ವಿಜಯಪುರ: ಜಿಲ್ಲೆಯಲ್ಲಿ ಕುರಿಗಾರರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳ ಮಧ್ಯೆ ಜಿಲ್ಲೆಯಲ್ಲಿ ಕಳ್ಳರ ಹಾವಳಿಯಿಂದ ಕುರಿಗಾರತರು ಕಂಗೆಟ್ಟಿದ್ದು, ಸರ್ಕಾರ ಅಥವಾ ಅಧಿಕಾರಿಗಳು ಕುರಿಗಾರರ ನೆರವಿಗೆ ಬರುತ್ತಿಲ್ಲ. ಹೀಗಾಗಿ ಕುರಿಗಳ್ಳರ ಕುರಿತು ನಿಖರ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಕಾರ್ಯಕ್ರಮದ ಮೂಲಕ ಕುರಿಗಾರರ ನೆರವಿಗೆ ಧಾವಿಸಲು ಸಂಘಟನೆಯೊಂದು ಮುಂದೆ ಬಂದಿದೆ.
Advertisement
ಜಿಲ್ಲೆಯ ಸುತ್ತಲೂ ಕುರಿ-ಮೇಕೆ ಕಳ್ಳರ ಹಾವಳಿ ಮಿತಿ ಮೀರಿದೆ. ಜಿಲ್ಲೆಯಲ್ಲಿ ಕುರಿಗಳ್ಳತನ ವ್ಯವಸ್ಥಿತ ದೊಡ್ಡ ಜಾಲ ರೂಪಿಸಿದ್ದು, ಕುರಿ-ಮೇಕೆ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಆರಂಭಗೊಂಡಿದ್ದು, ಜಮೀನುಗಳಲ್ಲಿ ಬಿತ್ತನೆ ನಡೆದಿದೆ. ಪರಿಣಾಮ ಕುರಿಗಾರರು ತಮ್ಮ ಕುರಿಗಳನ್ನು ಮೇಯಿಸಲು ಪರದಾಡುತ್ತಿದ್ದಾರೆ. ಕುರಿ ಗಳನ್ನು ಮೇಯಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನಗರ- ಪಟ್ಟಣಗಳು, ಜನವಸತಿ ಪ್ರದೇಶಗಳ ಸುತ್ತ ಮುತ್ತಲಿನ ರಸ್ತೆ-ಹೆದ್ದಾರಿಗಳು, ಪಾಳು ಬಿದ್ದ ಜಮೀನುಗಳಲ್ಲಿ ಕುರಿ ಮೇಯಿಸುವುದುಅನಿವಾರ್ಯವಾಗಿದೆ. ಅದರೆ ಹೆದ್ದಾರಿಗಳಲ್ಲಿ ಕುರಿ ಮೇಯಿಸುವ ಕುರಿಗಾರರಿಗೆ ಇದೀಗ ಕುರಿಗಳ್ಳರ ಹಾವಳಿ ಹೈರಾಣಾಗಿಸಿದೆ. ಹೆದ್ದಾರಿಗಳ ಮೇಲೆ ಬೈಕ್-ಆಟೋಗಳಲ್ಲಿ ಬರುವ ಕೆಲವು ಪುಂಡರು ಅಮಾಯಕರಂತೆ ನಿಂತು ಮಾತನಾಡಿಸುವ ನೆಪದಲ್ಲಿ ಕುರಿಗಳನ್ನು ಕಳ್ಳತನ ಮಾಡಿಕೊಂಡು ನೋಡ ನೋಡುತ್ತಲೇ ಪರಾರಿಯಾಗುತ್ತಿದ್ದಾರೆ.
ನಡೆಯುತ್ತಿರುವ ಈ ಕುರಿಗಳ್ಳತನದ ಕುರಿತು ಅವ್ಯಕ್ತ ಭಯದಲ್ಲಿ ಬನದುಕುತ್ತಿರುವ ಕುರಿಗಾರರು ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಸಂಘಟಿತ ವ್ಯವಸ್ಥೆಯಲ್ಲಿ ಜೀವಿಸುವ ಕುರಿಗಾರರು ನಿತ್ಯವೂ ಅನುಭವಿಸುತ್ತಿರುವ ಈ ಸಂಕಷ್ಟದ ಕುರಿತು ಯಾರಿಗೂ ಹೇಳಿಕೊಳ್ಳಲಾಗದ ಕಾರಣ ಸರ್ಕಾರ ಕೂಡ ಇವರ ನೆರವಿಗೆ ಬರುತ್ತಿಲ್ಲ. ಹೊಲಗಳಲ್ಲೇ ಜೀವನ ಸಾಗಿಸುವ ಕುರಿಗಾರರಿಗೆ ಸರ್ಕಾರಗಳು ಕುರಿಗಾರರಿಗೆ ರೂಪಿಸುವ ಯಾವ ಯೋಜನೆಗಳೂ ತಲುಪುತ್ತಿಲ್ಲ. ವಿಮೆ ಸೇರಿದಂತೆ ಕುರಿಗಾರರಿಗೆ ಸರ್ಕಾರ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಕುರಿಗಾರರು ದೂರುತ್ತಾರೆ. ಅನಕ್ಷರಸ್ತರು ಹಾಗೂ ಸಂಕಷ್ಟ ಸಂದರ್ಭದಲ್ಲಿ ಯಾರಿಗೆ ದೂರು ನೀಡಬೇಕು ಎಂದು ಅಸಂಘಟಿತ ಕುರಿಗಾರರಿಗೆ ತಿಳಿದಿಲ್ಲ. ಪರಿಣಾಮ ತಾವು ಅನುಭವಿಸುತ್ತಿರುವ ಕುರಿಗಳ್ಳತನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನು ಮನಗಂಡಿರುವ ತೊರವಿ ಬೀರಲಿಂಗೆಶ್ವರ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ ಅಸಂಘಟಿತ ಕುರಿಗಾರರು ಕುರಿ ಕಳ್ಳತವಾದ ತಕ್ಷಣ ತಮ್ಮ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಕುರಿಗಾರರು ತಮ್ಮ ಹೆಸರು, ಮೊಬೈಲ್ ನಂಬರ್‌ಗಳನ್ನು 9972160258 ವಾಟ್ಸ್ ಆ್ಯಪ್ ಮೂಲಕ ಮಾಹಿತಿ ನೀಡಬೇಕು. ಸಂಕಷ್ಟದ ಸಂದರ್ಭದಲ್ಲಿ ಕರೆ ಮಾಡಿಯೂ ಮಾಹಿತಿ ನೀಡಿದರೆ ಸಾಕು. ಇಲ್ಲವೇ ವಿಜಯಪುರ ನಗರ ಇಂಡಿ ರಸ್ತೆಯಲ್ಲಿರುವ ತೇಲಿ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಸಂಪರ್ಕ ಕಚೇರಿಗೆ ಬಂದು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Related Articles
ರಕ್ಷಣೆಯೂ ಇಲ್ಲವಾಗಿದೆ. ರಸ್ತೆ ಬದಿಯಲ್ಲಿ ಕುರಿ ಮೇಯಿಸುವ ಕುರಿಗಾರರ ಕುರಿಗಳನ್ನು ನಿರ್ಭಯದಿಂದ ಕುರಿಗಳ್ಳರು ಕಳ್ಳತನ ಮಾಡುತ್ತಿದ್ದು, ಯಾರಿಗೆ ಹೇಗೆ ದೂರು ನೀಡಬೇಕು ಎಂದು ತಿಳಿಯದ ಮುಗ್ಧತೆ ಹೊಂದಿದ್ದಾರೆ. ಹೀಗಾಗಿ ಕುರಿಗಾರರು ಸಂಘಟಿತರಾಗಬೇಕಿದೆ. ಕುರಿಗಳ್ಳರ ಕುರಿತು ನಿಖರ ಮಾಹಿತಿ ನೀಡಿದವರಿಗೆ ನಮ್ಮ ಸಂಘದಿಂದ ಯೋಗ್ಯ ಬಹುಮಾನ ನೀಡಲು ಮುಂದಾಗಿದ್ದೇವೆ.
ಬೀರಪ್ಪ ಜುಮನಾಳ
ಅಧ್ಯಕ್ಷರು ಬೀರಲಿಂಗೆಶ್ವರ ಕುರಿ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ, ತೊರವಿ
Advertisement