ವಿಜಯಪುರ : ಜಿಲ್ಲೆಯ ಸರ್ಕಾರಿ ಶಾಲೆಗೆ ಆಗಮಿಸಿದ ರಾಷ್ಟ್ರಪಕ್ಷಿ ನವಿಲು, ಅಕ್ಷರ ದಾಸೋಹ ಯೋಜನೆಯಲ್ಲಿ ಮಕ್ಕಳೊಂದಿಗೆ ಕೂಡಿ ಬಿಸಿಯೂಟ ಸವಿದು ಅಚ್ಚರಿ ಮೂಡಿಸಿದೆ.
ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಕೆರೂರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಪರಿಸರದಲ್ಲೇ ಓಡಾಡಿಕೊಂಡಿದ್ದ ರಾಷ್ಟ್ರಪಕ್ಷಿ ಮಯೂರಿ, ಇದೀಗ ಏಕಾಏಕಿ ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಬಿಸಿಯೂಟ ಸವಿಯಲು ಆರಂಭಿಸಿದೆ.
ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳು ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಆಹಾರ ಅರಸಿ ಅಲ್ಲಿಗೆ ಹಾರಿ ಬಂದ ನವಿಲು ಮಕ್ಕಳ ಅನ್ನದ ತಟ್ಟೆಯತ್ತ ಸಾಗಿದೆ.
ಈ ವೇಳೆ ಸ್ಥಳದಲ್ಲಿ ಬಿಸಿಯೂಟ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿಕ್ಷಕರ ಸಲಹೆ ಮೇರೆಗೆ ಓರ್ವ ವಿಧ್ಯಾರ್ಥಿನಿ ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ತಾನು ಬೇರೊಂದು ತಟ್ಟೆ ಪಡೆದು ಊಟ ಮಾಡಿದ್ದಾಳೆ.
ಬಿಸಿಯೂಟ ಸವಿದ ಬಳಿಕ ಮಕ್ಕಳು ಕೋಣೆಯಲ್ಲಿ ಪಾಠ ಕೇಳುವಾಗ ತರಗತಿ ಕೋಣೆಗೂ ಆಗಮಿಸಿದ ಮಯೂರಿ, ಅಲ್ಲಲ್ಲಿ ಬಿದ್ದಿದ್ದ ಬಿಸಿಯೂಟದ ಧಾನ್ಯಗಳನ್ನು ಹೆಕ್ಕಿ ತಿಂದಿದೆ.
ಜಂಬಗಿ ಶಾಲಾ ಆವರಣದಲ್ಲಿ ಹಸಿರ ಪರಿಸರಕ್ಕಾಗಿ ನೆಟ್ಟಿರುವ ಸಸ್ಯಗಳು ಮರಗಳಾಗಿ ಪರಿವರ್ತನೆಯಾಗಿದೆ. ಈ ಸುಂದರ ಪರಿಸರದಲ್ಲೇ ಕುಳಿತು ಶಾಲಾ ಮಕ್ಕಳು ನಿತ್ಯವೂ ಬಿಸಿಯೂಟ ಸೇವಿಸುತ್ತಾರೆ.
ಶಾಲಾ ಸುಂದರ ಪರಿಸರದಲ್ಲಿ ಕುಳಿತು ಮಕ್ಕಳು ವನಭೋಜನ ಮಾಡುವುದನ್ನು ಕಂಡು ಸುಂದರ ಪರಿಸರಕ್ಕೆ ಮನಸೋತ ರಾಷ್ಟ್ರಪಕ್ಷಿ ಮಕ್ಕಳೊಂದಿಗೆ ಬೆರೆತು ತಾನೂ ಬಿಸಿಯೂಟ ಸವಿದು ಸಂತೃಪ್ತಗೊಂಡಿದೆ.
ತಮ್ಮ ಶಾಲಾ ಮಕ್ಕಳೊಂದಿಗೆ ಬೆರೆತು ನವಿಲು ಬಿಸಿಯೂಟ ಸವಿಯುವುದನ್ನು ಶಿಕ್ಷಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಬಳಿಕ ಮುಖ್ಯೋಪಾಧ್ಯಾಯ ಪಿ.ಪಿ.ನಾಯಿಕ, ಶಿಕ್ಷಕಿ ಎನ್.ವೈ.ರಾಠೋಡ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿದ್ದಾರೆ.
ಅಲ್ಲದೇ ಸುಂದರ ಪರಿಸರ ನಿರ್ಮಾಣಗೊಂಡರೆ ಜೀವ ವೈವಿಧ್ಯತೆ ತಾನೇ ತಾನಾಗಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ತಮ್ಮ ಶಾಲೆಗೆ ಆಗಮಿಸಿದ ನವಿಲು ಮಕ್ಕಳೊಂದಿಗೆ ಬೆರೆತು ಬಿಸಿಯೂಟ ಸವಿದ ಘಟನೆಯನ್ನು ಉದಾಹರಿಸಿ ಮಾರ್ಗದರ್ಶನ ಮಾಡಿದ್ದಾರೆ.
ಇದನ್ನೂ ಓದಿ: Renukaswamy Case: ದರ್ಶನ್ ಸಹಚರನನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸುವ ಮಾಹಿತಿ ಇಲ್ಲ