ವಿಜಯಪುರ: ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ. 83.23 ಫಲಿತಾಂಶದಿಂದ 9ನೇ ಸ್ಥಾನ ಪಡೆಯುವ ಮೂಲಕ ಟಾಪ್‌ಟೆನ್‌ನಲ್ಲಿ ಸ್ಥಾನ ಪಡೆದಿದ್ದ ವಿಜಯಪುರ ಜಿಲ್ಲೆ ಈ ಬಾರಿ ಶೇ. 77.36 ಫಲಿತಾಂಶದೊಂದಿಗೆ 16 ಸ್ಥಾನ ಕುಸಿತಗೊಂಡು 25ನೇ ಸ್ಥಾನಕ್ಕೆ ತೃಪ್ತಪಟ್ಟಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 17,724 ಬಾಲಕರು, 13,904 ಬಾಲಕಿಯರು ಸೇರಿದಂತೆ ಒಟ್ಟು 31,628 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1,320 ಮಕ್ಕಳು ಪರೀಕ್ಷೆಗೆ ಗೈರಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದು ಫಲಿತಾಂಶ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಪ್ರಸಕ್ತ ವರ್ಷಕ್ಕೆ ಸಿಬಿಎಸ್‌ಇ ಪಠ್ಯಾಧಾರಿತ ಪ್ರಶ್ನೆ ಪತ್ರಿಕೆ ರೂಪಿಸಿದ್ದರಿಂದಾಗಿ ಬಹುತೇಕ ಮಕ್ಕಳಿಗೆ ಹೊಸ ಪ್ರಶ್ನೆ ಪತ್ರಿಕೆ ಅರ್ಥವಾಗಲಿಲ್ಲ. ಆದಾಗ್ಯೂ ಇಲಾಖೆ ಅಧಿಕಾರಿಗಳು ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ತೋರಿಸಿದ್ದರು. ಇನ್ನೊಂದೆಡೆ ಕಳೆದ ವರ್ಷ ಬಹು ಆಯ್ಕೆ ಪ್ರಶ್ನೆಗಳಿದ್ದವು. ಈ ಗೊಂದಲವೂ ಸಹ ಫಲಿತಾಂಶ ಕುಸಿಯಲು ಕಾರಣ ಎನ್ನುತ್ತಾರೆ ಶಿಕ್ಷಕರು ಹಾಗೂ ಅಧಿಕಾರಿಗಳು.
ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಪ್ರಯತ್ನಗಳನ್ನು ಕೈಗೊಂಡಿತ್ತು. ಟಾಪ್ ಟೆನ್‌ನಲ್ಲಿ ಜಿಲ್ಲೆಯ ಫಲಿತಾಂಶ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಕಾರ್ಯ ಯೋಜನೆ ರೂಪಿಸಿದ್ದರು. ವಿಶೇಷ ತರಗತಿ, ಗುಂಪು ಚರ್ಚೆ, ಪಾಸಿಂಗ್ ಪ್ಯಾಕೇಜ್ ಸೇರಿದಂತೆ ಇಲಾಖೆ ಮಾರ್ಗಸೂಚಿಗಳನ್ನು ಕಟ್ಟು-ನಿಟ್ಟಾಗಿ ಪಾಲಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಆದರೆ ಸಿಬಿಎಸ್‌ಇ ಪಠ್ಯಕ್ರಮ ಆಧರಿಸಿ ಹೊಸದಾಗಿ ರಚಿಸಲಾದ ಪ್ರಶ್ನೆಪತ್ರಿಕೆ ಗೊಂದಲ ಮಕ್ಕಳನ್ನು ಬಾಧಿಸಿದ್ದರಿಂದ ಫಲಿತಾಂಶ ಕುಸಿಯಲು ಕಾರಣ ಎನ್ನಲಾಗುತ್ತಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಎಂ.ಎಂ. ಸಿಂಧೂರ ಅವರನ್ನು ಡಿಡಿಪಿಐ ಆಗಿ ನಿಯೋಜಿಸಲಾಗಿತ್ತು. ಸಿಂಧೂರ ಡಿಡಿಪಿಐ ಆಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ರಚನಾತ್ಮಕ ಕ್ರಮ ಕೈಗೊಂಡಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ವರ್ಗಾವಣೆ ಮಾಡಲಾಯಿತು. ನಂತರ ಡಿಡಿಪಿಐ ಆಗಿ ನಿಯೋಜಿತರಾದ ಎಚ್.ಪ್ರಸನ್ನಕುಮಾರ ಪರೀಕ್ಷೆಗೆ ಕೆಲವೇ ದಿನ ಇದ್ದರೂ ಸಹ ಫಲಿತಾಂಶ ಸುಧಾರಣೆಗೆ ಅನೇಕ ಕ್ರಮ ಕೈಗೊಂಡಿದ್ದರು ಸಹ ಪರಿಣಾಮ ಬೀರಲಿಲ್ಲ.