ವಿಜಯಪುರ: ತುಕ್ಕು ಹಿಡಿದಿದ್ದ ವಿಜಯಪುರ ಪ್ರವಾಸೋದ್ಯಮಕ್ಕೆ ಕ್ರಿಯಾಶೀಲತೆಯ ಸ್ಪರ್ಶ ದೊರೆಯಲು ಆರಂಭಿಸಿದೆ. ನಗರಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರಿ ವಸತಿ ಸೇವೆ ಕಲ್ಪಿಸಲು ಮತ್ತೂಂದೆಡೆ ತಕ್ಷಣವೇ ಹೆಚ್ಚಿನ ವಸತಿ ಸೇವೆ ಕಲ್ಪಿಸಲು 23 ಕೋಣೆಗಳ ನವೀಕರಣ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಗರದಲ್ಲಿ ನಡೆಯುತ್ತಿರುವ ಆದಿಲ್ ಶಾಹಿ ಮಯೂರ್ ಹೋಟೆಲ್ ತ್ರಿಸ್ಟಾರ್ ರೂಪದಲ್ಲಿ ತಲೆ ಎತ್ತಲಿದೆ. ಪಾರಂಪರಿಕ ಸ್ಮರೂಪದ ವಾಸ್ತು ವಿನ್ಯಾಸದಲ್ಲಿ ರೂಪಿಸಿ 75 ಕೋಣೆಗಳ ಮಾದರಿ ಹೋಟೆಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
Advertisement
ವಿಜಯಪುರ ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಖಾಸಗಿ ಒಡೆತನದಲ್ಲಿ ಹಲವು ಊಟ-ವಸತಿ ಸಮೇತ ವ್ಯವಸ್ಥೆ ಇವೆ. ಇದರ ಹೊರತಾಗಿಯೂ ಸರ್ಕಾರ ಕರ್ನಾಟಕದ ಕನ್ನಡದ ಮೊದಲ ದೊರೆ ಮಯೂರ ಅವರ ಹೆಸರಿನಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಸ್ಥಾನಿಕ ರಾಜ ವಂಶಗಳ ಹೆಸರಿನಲ್ಲಿ ಊಟ-ವಸತಿ ಸಹಿತ ಸರ್ಕಾರಿ ವಸತಿ ಸೇವೆ ನೀಡುತ್ತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಇಂಥ ಹೋಟೆಲ್ ನಗರದಲ್ಲಿ ಹೋಟೆಲ್ ಮಯೂರ್ ಆದಿಲ್ ಶಾಹಿ ಹೆಸರಿನಲ್ಲಿ ಅನೆಕ್ಸ್ ಹೊಂದಿದೆ.
Related Articles
Advertisement
ಜೋಡಿ ಹಾಸಿಗೆಯ 75 ಕೋಣೆಗಳ ನಿರ್ಮಾಣಕ್ಕೆ 18 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ಸಿದ್ಧವಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಕಟ್ಟಡ ನವೀಕರಣದ ಬಳಿಕ ಸೇವೆಗೆ ಲಭ್ಯವಾಗುತ್ತಲೇ ಮಯೂರ್ ಆದಿಲ್ ಶಾಹಿ ಕಟ್ಟಡ ಕೆಡವಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಪಾರಂಪರಿಕ ತಾಣಗಳ ವಿನ್ಯಾಸ: ಸದರಿ ತ್ರಿಸ್ಟಾರ್ ಹೋಟೆಲ್‌ಗೆ ವಿಜಯಪುರ ಪಾರಂಪರಿಕ ಸ್ಮಾರಕದ ರೂಪ ನೀಡಲು ಯೋಜಿಸಲಾಗಿದೆ. ತ್ರಿಸ್ಟಾರ್ ಹೋಟೆಲ್ ಪ್ರವೇಶ ದ್ವಾರದಲ್ಲಿ ಗೋಲಗುಮ್ಮಟ ಮಾದರಿ ಕಮಾನು, ಒಳಾಂಗಣದಲ್ಲಿ ಇಬ್ರಾಹೀಂ ರೋಜಾ, ಬಾರಾಕಮಾನ್, ಆದಿಲ್ ಶಾಹಿ ಅರಸರಕುಮಟಗಿ ಬೇಸಿಗೆ ಅರಮನೆ ಸೇರಿದಂತೆ ಐತಿಹಾಸಿಕ ವಿವಿಧ ಸ್ಮಾರಕಗಳ ಮಾದರಿಯನ್ನು ಈ ಕಟ್ಟಡದಲ್ಲಿ ಅಳವಡಿಸಲು ಯೋಜಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ತಾವು ವಾಸ ಮಾಡುವ ವಾಸ್ತವ್ಯದ ನೆಲೆಯಲ್ಲೂ ಪಾರಂಪರಿಕ ಕಟ್ಟಡದಲ್ಲಿ ವಾಸ ಮಾಡಿದ ಅನುಭೂತಿ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಇದಲ್ಲದೇ ತ್ರಿಸ್ಟಾರ್ ನಿರ್ಮಾಣಕ್ಕೆ ಸ್ಥಾನಿಕವಾಗಿ ದೊರೆಯುವ ಕಲ್ಲು, ಇಟ್ಟಿಗೆಗಳಂಥ ಕಚ್ಚಾ ಸಾಮಗ್ರಿಗಳನ್ನೇ ಬಳಸಲು ತೀರ್ಮಾನಿಸಿರುವುದು ವಿಶೇಷ. ಈ ತ್ರಿಸ್ಟಾರ್ ಹೋಟೆಲ್‌ನಲ್ಲಿ ಐಷಾರಾಮಿ ಸೌಲಭ್ಯಗಳು, ವಿಶ್ವ ದರ್ಜೆ ಅಧುನಿಕ ಶೈಲಿಯ ಜೊತೆಗೆ ಸ್ಥಾನಿಕ ಪಾರಂಪರಿಕ ಪೀಠೊಪಕರಣಗಳು, ವಿಶಿಷ್ಟ ವಿನ್ಯಾಸದ ದಿರಿಸಿನ ಕೊಣೆ ಸಹಾಯಕರು, ಊಟ-ತಿಂಡಿ ಸರಬರಾಜು ಸೇವರಕರನ್ನು ನೇಮಿಸಲು ಕೂಡ ಯೋಜಿಸಲಾಗಿದೆ. ಪ್ರವಾಸಿಗರಿಗೆ ಹೆಚ್ಚಿನ ವಸತಿ ಸೌಲಭ್ಯ: ಸರ್ಕಾರಿ ಒಡೆತನದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಂದು ನವೀಕೃತ ಹಾಗೂ ಮತ್ತೊಂದು ನೂತನ ನಿರ್ಮಾಣದ ತ್ರಿಸ್ಟಾರ್ ಹೋಟೆಲ್‌ಗಳು ಲಭ್ಯವಾದಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ಪ್ರವಾಸಿಗರಿಗೆ ವಸತಿ ಸೌಲಭ್ಯದ ಕೊರತೆ ನೀಗಲಿದೆ. ಅಲ್ಲದೇ ಸರ್ಕಾರಿ ಸ್ವಾಮ್ಯದ ಅದರಲ್ಲೂ ಪ್ರವಾಸೋದ್ಯಮ ಇಲಾಖೆ ಅಧೀನದ ಸಂಸ್ಥೆ ನಿರ್ವಹಿಸುವ ಹೋಟೆಲ್‌ನಲ್ಲಿ ತಂಗಲು ನಿರ್ದಿಷ್ಟ ಹಾಗೂ ನಿಖರ ಬಾಡಿಗೆ, ಊಟ-ಉಪಾಹಾರಕ್ಕೆ ಕನಿಷ್ಠ ಮಟ್ಟದ ದರ ಇರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಿ ಸೇವೆಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ಮಾನಸಿಕವಾಗಿ ಸುರಕ್ಷತೆಯ ಭಾವ ಇರಲಿದೆ. ಇದರಿಂದ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ನೀಡಲು ಸಹಕಾರಿ ಆಗಲಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದಲ್ಲಿ ಬರುವ ಡಿಸೆಂಬರ್‌ನಲ್ಲಿ ಒಂದೆಡೆ ಹೆಚ್ಚಿನ ಕೋಣೆಗಳು ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಲಭ್ಯವಾಗಲಿದ್ದರೆ, ಮತ್ತೊಂದೆಡೆ ಸರ್ಕಾರಿ ಒಡೆತನದಲ್ಲಿ ತ್ರಿಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಇದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಸೌಲಭ್ಯಗಳು ಲಭ್ಯವಾಗಲಿದೆ.