Advertisement

ಸರ್ಕಾರಿ ಹೋಟೆಲ್‌ನಲ್ಲಿ ಮದ್ಯ ಸೇವೆ

12:30 PM Dec 02, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ:
ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿ ಅಪರೂಪದ ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ನಲ್ಲಿ ಅಕ್ರಮವಾಗಿ ನಿರ್ಬಂಧಿತ ಮದ್ಯ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೇ ಸಾಗಿದೆ.

Advertisement

ಮತ್ತೊಂದೆಡೆ ಸದರಿ ಹೋಟೆಲ್‌ನಲ್ಲಿ ತಂಗುವ ಹಾಗೂ ಹೋಟೆಲ್‌ಗೆ ಬರುವ ಸಭ್ಯ ಗ್ರಾಹಕರೊಂದಿಗೆ ಮದ್ಯ ವ್ಯಸನಿಗಳು ಅಸಭ್ಯ ವರ್ತನೆ ಮಾಡಿದರೂ ಹೋಟೆಲ್‌ ಸಿಬ್ಬಂದಿ ನೆರವಿಗೆ ಬಾರದಷ್ಟು ಸರ್ಕಾರಿ ಹೋಟೆಲ್‌ ಅವ್ಯವಸ್ಥೆಯ ಪರಿಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರವೇ ಊಟ-ವಸತಿಗಾಗಿ ಹೋಟೆಲ್‌ ತೆರೆದಿದೆ. ಹೀಗೆ ತೆರೆದ ಹೋಟೆಲ್‌ಗ‌ಳಿಗೆ ಕನ್ನಡದ ಮೊದಲ ಚಕ್ರವರ್ತಿ ಮಯೂರ ವರ್ಮನ ಸ್ಮರಣೆಗಾಗಿ ಮಯೂರ ಹೆಸರಿನೊಂದಿಗೆ ಆಯಾ ಜಿಲ್ಲೆಗಳನ್ನು ಕೇಂದ್ರವಾಗಿಸಿಕೊಂಡು ಆಡಳಿತ ನಡೆಸಿದ ರಾಜ ಮನೆತನಗಳ ಹೆಸರನ್ನು ಹೋಟೆಲ್‌ಗ‌ಳಿಗೆ ಇಡಲಾಗಿದೆ.

ವಿಜಯಪುರ ನಗರದಲ್ಲೂ ಬಸ್‌ ನಿಲ್ದಾಣ-ಸ್ಟೇಶನ್‌ ರಸ್ತೆ ಮಧ್ಯೆ ತೆರೆದಿರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ ಇದೆ. ಇದಕ್ಕೆ ವಿಶ್ವದ ಸಂಗೀತ-ಸಾಹಿತ್ಯಕ್ಕೆ ಅದರಲ್ಲೂ ಭಾವೈಕ್ಯತೆಗೆ ಹೆಚ್ಚಿನ ಒತ್ತು ನೀಡಿದ ಆದಿಲ್‌ ಶಾಹಿ ಅರಸು ಮನೆತನದ ಹೆಸರು ಸೇರಿಸಿ ಮಯೂರ ಆದಿಲ್‌ ಶಾಹಿ ಅನೆಕ್ಸ್‌ ಎಂಬ ಹೆಸರಿನ ಹೋಟೆಲ್‌ ತೆರೆದಿದೆ.

ಸರ್ಕಾರವೇ ನೇಮಿಸಿರುವ ಸಿಬ್ಬಂದಿ ಈ ಹೋಟೆಲ್‌ ನಿರ್ವಹಿಸುತ್ತಿದ್ದು ಮಾಸಿಕ ಸಂಬಳ ನೀಡಲಾಗುತ್ತದೆ. ಎರಡು ಹಾಸಿಗೆಯ ಹೋಟೆಲ್‌ ನಲ್ಲಿ ಪ್ರವಾಸಿಗರು ತಂಗಿದಾಗ ಊಟ-ಉಪಾಹಾರಕ್ಕೆ ಅನುಕೂಲಕ್ಕೆ ಸಸ್ಯ-ಹಾಗೂ ಮಾಂಸಹಾರದ ಊಟದ ವ್ಯವಸ್ಥೆ ಇದೆ. ಜೊತೆಗೆ ಮದ್ಯ ಸೇವನೆ ಮೋಜಿಗೆ ಬರುವ ಪ್ರವಾಸಿಗರ ಅನುಕೂಲಕ್ಕೆ ಬಾರ್‌ ಲೈಸೆನ್ಸ್‌ ಕೂಡ ನೀಡಿದ್ದರೂ, ಕೇವಲ ಶೇ. 8 ಅಲ್ಕೋಹಾಲಿಕ್‌ ಇರುವ ಬಿಯರ್‌ ಮಾತ್ರ ಪೂರೈಕೆಗೆ ಅವಕಾಶ ಕಲ್ಪಿಸಿದೆ. ಶೇ. 8ಕ್ಕಿಂತ ಹೆಚ್ಚಿನ ಆಲ್ಕೋಹಾಲಿಕ್‌ ಅಂಶ ಇರುವ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.

ಆದರೆ ಇಂಥ ಐತಿಹಾಸಿಕ ಮಯೂರ ಆದಿಲ್‌ ಶಾಹಿ ಎಂದು ರಾಜ್ಯದ ಎರಡು ಪ್ರಮುಖ ರಾಜ ಮನೆತನಗಳ ಹೆಸರು ಇರಿಸಿಕೊಂಡಿರುವ ಸರ್ಕಾರಿ ಒಡೆತನದ ಹೋಟೆಲ್‌ ಪ್ರವಾಸಿಗರಿಗಿಂತ ಮದ್ಯ ವ್ಯಸನಿಗಳಿಗೆ ಹೆಚ್ಚಿನ ಪ್ರಶಸ್ತ ತಾಣ ಎಂಬಂತಾಗಿದೆ.

Advertisement

ಸದರಿ ಹೋಟೆಲ್‌ನಲ್ಲಿ ಮದ್ಯ ಸೇವನೆ ನಿರ್ಬಂಧದ ಕುರಿತು ಗ್ರಾಹಕರಿಗೆ ಜಾಗೃತಿ ಫಲಕ ಹಾಕಲಾಗಿದೆ. ಅದರೆ ಸದರಿ ಫಲಕಗಳಲ್ಲಿ ಹೊರಗಿನಿಂದ ಮದ್ಯ ತಂದು ಸೇವಿಸುವಂತಿಲ್ಲ ಎಂದು ಬರೆದಿದೆಯೇ ಹೊರತು, ಶೇ. 8ಕ್ಕಿಂತ ಹೆಚ್ಚಿನ ಆಲ್ಕೋಹಾಲಿಕ್‌ ಮದ್ಯ ಸೇವೆನೆ ನಿರ್ಬಂಧ ಇದೆ ಎಂಬುದನ್ನು ಬರೆದಿಲ್ಲ. ಅಷ್ಟರ ಮಟ್ಟಿಗೆ ಇಂಥ ಜಾಗೃತಿ ಬರಹಗಳು ಜಾಣತನ ಪ್ರದರ್ಶಿಸುತ್ತಿವೆ. ಇದರ ಪಕ್ಕದಲ್ಲೇ ಧೂಮಪಾನ ನಿಷೇಧದ ಫಲಕ ಇದೆ. ಅದರೆ ಈ ಕುರಿತು ಗ್ರಾಹಕರಿಗೆ ಎಚ್ಚರಿಕೆ ನೀಡಿ, ಜಾಗೃತಿ ಮೂಡಿಸಬೇಕಾದ ನಿಗಮದ ಸಿಬ್ಬಂದಿಯೇ ಹೋಟೆಲ್‌ ತುಂಬೆಲ್ಲ ಧೂಮಪಾನ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಗ್ರಾಹಕರಿಗೆ ಇಲ್ಲಿನ ಹೋಟೆಲ್‌ ಫಲಕಗಳು ಅಣಕವಾಡುವಂತಾಗಿದೆ.

ಜಿಲ್ಲೆಯ ಪ್ರವಾಸೋದ್ಯಮ ಅವ್ಯವಸ್ಥೆ ಮೇಲೆ ಬೆಳಕು ಚೆಲ್ಲಲು ಉದಯವಾಣಿ ಪತ್ರಿಕೆ ಪ್ರವಾಸೋದ್ಯಮ ಕಥೆ-ವ್ಯಥೆ ಆರಂಭಿಸಿರುವ ಸರಣಿ ವಿಶೇಷ ಸರಣಿ ವರದಿಗಳ ಸಂದರ್ಭದಲ್ಲಿ ಆಗಸ್ಟ್‌ 9 ರಂದು ಮಯೂರ ಮದ್ಯ ವ್ಯಸನಿಗಳ ಕೇಂದ್ರ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ನಡೆದುಕೊಂಡ ಕಾರಣ ಹೋಟೆಲ್‌ನ ಕುಕ್‌, ವೇಟರ್‌ ಹಾಗೂ ಸಿಬ್ಬಂದಿ ಎಲ್ಲರ ಮೈ ಮೇಲೆ ಸಮವಸ್ತ್ರ ಬಂದಿತ್ತು. ಜೊತೆಗೆ ಹೋಟೆಲ್‌ ನ ಸಹಾಯಕ ವ್ಯವಸ್ಥಾಪಕರು ಸಿಬ್ಬಂದಿಗೆ ನೋಟಿಸ್‌ ನೀಡಿದ್ದರು.

ಈ ಶಿಸ್ತು ಕೆಲ ದಿನಗಳಲ್ಲಿ ಮಾಯವಾಗಿದ್ದು, ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ತಮಗೆ ಬಾರ್‌ ನಡೆಸಲು ಲೈಸೆನ್ಸ್‌ ಇದೆ ಎಂದು ಹೇಳಿಕೊಳ್ಳುವ ಈ ಹೋಟೆಲ್‌ ಅಧಿಕಾರಿ-ಸಿಬ್ಬಂದಿ ನಿರ್ಬಂಧಿ ತ ಮದ್ಯಪೂರೈಕೆ ಮಾಡುತ್ತಿದ್ದಾರೆ. ಪರಿಣಾಮ ಮದ್ಯ ವ್ಯಸನಿಗಳು ಹೋಟೆಲ್‌ಗೆ ಬರುವ ಸಭ್ಯ ಪ್ರವಾಸಿಗರು, ಸ್ಥಳೀಯ ಪ್ರವಾಸಿಗರೊಂದಿಗೆ ಅಸಭ್ಯ ವರ್ತನೆ ತೋರುವ ಹಂತಕ್ಕೆ ಸರ್ಕಾರಿ ಒಡೆತನದ ಪ್ರವಾಸಿಗರ ಅನುಕೂಲಕ್ಕಿರುವ ಹೋಟೆಲ್‌ ಬಂದು ತಲುಪಿದೆ.

ಈಚೆಗೆ ಓರ್ವ ಅಧಿಕಾರಿ ತಮ್ಮ ಸ್ನೇಹಿತರೊಂದಿಗೆ ರಾತ್ರಿ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಸದರಿ ಹೋಟೆಲ್‌ನಲ್ಲಿ ನಿರ್ಬಂಧಿತ ಮದ್ಯದ ಪೂರೈಕೆ ಹಾಗೂ ಸೇವನೆ ಎಗ್ಗಿಲ್ಲದೇ ಸಾಗಿತ್ತು. ಇದರಿಂದ ಬೇಸರಗೊಂಡ ಸದರಿ ಗ್ರಾಹಕ ಅಧಿಕಾರಿ ಹೋಟೆಲ್‌ ನಿಂದ ಹೊರಡಲು ಮುಂದಾಗಿದ್ದಾರೆ. ಇಷ್ಟಾದರೂ ಬಿಡದ ಮದ್ಯ ವ್ಯಸನಿಗಳು ಸದರಿ ಅಧಿಕಾರಿಯೊಂದಿಗೆ ಸುಖಾಸುಮ್ಮನೇ ಅಸಭ್ಯವಾಗಿ ವರ್ತಿಸಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಕುಡುಕರ ಸಹವಾಸ ಬೇಡ ಎಂದು ಹೋಟೆಲ್‌ ನಲ್ಲಿದ್ದ ಪ್ರವಾಸಿಗರು, ಇತರೆ ಗ್ರಾಹಕರು ಕೂಡಲೇ ಹೊರಗೆ ಹೋಗಿದ್ದಾರೆ.

ಪರಿಸ್ಥಿತಿ ಈ ಮಟ್ಟಕ್ಕೆ ಹೋದರೂ ಹೋಟೆಲ್‌ ವ್ಯವಸ್ಥಾಪಕರಾಗಲಿ, ಇತರೆ ಸಿಬ್ಬಂದಿಯಾಗಲಿ ಮದ್ಯ ವ್ಯಸನಿಯಿಂದ ಸಮಸ್ಯೆಗೆ ಸಿಲುಕಿದ ಗ್ರಾಹಕರ ನೆರವಿಗೆ ಬಂದಿಲ್ಲ. ಸರ್ಕಾರಿ ಒಡೆತನದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ನಲ್ಲಿ ಪ್ರವಾಸಿಗರಿಗೆ ವಿಶ್ವಾಸಾರ್ಹತೆ ಹಾಗೂ ಭದ್ರತೆ ಸಿಗ್ಗುತ್ತದೆ ಎಂಬ ನಂಬಿಕೆ ಹುಸಿಯಾಗಿದೆ. ಹೋಟೆಲ್‌ನ ಒಳಾವರಣದಲ್ಲಿ ಎಲ್ಲೆಂದರಲ್ಲಿ ನಿರ್ಬಂಧಿತ ಮದ್ಯ ಸೇವನೆ ಮಾಡಿ ಖಾಲಿ ಬಾಟಲಿಗಳನ್ನು ಬಿಸಾಕಿದ್ದು, ಸದರಿ ಹೋಟೆಲ್‌ ಸಭ್ಯರಿಗೆ ಸಲ್ಲದು ಎಂಬುದನ್ನು ಮನದಟ್ಟು ಮಾಡುತ್ತಿದೆ.

ಹೀಗೇಕೆ ಎಂದು ಹೋಟೆಲ್‌ನ ಸಹಾಯಕ ವ್ಯವಸ್ಥಾಪಕರನ್ನು ಕೇಳಿದರೆ, ನಮ್ಮ ಹೋಟೆಲ್‌ ಪ್ರವಾಸಿಗರಿಗೆ ಮಾತ್ರ ಇದ್ದು ಮೀಸಲು ಇಲ್ಲ. ನಮ್ಮ ಹೋಟೆಲ್‌ಗೆ ಸಾಮಾನ್ಯ ಗ್ರಾಹಕರು ಬರುವುದೇ ಇಲ್ಲ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿದ್ದರೆ ಸದರಿ ಹೋಟೆಲ್‌ನ್ನು ನಷ್ಟದಲ್ಲಿ ನಡೆಸಲು ಸರ್ಕಾರ ಒಪ್ಪದೇ ಹೋಟೆಲ್‌ನ್ನೇ ಮುಚ್ಚುವ ಸ್ಥಿತಿ ಬರುತ್ತದೆ. ಮತ್ತೂಂದೆಡೆ ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಹೆಚ್ಚಿನ ನಿರ್ಬಂಧ ಹೇರಿದರೆ ಮೇಲಧಿಕಾರಿಗಳಿಗೆ ದೂರು ನೀಡುತ್ತಾರೆ. ಪರಸ್ಥಳದಿಂದ ನೌಕರಿ ಮಾಡಲು ಬಂದಿರುವ ನಾನು ಸ್ಥಳೀಯರನ್ನು ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸರ್ಕಾರಿ ಒಡೆತನದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್‌ನಲ್ಲಿ ರಾತ್ರಿ ಮಾಡಿದ ಆಹಾರವನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿ, ಪ್ರವಾಸಿ ಗ್ರಾಹಕರಿಗೆ ಬೆಳಗ್ಗೆ ಬೇಯಿಸಿ ಕೊಟ್ಟ ದುರವಸ್ಥೆ ಕೆಲವೇ ದಿನಗಳ ಹಿಂದೆ ನೆರೆಯ ಬಾದಾಮಿ ಮಯೂರ ಚಾಲುಕ್ಯ ಹೋಟೆಲ್‌ನಿಂದಲೂ ಬೆಳಕಿಗೆ ಬಂದಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಇಲ್ಲಿನ ಮಯೂರ್‌ ಅದಿಲ್‌ ಶಾಹಿ ಹೋಟೆಲ್‌ನ ಸಿಬ್ಬಂದಿ ನಷ್ಟದ ನೆಪ ಮುಂದೊಡ್ಡಿಕೊಂಡು ಪ್ರವಾಸಿಗರಿಗೆ ಹಾಗೂ ಗ್ರಾಹಕರಿಗೆ ಮನಬಂದಂತೆ ಸಲ್ಲದ ಸೇವೆ ನೀಡಲು ಮುಂದಾಗುತ್ತಿದೆ.

ರಾಜ್ಯದ ತಮ್ಮ ಅಧೀನ ಮಯೂರ್‌ ಹೋಟೆಲ್‌ಗ‌ಳಲ್ಲಿ ನಡೆಯುತ್ತಿರುವ ಇಂತ ದುಸ್ಥಿತಿಯ ಪ್ರಕರಣಗಳು ಬೆಳಕಿಗೆ ಬಂದಲೂ ರಾಜ್ಯದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿ ಕಾರಿಗಳು ಎಚ್ಚೆತ್ತುಕೊಂಡಿಲ್ಲ. ವಿಜಪುರದ ಮಯೂರ್‌ ಆದಿಲ್‌ ಶಾಹಿ ಹೋಟೆಲ್‌ನಲ್ಲಿ ನಿಷೇಧಿತ ಮದ್ಯ ಪೂರೈಕೆ ಹಾಗೂ ಸೇವನೆಗೆ ಅವಕಾಶ ನೀಡಲಾಗಿದೆ. ಈ ಕುರಿತು ವಿಜಯಪುರ ಜಿಲ್ಲಾ ಧಿಕಾರಿಗಳು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ಇಷ್ಟಾದರೂ ಇಲ್ಲಿನ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ಅಚ್ಚರಿ ಮೂಡಿಸುವ ಜೊತೆಗೆ, ಪ್ರವಾಸಿಗರಿಗೆ ಸರ್ಕಾರಿ ಒಡೆತನದ ಹೋಟೆಲ್‌ ಕೂಡ ಸುರಕ್ಷಿತವಲ್ಲ ಎಂಬ ಸಂದೇಶ ರವಾನಿಸತೊಡಗಿದೆ.

ಮಯೂರ ಅದಿಲ್‌ ಶಾಹಿ ಹೋಟೆಲ್‌ನ ಪ್ರತಿ ಕ್ಷಣದ ಬೆಳವಣಿಗೆಯನ್ನು ಸೆರೆ ಹಿಡಿಯಲು ಹೋಟೆಲ್‌ನಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಇದ್ದರೂ ಇಂಥ ಅನರ್ಥಗಳು ಎಗ್ಗಿಲ್ಲದೇ ನಡೆಯುತ್ತಿದೆ. ಅಂದರೆ ಇಲ್ಲಿನ ಅಧಿಕಾರಿಗಳಿಗೆ ಲಾಭಕ್ಕಿಂತ ಸಭ್ಯ ಗ್ರಾಹಕರ ಹಿತವಾಗಲಿ, ಪ್ರವಾಸಿಗರ ಸುರಕ್ಷತೆಯಾಗಲಿ ಮುಖ್ಯವಾಗುತ್ತಿಲ್ಲ ಎಂಬನ್ನು ಇಲ್ಲಿನ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ. ಇನ್ನೂ ನಿಗಮದ ಅ ಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯದ ಐತಿಹಾಸಿಕ ಹಿರಿಮೆ ಸಾರುವ ರಾಜ ಮನೆತಗಳ ಹೆಸರಿನಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ಗ‌ಳು ರಾಜ್ಯದ ಪ್ರವಾಸೋದ್ಯಮಕ್ಕೆ, ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next