Advertisement
ಪ್ರವಾಸೋದ್ಯಮ ಇಲಾಖೆ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಕುರಿತು ದೇಶ-ವಿದೇಶಿಗರಿಗೆ ಆಯಾ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ಪ್ರಚಾರ ಫಲಕಗಳನ್ನು ಹಾಗೂ ಮಾರ್ಗಸೂಚಿ ಫಲಕಗಳನ್ನು ಅಳವಡಿಸುತ್ತದೆ. ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಯಾಣದ ಹಂತದಲ್ಲೇ ರಸ್ತೆಗಳ ಪಕ್ಕದಲ್ಲಿ ಮಾರ್ಗರ್ದನಕ್ಕಾಗಿ ಪ್ರಚಾರ ಫಲಕಗಳು ಇರುತ್ತವೆ. ಸಣ್ಣ ದೇವಸ್ಥಾನ ಇದ್ದರೂ ಪ್ರಯಾಣದಲ್ಲಿ ಅದರ ಅಂತರ, ಛಾಯಾಚಿತ್ರಗಳ ಸಮೇತ ಕನಿಷ್ಠ ಮಾಹಿತಿ ನೀಡುವ ಕೆಲಸವನ್ನಾದರೂ ಈ ಫಲಕಗಳು ಮಾಡುತ್ತವೆ.
Related Articles
Advertisement
ಇತಿಹಾಸದ ಪ್ರಜ್ಞೆ ಇರುವ ಪ್ರವಾಸಿಗರು ಹಾಗೂ ಹೀಗೂ ವಿಜಯಪುರ ನಗರಕ್ಕೆ ಬಂದರೆ ಎಲ್ಲೆಲ್ಲಿ ಯಾವ್ಯಾವ ಸ್ಮಾರಕಗಳಿವೆ, ಅಯಾ ಸ್ಥಳಗಳ ವಿಶೇಷ ಏನು, ಈ ಸ್ಮಾರಕಗಳಿಗೆ ಹೋಗುವ ಮಾರ್ಗ ಯಾವುದು ಎಂಬುದು ಸೇರಿದಂತೆ ಕನಿಷ್ಠ ಸಾಮಾನ್ಯ ಮಾಹಿತಿ ನೀಡುವ ಒಂದೇ ಒಂದು ಫಲಕಗಳು ಇಲ್ಲ. ಹೀಗಾಗಿ ಬಹುತೇಕ ಪ್ರವಾಸಿಗರು ಗೋಲ ಗುಮ್ಮಟ ನೋಡಲು ತೋರುವ ಆಸಕ್ತಿಯನ್ನು ಇತರೆ ಸ್ಮಾರಕಗಳ ವೀಕ್ಷಣೆಗೆ ತೋರುವುದಿಲ್ಲ. ಪ್ರವಾಸಿಗರು ಸ್ಮಾರಕಗಳ ಮುಂದೆ ಹೋಗಿ ನಿಂತರೂ ಪುರಾತತ್ವ ಇಲಾಖೆ ಇದು ಸಂರಕ್ಷಿತ ಸ್ಮಾರಕ ಎಂಬ ಕೆಲವು ಎಚ್ಚರಿಕೆ ಬರಹ ಬಿಟ್ಟರೆ ಇಡೀ ಸ್ಮಾರಕದ ಕುರಿತು ವಿವರಣೆ ನೀಡುವ ಯಾವುದೇ ಫಲಕಕಗಳು ಕಂಡು ಬರುವುದಿಲ್ಲ.
ಅಷ್ಟೇ ಏಕೆ ಗೋಲಗುಮ್ಮಟದಂತೆಯೇ ವಿಶಿಷ್ಟ ಇತಿಹಾಸ ಹೇಳುವ ಹಾಗೂ ಆಗ್ರಾ ಬಳಿ ತಾಜಮಹಲ್ ಎಂಬ ಸುಂದರ ಬಿಳಿತಾಜ್ ನಿರ್ಮಾಣಕ್ಕೆ ಪ್ರೇರಣೆಯಾದ ಕರಿ ತಾಜ್ ಎಂದೇ ಕರೆಸಿಕೊಳ್ಳುವ ಇಬ್ರಾಹಿಂ ರೋಜಾ ವೀಕ್ಷಣೆಗೆ ಪ್ರವಾಸಿಗರು ಹೋಗುವುದಿಲ್ಲ. ಗೋಲಗುಮ್ಮಟ, ಇಬ್ರಾಹೀಂ ರೋಜಾ ಸ್ಮಾರಕಗಳನ್ನು ಮೀರಿಸುವ ಅಪರೂಪದ 12 ಕಮಾನಿನ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ವಿಫಲವಾಗಿ ಅರ್ಧಕ್ಕೆ ನಿಂತಿರುವ ಬಾರಾ ಕಮಾನ್ ವೀಕ್ಷಣೆಗೆ ಬರುವುದಿಲ್ಲ. ಈ ಸ್ಮಾರಕ ವೀಕ್ಷಣೆಗೆ ಗೋಲಗುಮ್ಮಟ, ಇಬ್ರಾಹಿಂ ರೋಜಾ ಪ್ರವೇಶಕ್ಕೆ ಇರುವಂತೆ ಯಾವುದೇ ಪ್ರವಾಸಿಗರಿಗೆ ಶುಲ್ಕವೂ ಇಲ್ಲ. ಆದರೂ ಈ ಸ್ಮಾರಕ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ವಿರಳಾತಿ ವಿರಳ. ಕಾರಣ ಬಾರಾಕಮಾನ್ ಎಂಬ ಅಪರೂಪದ ಸ್ಮಾರಕ ಎಲ್ಲಿದೆ ಎಂದು ಹೇಳಲು ಪ್ರಚಾರ ಫಲಕಗಳು, ಮಾರ್ಗದರ್ಶಿ ಫಲಕಗಳು ಇಲ್ಲದಿರುವುದು.
ಪ್ರವಾಸೋದ್ಯಮ ಇಲಾಖೆ ವಿಜಯಪುರ ಜಿಲ್ಲೆಯನ್ನು ಸಂಪರ್ಕಿಸುವ ನೆರೆ ಜಿಲ್ಲೆ ಹಾಗೂ ರಾಜ್ಯಗಳ ರಸ್ತೆ ಹಾಗೂ ರೈಲು ಸಂಚಾರ ಮಾರ್ಗದಲ್ಲಿ ವಿಜಯಪುರ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಬೇಕು. ಹಂಪಿ, ಬಾದಾಮಿ, ಬೆಂಗಳೂರು, ಮಂಗಳೂರು, ಮೈಸೂರು ಮಾತ್ರವಲ್ಲ ಗೋವಾ, ಮುಂಬೈ ಸೇರಿದಂತೆ ದೇಶದ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸ್ಮಾರಕಗಳ ನಗರಿ ವಿಜಯಪುರ ವಿಶಿಷ್ಟ ವಾಸ್ತು ಶಿಲ್ಪ ಹಾಗೂ ಪಾರಂಪರಿಕ ಹಿನ್ನೆಲೆ ಕುರಿತು ವಿವರಿಸುವ ಹಾಗೂ ಸಮಗ್ರ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು-ಅಧಿಕಾರಿಗಳು ಇನ್ನಾದರೂ ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಪ್ರಚಾರ ಫಲಕಗಳನ್ನು ಅಳವಡಿಸುವ ಕೆಲಸ ಮಾಡಬೇಕಿದೆ.
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಇದ್ದೂ ಇಲ್ಲದಂತಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಯಾ ಸ್ಥಳಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಫಲಕಗಳು, ಅನ್ಯ ಜಿಲ್ಲೆ ಹಾಗೂ ಸ್ಥಳಗಳಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ಮಾರ್ಗಸೂಚಿ ಫಲಕಗಳಿಲ್ಲ. ಜಿಲ್ಲೆಯ ಪ್ರವೇಶ ಭಾಗದಲ್ಲಿ ಸ್ವಾಗತ ಕೋರುವ ಕಮಾನುಗಳಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಜಿಲ್ಲೆಯಲ್ಲಿರುವ ಪ್ರವಾಸಿ ಮಾಹಿತಿ ನೀಡಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗುತ್ತಿಲ್ಲ.•ಜಿ.ಗುರುರಾಜ ಗರಸಂಗಿ,
ಮುದ್ದೇಬಿಹಾಳ