವನ್ನೇ ನಂಬಿ ಮದುವೆಯಾಗಿರುವ ನನಗೆ ಬದುಕಿನ ಅನಿವಾರ್ಯಕ್ಕಾಗಿ ಗೋಲಗುಂಬಜ್ ಸ್ಥಳದಲ್ಲಿ ಖಾಸಗಿ ಮಾರ್ಗದರ್ಶಿಯಾಗಿ ಸೇವೆ ನೀಡುತ್ತಿದ್ದೇನೆ. ಜಿಲ್ಲೆಗೆ ದಕ್ಕಿರುವ ಸೌಲಭ್ಯ ಕಿತ್ತುಕೊಂಡಿರುವ ಕುರಿತು ಸಂಬಂಧಿಸಿದವರು ಗಮನ ಹರಿಸಬೇಕಿದೆ.
•ಸರದಾರ ಜಾಧವ ಪ್ರವಾಸಿ ಮಿನಿ ಬಸ್ ಮಾರ್ಗದರ್ಶಿ ,
ವಿಜಯಪುರ