Advertisement

”ಮಯೂರ”ಮದ್ಯವ್ಯಸನಿಗಳ ಕೇಂದ್ರ

11:07 AM Aug 09, 2019 | Naveen |

ವಿಜಯಪುರ: ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 70ರ ದಶಕದಲ್ಲಿ ಪ್ರವಾಸೋದ್ಯಮ ಇಲಾಖೆ ಹೊರತಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು. ದೇಶಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರಿಗೆ ಅತ್ಯುತ್ತಮ ಗುಣಮಟ್ಟದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿದ್ದ ಈ ಯೋಜನೆಯನ್ನು ದೇಶದ ಹಲವು ರಾಜಗಳಲ್ಲೂ ಆರಂಭಗೊಂಡಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಪ್ರವಾಸಿಗರ ಸೌಲಭ್ಯಕ್ಕೆ ಇರುವ ಸರ್ಕಾರಿ ಒಡೆದತನದ ರೆಸ್ಟೋರೆಂಟ್ ಸಹಿತದ ಹೊಟೇಲ್ ಮದ್ಯ ವ್ಯಸನಿಗಳ ತಾಣವಾಗುವ ಮೂಲಕ ಪ್ರವಾಸಿಗರಿಂದ ದೂರ ಉಳಿಯುವಂತಾಗಿದೆ.

Advertisement

ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯ ಆರಂಭಿಸಿದ್ದ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವಿದೇಶಿ ಪ್ರವಾಸಿಗರಿಗೆ ಹಲವು ಸೌಲಭ್ಯಗಳ ಸಹಿತ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿವೆ. ದೇಶದ ವಿವಿಧ ಕಡೆಗಳಲ್ಲಿ ಸಾಮ್ರಾಟ್ ಅಶೋಕ ಹೆಸರಿನಲ್ಲಿ ನಡೆಯುವ ತ್ರಿಸ್ಟಾರ್‌, ಫ್ಯೆವ್‌ ಸ್ಟಾರ್‌, ಸೆವೆನ್‌ ಸ್ಟಾರ್‌ ಹೆಸರಿನಲ್ಲಿ ಈ ಹೋಟೆಲ್ಗಳು ವಿದೇಶಿ ಪ್ರವಾಸಿಗರ ಮೆಚ್ಚುಗೆ ಗಳಿಸಿವೆ.

ಇದೆ ಮಾದರಿಯಲ್ಲೇ ದೇಶದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲೂ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಹೊರತಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿತು. ಸದರಿ ನಿಗಮದ ಅಡಿಯಲ್ಲಿ ಕನ್ನಡದ ಮೊದಲ ದೊರೆ ಮಯೂರನ ಹೆಸರಿನಲ್ಲಿ ರಾಜ್ಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೋಟೆಲ್ಗಳನ್ನು ತೆರೆದಿದೆ. ಅಲ್ಲದೇ ಮಯೂರ ರಾಜನ ಹೆಸರಿನೊಂದಿಗೆ ಅಯಾ ಜಿಲ್ಲೆಗಳನ್ನು ಕೇಂದ್ರವಾಗಿಸಿಕೊಂಡು ಆಡಳಿತ ನಡೆಸಿದ ರಾಜರು, ರಾಜ ಮನೆತಗಳ ಹೆಸರಿನೊಂದಿಗೆ ಹೋಟೆಲ್ಗಳಿವೆ. ವಿಜಯಪುರ ನಗರದ ಸ್ಟೇಶನ್‌ ರಸ್ತೆಯಲ್ಲಿ ಹೋಟೆಲ್ ಮಯೂರ ಆದಿಲ್ ಶಾಹಿ ಅನೇಕ್ಸ್‌ ಹೆಸರನ್ನು ಇರಿಸಲಾಗಿದೆ.

ಸದರಿ ಹೋಟೆಲ್ಗಳಲ್ಲಿ ಅಯಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಸಮಸ್ಯೆ ಆಗದಂತೆ ಹಾಗೂ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ದೊರೆಯುವಂತೆ ಲಾಡ್ಜಿಂಜ್‌ ವ್ಯವಸ್ಥೆ, ಅತ್ಯುತ್ತಮ ಗುಣಮಟ್ಟದ ಊಟ, ಉಪಾಹಾರ ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರವಾಸಿಗರು ಎಂದ ಮೇಲೆ ಮೋಜಿಗಾಗಿ ಬಂದಿರುತ್ತಾರೆ ಎಂಬ ಕಾರಣಕ್ಕೆ ಇಂತ ಹೋಟೆಲ್ಗಳಲ್ಲಿ ರೆಸ್ಟೋರೆಂಟ್ ವ್ಯವಸ್ಥೆ ಕಲ್ಪಿಸಿದ್ದು, ಮದ್ಯಗಳಲ್ಲಿ ಬಿಯರ್‌ ಪೂರೈಕೆಗೆ ಅವಕಾಶ ಕಲ್ಪಿಸಿದೆ. ಆದರೆ ಯಾವುದೇ ಕಾರಣಕ್ಕೂ ಬಿಯರ್‌ ಹೊರತಾದ ಮದ್ಯದ ಸೇವೆ ಹಾಗೂ ಸೇವನೆಗೆ ಅವಕಾಶ ನೀಡುವಂತಿಲ್ಲ ಎಂಬ ನಿಬಂಧನೆಗಳೂ ಇವೆ.

ಆದರೆ ವಿಜಯಪುರ ನಗರದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಮಯೂರ ಅದಿಲ್ ಶಾಹಿ ಲಾಡ್ಜಿಂಗ್‌-ರೆಸ್ಟೋರೆಂಟ್‌ನಲ್ಲಿ ಯಾವುದೇ ನಿಬಂಧನೆಗಳನ್ನು ಪಾಲಿಸಿತ್ತಿಲ್ಲ. ಬಿಯರ್‌ ಪೂರೈಕೆಗೆ ಅವಕಾಶ ಇದೆ ಎಂಬುದನ್ನೇ ನೆಪ ಮಾಡಿಕೊಂಡ ಇಲ್ಲಿನ ಅಧಿಕಾರಿ-ಸಿಬ್ಬಂದಿ ಬಿಯರ್‌ ಹೊರತಾಗಿ ವಿಸ್ಕಿ, ರಮ್‌ನಂಥ ನಸೆಯುಕ್ತ ಮದ್ಯ ಪೂರೈಕೆಗೂ ಮುಂದಾಗುತ್ತಿದೆ. ಇದರಿಂದಾಗಿ ಈ ರೆಸ್ಟೋರೆಂಟ್ ಪ್ರವಾಸಿಗರಿಗಿಂತ ಸ್ಥಳೀಯ ಗ್ರಾಹಕರಿಗೆ ಹೆಚ್ಚು ಅಚ್ಚುಮೆಚ್ಚಾಗಿದೆ.

Advertisement

ನಿಯಮ ಹಾಗೂ ನಿಬಂಧನೆಗಳನ್ನು ಮೀರಿ ಮಯೂರ್‌ ಹೋಟೆಲ್ನಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದರಿಂದ ಅಬಕಾರಿ ಅಧಿಕಾರಿಗಳು ಹಲವು ತಿಂಗಳ ಹಿಂದೆ ದಾಳಿ ನಡೆಸಿದ್ದರು. ಈ ವೇಳೆ ಬಿಯರ್‌ ಹೊರತಾದ ಮದ್ಯ ದೊರೆತ ಕಾರಣ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ ಜಿಲ್ಲೆಯ ಘನತೆಗೆ ಧಕ್ಕೆ ಬರುತ್ತದೆ, ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿದ್ದರು. ಪರಿಣಾಮ ಅಧಿಕಾರಿಗಳು ಬಿಯರ್‌ ಹೊರತಾದ ಮದ್ಯ ಮಾರಾಟದ ವ್ಯವಸ್ಥೆ ಇಲ್ಲ ಎಂಬ ಫ‌ಲಕ ಅಳವಡಿಸಿಲ್ಲ ಎಂಬ ದೂರನ್ನು ಮಾತ್ರ ದಾಖಲಿಸಿಕೊಂಡು, ರಾಜ್ಯ ಸರ್ಕಾರಿ ಒಡೆತನದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ದಂಡ ವಿಧಿಸಿದ್ದರು ಎಂದು ನಿಗಮದ ಮೂಲಗಳೇ ಹೇಳುತ್ತವೆ. ಇದರೊಂದಿಗೆ ಸರ್ಕಾರಿ ಒಡೆತನದ ಪ್ರವಾಸಿಗರ ಅತ್ಯುತ್ತಮ ಗುಣಮಟ್ಟದ ಸೇವೆ ಕಲ್ಪಿಸುವ ಹೊಟೇಲ್ ಮದ್ಯ ವ್ಯಸನಿಗಳ ತಾಣವಾಗುತ್ತಿದೆ.

ಇನ್ನು ಪ್ರವಾಸಿಗರಿಗೆ ಅತ್ಯುತ್ತಮ ಗುಣಮಟ್ಟದ ಊಟ-ಉಪಾಹಾರ ಸೇವೆ ಕಲ್ಪಿಸುವ ವಿಷಯಕ್ಕೆ ಬಂದರೆ ನಿಜಕ್ಕೂ ಪ್ರವಾಸಿಗರು ಬೆಚ್ಚಿ ಬೀಳುವಂತೆ ಇಲ್ಲಿನ ಸಿಬ್ಬಂದಿ ವರ್ತಿಸುತ್ತಾರೆ. ಪ್ರಾದೇಶಿಕವಾಗಿ ದೊರೆಯುವ ಹಾಗೂ ಗ್ರಾಹಕರ ಇಷ್ಟಾರ್ಥದಂತೆ ಉಪಾಹಾರ ನೀಡುವುದಿಲ್ಲ. ಊಟದ ವಿಷಯದಲ್ಲೂ ಇದೇ ಸ್ಥಿತಿ. ಗುಣಮಟ್ಟದ ವಿಷಯದಲ್ಲಿ ಈ ಹೋಟೆಲ್ನಲ್ಲಿ ಆಹಾರ ಸೇವಿಸಿದರಿಗೆ ಗೊತ್ತು. ತಾಜಾತನವಿಲ್ಲ ಹಾಗೂ ನೆಪಕ್ಕ ಎಂಬಂತೆ ಸೇವೆ ನೀಡುವುದು. ಬೆಳಿಗ್ಗೆ ಮಾಡಿದ ಉಪಹಾರ-ಊಟವನ್ನೇ ಬಿಸಿ ಮಾಡಿಕೊಡುವ ಸಿಬ್ಬಂದಿ, ಹೀಗೇಕೆ ಎಂದು ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ. ನಮ್ಮಲ್ಲಿ ಇರುವುದು ಇಂಥದ್ದು ಮಾತ್ರ, ಇದರ ಹೊರತಾಗಿ ಕೇಳಿದರೆ ನಮ್ಮಲ್ಲಿ ಸಿಗುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಳಿಸುತ್ತಾರೆ.

ವಸತಿ ವಿಷಯಕ್ಕೆ ಬಂದರೆ ಸ್ವಚ್ಛತೆಗೆ ಇಲ್ಲಿ ಅದ್ಯತೆ ಇಲ್ಲ. ಸರ್ಕಾರಿ ಒಡೆತನದ ನಿಗದಲ್ಲಿ ಸಿಬ್ಬಂದಿಗಳೇ ಹೇಗೆಂದರೆ ಹಾಗೆ ಕೇಶ ವಿನ್ಯಾಸ ಮಾಡಿಸಿಕೊಳ್ಳುವುದು, ಹಲವರು ಕೇಶಸ್ವಚ್ಛತೆ ಇಲ್ಲದೇ, ಕ್ಯೆಗಳಲ್ಲಿನ ಉಗುರನ್ನು ತೆಗೆಯದೇ ಉದ್ದುದ್ದ ಬಿಡುವುದು, ಸಮವಸ್ತ್ರ ಇಲ್ಲದೇ ಮನಬಂದ ಹಾಗೂ ಮಾಸಿದ ಬಟ್ಟೆ ಧರಿಸುವ ಕಾರಣ ಸಿಬ್ಬಂದಿ ಎಂದು ಗುರುತಿಸುವುದು ಕೂಡ ಕಷ್ಟವಾಗುತ್ತಿದೆ. ಹೀಗೆ ಶಿಸ್ತು ಹಾಗೂ ಸೌಜನ್ಯ ವರ್ತನೆ ತೋರದಂತೆ ಸರ್ಕಾರಿ ಸೇವಾ ಸೌಲಭ್ಯ ನೀಡುವ ಸಿಬ್ಬಂದಿ ನಡೆದುಕೊಳ್ಳುತ್ತಾರೆ.

ಸರ್ಕಾರಿ ವ್ಯವಸ್ಥೆಯ ಈ ದುಸ್ಥಿತಿಯಿಂದಾಗಿ ವಿಜಯಪುರ ಜಿಲ್ಲೆಗೆ ಬರುವ ಪ್ರವಾಸಿಗರು ಅದರಲ್ಲೂ ಮಹಿಳೆಯರು, ಮಕ್ಕಳು ಮುಕ್ತವಾಗಿ ಇರಲು ಯೋಗ್ಯವಿಲ್ಲದ ದುಸ್ಥಿತಿ ಇದೆ. ಸಭ್ಯರು ಹಾಗೂ ಮಹಿಳೆಯರು ಮುಜುಗುರ ಪಡುವ ಇಲ್ಲಿನ ಸೇವೆಯ ಪರಿಣಾಮ ಪ್ರವಾಸಿಗರು ಖಾಸಗಿ ಹೊಟೇಲ್ಗಳತ್ತ ಮುಖ ಮಾಡುತ್ತಿದ್ದಾರೆ. ಅಂತಿಮವಾಗಿ ಪ್ರವಾಸಿಗರಿಗೆ ಸರ್ಕಾರಿ ಸೌಲಭ್ಯ ಸಕ್ಕದೇ, ಕೆಲವೇ ಕೆಲವು ಖಾಸಗಿ ಹೋಟೆಲ್ಗಳು ಸಮ್ರದ್ದವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.

ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಈ ಹೋಟೆಲ್ ಮೇಲುಸ್ತುವಾರಿ ಇರುವ ಜಿಲ್ಲಾಧಿಕಾರಿಗಳು ಇತ್ತ ಚಿತ್ತ ನೆಡಬೇಕಿದೆ. ಪ್ರವಾಸೋದ್ಯಮ ನಿಗಮ ಸ್ಥಾಪನೆಯ ಮೂಲ ಉದ್ದೇಶ ಹಾಗೂ ಅಶಯ ಈಡೇರಿ ಹೊರಗಿನಿಂದ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಗುಣಮಟ್ಟದ ವಸತಿ-ಊಟದ ವ್ಯವಸ್ಥೆಯ ಸೌಲಭ್ಯ ತಲುಪಿಸಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next