Advertisement

ಕಲಾವಿದನಿಗೆ ಸಂವೇದನೆ ಅಗತ್ಯ

06:09 PM Oct 13, 2019 | Team Udayavani |

ವಿಜಯಪುರ: ಕಲಾವಿದರು ರೂಪಿಸುವ ಕಲಾಕೃತಿಗಳು ಅದ್ಬುತ್‌ ಸಂದೇಶ ಸಾರುವ ಮಹತ್ವದ ಸಾಧನಗಳು. ಹೀಗಾಗಿ ಕಲಾವಿದ ತನ್ನ ಮೇಲಿರುವ ಹೊಣೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿ ತನ್ನ ಕಲಾಕೃತಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕೆಲಸ ಮಾಡಬೇಕು ಎಂದು ಖ್ಯಾತ ಚಿತ್ರಕಲಾವಿದ ಪೊನ್ನಪ್ಪ ಕಡೇಮನಿ ಹೇಳಿದರು.

Advertisement

ವಿಜಯಪುರದ ಆರ್ಟ್‌ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವರ್ಣ ಮಹಲ ಕಲಾ ಸಂಸ್ಥೆಯ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರಿಗೆ ಸಾಮಾಜಿಕ ಪರಿಕಲ್ಪನೆಯ ಸೂಕ್ಷ್ಮಸಂವೇದನೆಗಳಿರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಲಲಿತ ಕಲಾ ವಿಶ್ವವಿದ್ಯಾಲಯದ ನಿಕಟಪೂರ್ವ ವಿಶೇಷಾಧಿ ಕಾರಿ ಡಾ| ಎಸ್‌.ಸಿ. ಪಾಟೀಲ ಮಾತನಾಡಿ, ಚಿತ್ರಕಲಾವಿದ ಉತ್ತಮವಾಗಿ ಚಿತ್ರ ರಚಿಸುವುದರ ಜೊತೆಗೆ ಉತ್ತಮವಾಗಿ ಬರೆಯುವ, ಭಾಷಣ ಮಾಡುವ ಕಲೆಯನ್ನು ಸಹ ಕರಗತ ಮಾಡಿಕೊಂಡರೆ ಅತ್ಯುತ್ತಮ ಕಲಾವಿದನಾಗಿ ರೂಪುಗೊಳ್ಳಬಹುದು. ಚಿತ್ರಕಲಾವಿದ ಉತ್ತಮ ಭಾಷಣ ಕಲೆ, ಸಂವಹನ ಕಲೆ ಹಾಗೂ ಬರೆಯುವ ಕೌಶಲವನ್ನು ರೂಢಿಸಿಕೊಳ್ಳುವುದು ಉತ್ತಮ ಎಂದರು.

ಒಬ್ಬ ಕಲಾವಿದನ ಚಿತ್ರ ಅನೇಕ ಸಂದೇಶಗಳನ್ನು ಅಭಿವ್ಯಕ್ತಗೊಳಿಸಿರುತ್ತದೆ. ತಮ್ಮ ಕಲಾಕೃತಿಯಲ್ಲಿ ಅಡಕವಾಗಿರುವ ಮನೋಜ್ಞವಾದ ವಿಚಾರ ಹಾಗೂ ಸಂದೇಶವನ್ನು ಕಲಾವಿದನೇ ಪ್ರಸ್ತುತ ಪಡಿಸಬೇಕು. ಆಗ ಕಲಾಕೃತಿಯಲ್ಲಿನ ನೈಜ ಸಂದೇಶ ಜನರಿಗೆ ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕಲಾವಿದರು ಈ ಎಲ್ಲ ಕೌಶಲಗಳನ್ನು ಬೆಳೆಸಿಕೊಳ್ಳುವತ್ತ ವಿಶೇಷ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು.

ಕಲಾವಿದರಲ್ಲಿ ಅಪಾರವಾದ ಪ್ರತಿಭೆ ಇರುತ್ತದೆ. ಕಲಾವಿದರು ತಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಗಮನ ಹರಿಸಬೇಕು. ಅನೇಕ ಪ್ರತಿಭಾನ್ವಿತ ಕಲಾವಿದರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಂಡಿದ್ದಾರೆ. ದುಶ್ಚಟಗಳ ಸಹವಾಸದಿಂದಾಗಿ ಅವರಲ್ಲಿರುವ ಅದ್ಬುತ್‌ ಕಲಾ ವಿದ್ವತ್ತು ಕಮರುತ್ತಿದೆ ಎಂದು ವಿಷಾದಿಸಿದರು. ಕರ್ನಾಟಕದ ಮೂಲೆ-ಮೂಲೆಗಳಲ್ಲಿಯೂ ಪ್ರತಿಭಾನ್ವಿತ ಚಿತ್ರಕಲಾವಿದರಿದ್ದಾರೆ. ಅನೇಕ
ಕಲಾವಿದರ ಕಲಾಕೃತಿಗಳು ವಿದೇಶದ ಪ್ರಮುಖ ಕಟ್ಟಡಗಳಲ್ಲಿ ರಾರಾಜಿಸುತ್ತಿವೆ.

Advertisement

ವಿಜಯಪುರ ಭಾಗದ ಅನೇಕ ಕಲಾವಿದರ ಕಲಾಕೃತಿಗಳು ವಿದೇಶದಲ್ಲಿ ಮಿಂಚುತ್ತಿವೆ. ಇದು ಪ್ರತಿಯೊಬ್ಬರು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದರು. ಕಲಾವಿದರು ಪರಸ್ಪರ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಚರ್ಚೆ ಮಾಡಬೇಕು. ಆಗ್ಗಾಗ ವಿಶೇಷ ಸಭೆಗಳನ್ನು ನಡೆಸಿ ಕಲಾವಿದರ ಪ್ರಗತಿಗೆ ಪೂರಕವಾದ ವಿಚಾರಗಳನ್ನು ಚಿಂತಿಸಬೇಕು ಎಂದರು.

ಕಲಾಸೇವೆ ಎನ್ನುವುದು ಒಂದು ತಪಸ್ಸು ಹಾಗೂ ವೃತವಿದ್ದಂತೆ, ಈ ವ್ರತವನ್ನು ಚಾಚೂತಪ್ಪದೇ ಪಾಲಿಸುತ್ತಾ ಬಂದಿರುವ ಅನೇಕ ಕಲಾವಿದರು ಇಂದು ಉನ್ನತ ಸಾಧನೆ ತೋರಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next