Advertisement

ಸ್ಪರ್ಧಾ ಗುಣ ಬೆಳೆಸಿಕೊಳ್ಳಲು ಡಿಸಿ ಪಾಟೀಲ ಸಲಹೆ

04:41 PM Feb 19, 2020 | Naveen |

ವಿಜಯಪುರ: ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನಗಳಿಂದ ಜೀವನದ ಯಶಸ್ಸಿನ ಸಾಧನೆಗಳ ಮೆಟ್ಟಿಲೇರಲು ಸಾಧ್ಯ. ಹೀಗಾಗಿ ಮೊಬೈಲ್‌ ಗೀಳಿಗೆ ಬಿದ್ದು ನಿಮ್ಮ ಅತ್ಯಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Advertisement

ನಗರದ ಅಗಸ್ತ್ಯ ಅಂತಾರಾಷ್ಟ್ರೀಯ ಫೌಂಡೇಶನ್‌ನ ವಿಜ್ಞಾನ ಕೇಂದ್ರದಲ್ಲಿ ಸರ್ವಶಿಕ್ಷಣ ಅಭಿಯಾನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬ ವ್ಯಕ್ತಿ ಒಂದು ಸಂಸ್ಥೆ ಇದ್ದಂತೆ. ನೀವು ಕೂಡಾ ಸಂಸ್ಥೆಯಂತೆ ಬೆಳೆಯಬೇಕು. ಪ್ರತಿಯೊಬ್ಬ ವ್ಯಕ್ತಿಗೆ ತಾನು ಹೊಂದಿರುವ ಗುರಿ ಸಾಧನೆಗೆ ನಿರಂತರ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಗುಣ ಬೆಳೆಸಿಕೊಳ್ಳಬೇಕು, ನವ ಮಾಧ್ಯಮಗಳ ಮತ್ತು ತಂತ್ರಜ್ಞಾನಗಳ ಸದುಪಯೋಗ ಆಗಬೇಕು. ಸರಿಯಾದ ಮಾರ್ಗದಲ್ಲಿ ಸಾಗಿ ಸಾಧನೆಗೈಯ್ಯಬೇಕು. ಆತ್ಮವಿಶ್ವಾಸ ತಮ್ಮ ಗುಣಗಳ ಆತ್ಮಾವಲೋಕನದೊಂದಿಗೆ ಗುರಿ ನಿಗದಿಪಡಿಸಿ ಸಕಾರಾತ್ಮಕ ಭಾವನೆಯೊಂದಿಗೆ ಮುಂದುವರಿಯಬೇಕು. ನಿಮ್ಮಲ್ಲಿರುವ ಪ್ರತಿಭೆ
ತಿಳಿದುಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳೊಂದಿಗೆ ಸತತ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಯುವ ಸಮೂಹಕ್ಕೆ ಸಾಧನೆ ಮಾಡಲು ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಗಳು ನಮಗೆ ದಾರಿ ದೀಪ. ಪ್ರತಿಯೊಬ್ಬರು ಇತಿಹಾಸ ತಿಳಿದುಕೊಳ್ಳಬೇಕು, ಇತಿಹಾಸ ಅರಿತವರು ಮಾತ್ರ ಇತಿಹಾಸ
ನಿರ್ಮಿಸಲು ಸಾಧ್ಯ. ಹೀಗಾಗಿ ನೀವೆಲ್ಲರು ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಅವರ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳಬೇಕು. ಅನ್ಯರ ಬಗ್ಗೆ ದ್ವೇಷ, ಹೊಟ್ಟೆಕಿಚ್ಚು ತೊರೆಯಬೇಕು. ಸ್ವಾಮಿ ವಿವೇಕಾನಂದರ ಹಾಗೂ ಮಹಾತ್ಮ ಗಾಂಧೀಜಿ ಅವರಂತಹ ಮಹಾನ್‌ ನಾಯಕರನ್ನು ಆದರ್ಶವಾಗಿ ಇರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮನುಷ್ಯನ ಶರೀರದಲ್ಲಿ ಒಳ್ಳೆತನ ಹಾಗೂ ಕೆಟ್ಟತನ ಎರಡು ಇದ್ದು, ಒಳ್ಳೆತನ ಆಯ್ಕೆ ಮಾಡಿಕೊಂಡು ಪೋಷಿಸಿ ಬೆಳೆಸಬೇಕು. ಕೆಟ್ಟತನವನ್ನು ಶರೀರದಿಂದ ತೊಲಗಿಸಬೇಕು ಆಗ ಮಾತ್ರ ನಾವು ಬೆಳೆದು, ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ನಿಮ್ಮ ಸೇವೆ ನೀಡಲು ಸಾಧ್ಯ. ಇಂದಿನ ಸಮಾಜದಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟು ಮುಖ್ಯವೆಂದರೆ ಜೈ ಜವಾನ್‌ ಜೈ ಕಿಸಾನ್‌ ವ್ಯಾಖ್ಯಾನದಲ್ಲಿ ಮತ್ತೂಂದು ಶಬ್ದ ಅಡಕವಾಗಿದ್ದು ಅದುವೇ ಜೈ ವಿಜ್ಞಾನ ಎಂದರು. ವಿಜ್ಞಾನ ಎನ್ನುವುದು ದೇವರನ್ನು ಕಾಣುವುದು ಎಂದರ್ಥ. ವಿಜ್ಞಾನ
ಕಲ್ಪನೆಯಷ್ಟೆ ವಿಸ್ತಾರ ಪಡೆದಿದೆ. ವಿಜ್ಞಾನವಿಲ್ಲದ ಜಗತ್ತು ಊಹಿಸಲು ಅಸಾಧ್ಯ. ಪ್ರಾಣಿ- ಪಕ್ಷಿ ಸಂಕುಲಕ್ಕೆ ಉಪಯುಕ್ತವಾದ ತಂತ್ರಜ್ಞಾನ ಅಭಿವೃದ್ಧಿಗೊಳ್ಳಬೇಕು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ದೆಸೆಯಲ್ಲಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

Advertisement

ವಿದ್ಯಾರ್ಥಿಗಳು ಪಾಲಕರು, ಗುರು-ಹಿರಿಯರನ್ನು ಗೌರವಿಸುವ ಜೊತೆಗೆ ಸದಾ ಸತ್ಯ ನುಡಿಯಬೇಕು. ಉಪಕಾರಿ ಸ್ನೇಹಿತರನ್ನು ಸಂಪಾದಿಸಿ, ಕಷ್ಟ ಕಾಲದಲ್ಲಿ ಸಹಾಯ ಮಾಡಿದರನ್ನು ಸದಾ ಸ್ಮರಿಸುವ ಮನೋಭಾವ ರೂಢಿಸಿಕೊಳ್ಳಬೇಕು. ನೀವು ಮಾಡುವ ಸೇವೆ ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲುಪಬೇಕು. ಸಮಾಜದಲ್ಲಿ ಅಶಕ್ತ, ಶಕ್ತಿ ಇಲ್ಲದವರನ್ನು ಪ್ರೋತ್ಸಾಹಿಸಲು ಸದಾ ಸೇವೆಗೆ ಬದ್ಧವಾಗಿರಬೇಕು ಎಂದರು.

ವಿಜ್ಞಾನ ಚಟುವಟಿಕೆ ಕೇಂದ್ರ ಮುಖ್ಯಸ್ಥೆ ಪಾಟೀಲ ಮಾತನಾಡಿ, ಒಂದು ತಿಂಗಳ ಕಾಲ ತಜ್ಞರಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next