Advertisement
ಶುಕ್ರವಾರ ಜಿಲ್ಲೆಯ ಬುರಣಾಪುರ ಹಾಗೂ ಅರಕೇರಿ ಬಳಿ ತಿಡಗುಂದಿ ಶಾಖಾ ಕಾಲುವೆಗೆ ಹರಿದು ಬಂದ ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಳವಾಡ ಏತ ನೀರಾವರಿ ಮೂರನೇ ಹಂತದ ಯೋಜನೆಯ ತಿಡಗುಂದಿ ವಿಸ್ರರಣಾ ನಾಲೆಯಿಂದ ನೀರಾವರಿ ಸೌಲಭ್ಯ ಇಲ್ಲದ ಭೀಕರ ಬರಪೀಡಿತ ಇಂಡಿ, ಚಡಚಣ ಭಾಗದ 25 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ದೊರೆತಿದ್ದು ಸಂತಸ ತಂದಿದೆ ಎಂದರು.
14.229 ಕ್ಯೂಸೆಕ್ ನೀರನ್ನು ಹರಿಸುವ ಸಾಮರ್ಥ್ಯದ 36 ವಿತರಣಾ ಕಾಲುವೆ ಹೊಂದಿದೆ. ಈ ಕಾಲುವೆಯಿಂದ ವಿಜಯಪುರ, ಇಂಡಿ ತಾಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು. ಭೀಕರ ಬರಕ್ಕೆ ಹೆಸರಾದ ತಡವಲಗಾದಿಂದ ಇಂಡಿ ರೈಲ್ವೆ ನಿಲ್ದಾಣದವರೆಗಿನ ಪ್ರದೇಶ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು. ಇದನ್ನರಿತ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 4,177 ಹೆಕ್ಟೆರ್ ಪ್ರದೇಶ ತಿಡಗುಂದಿ ಶಾಖಾ ಕಾಲುವೆಯ 56ನೇ ಕಿ.ಮೀ. ನಂತರ ಪೈಪ್‌ಲೈನ್ ಜಾಲವನ್ನು ಅಳವಡಿಸಿಕೊಂಡು ನೀರಾವರಿಗೆ ಒಳಪಡಿಸಲು ಯೋಜಿಸಲಾಗಿದೆ. ಇದರಿಂದ ಇಂಡಿ ತಾಲೂಕಿನ ರಾಜನಾಳ, ಅಥರ್ಗಾ, ಮಿಂಚನಾಳ, ಲಿಂಗದಳ್ಳಿ, ಗಣವಲಗ, ನಿಂಬಾಳ ಬಿ.ಕೆ, ತೆನಿಹಳ್ಳಿ, ಬೋಲೆಗಾಂವ, ಹಂಜಗಿ ಭಾಗದ 14,500 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ ಎಂದರು.
Related Articles
Advertisement
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಇಂಡಿ ತಾಲೂಕಿನ 31 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ಪತ್ರ ಬರೆದಿದ್ದರು. ಇದರಲ್ಲಿ ತಿಡಗುಂದಿ ಯೋಜನೆಯ 12 ಹಳ್ಳಿಗಳು ಈಗಾಗಲೇ ಸೌಲಭ್ಯ ಕಲ್ಪಿಸಿದ್ದು, ನಿಂಬಾಳ ಕೆ.ಡಿ, ಹಳಗುಣಕಿ, ಹೊರ್ತಿ ಸೇರಿ ಉಳಿದ 19 ಹಳ್ಳಿಗಳಿಗೆ ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ರಾಜು ಆಲಗೂರ, ವಿಠ್ಠಲ ಕಟಕದೋಂಡ, ಡಾ| ಮಹಾಂತೇಶ ಬಿರಾದಾರ, ಸಿದ್ದಣ್ಣ ಸಕ್ರಿ ಇದ್ದರು.