ವಿಜಯಪುರ: ಕೈಗಾರಿಕಾ ಪ್ರದೇಶದ ಆಹಾರ ಧಾನ್ಯ ಘಟಕದಲ್ಲಿ ಅಪಾಯಕ್ಕೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗಾಗಿ ಕಲಬುರಗಿ, ಬೆಳಗಾವಿಯಿಂದ ಎಸ್.ಡಿ.ಆರ್.ಎಫ್. ತಂಡಗಳನ್ನು ಕರೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕಾರ್ಮಿಕರ ರಕ್ಷಣ ಕಾರ್ಯಾಚರಣೆ ಸ್ಥಳದಲ್ಲಿ ಪರಿಸ್ಥಿತಿ ಅವಲೋಕನದ ಬಳಿಕ ರಾತ್ರಿ 10-15 ಕ್ಕೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕಾರ್ಮಿಕರು ಅಪಾಯಕ್ಕೆ ಸಿಲುಕಿರುವ ಸ್ಥಳದ ಗೋದಾಮಿನ ಧಾನ್ಯಗಳ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಅವಸರದ ಕಾರ್ಯಾಚರಣೆ ಸಾಧ್ಯವಿಲ್ಲದಾಗಿದೆ ಎಂದರು.
ಇದರ ಹೊರತಾಗಿಯೂ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಅಗ್ನಿಶಾಮಕ ತಂಡ, ಪೊಲೀಸ್, ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 4 ಕ್ರೇನ್ ಹಾಗೂ 4 ಜೆಸಿಬಿ ಯಂತ್ರಗಳನ್ನು ರಕ್ಷಣ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಪಾಯದಲ್ಲಿರುವ ಕಾರ್ಮಿಕರಿಗೆ ಉಸಿರಾಟದ ಸಮಸ್ಯೆ ಆಗದಂತೆ ನೋಡಿಕೊಳ್ಳು ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದ್ದೇವೆ. ಮತ್ತೊಂದೆಡೆ ಕಾರ್ಮಿಕರ ಸುರಕ್ಷತೆಗಾಗಿ ಸ್ಥಳಕ್ಕೆ ಕಲಬುರಗಿ ಹಾಗೂ ಬೆಳಗಾವಿಯಿಂದ ಎಸ್.ಡಿ.ಆರ್.ಎಫ್. ತಂಡಗಳ ಆಗಮನಕ್ಕೆ ಕರೆ ನೀಡಲಾಗಿದೆ. ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮವಾಗಿ ಹೈದರಾಬಾದ್ ಹಾಗೂ ಪುಣೆಯಿಂದ ಎನ್.ಡಿ.ಆರ್.ಎಫ್. ತಂಡಗಳಿಗೂ ಕರೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಲಭ್ಯವಾಗಿರುವ ಮಾಹಿತಿಯಂತೆ ಸುಮಾರು 10-12 ಕಾರ್ಮಿಕರು ಧಾನ್ಯಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಘಟನೆ ಹಂತದಲ್ಲಿ ಪಾರಾಗಿರುವ ಮೂವರು ಹಾಗೂ ಕಾರ್ಯಾಚರಣೆ ಹಂತದಲ್ಲಿ ರಕ್ಷಿಸಲ್ಪಟ್ಟ ಓರ್ವ ಕಾರ್ಮಿಕ ಸೇರಿ ನಾಲ್ವರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ಮಾಹಿತಿ ನೀಡಿದ್ದಾರೆ.