ವಿಜಯಪುರ : ಯುದ್ದ ಪೀಡಿತ ಇಸ್ರೇಲ್‍ನಲ್ಲಿ ಸಿಲುಕಿದ್ದ ವಿಜಯಪುರದ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿಲ್ಲೆಗೆ ಮರಳಿದ್ದು, ತನ್ನ ಸುರಕ್ಷತೆಗೆ ಆದ್ಯತೆ ನೀಡಿದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಶುಕ್ರವಾರ ವಿಜಯಪುರ ನಗರಕ್ಕೆ ಆಗಮಿಸಿದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಮೇಶ ಗೋವಿಂದ, ಕೃಷಿ ಸಂಶೋಧನಾ ಕೇಂದ್ರದಲ್ಲಿ ಹವಾಮಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಇಸ್ರೇಲ್‍ನ ಜೆರುಸೆಲಂನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಸಿರುವ ಸುಮೇಶ, ಶುಕ್ರವಾರ ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರನ್ನು ಭೇಟಿ ಮಾಡಿ, ತನ್ನನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ತೋರಿದ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಸುಮೇಶ ಅವರಿಗೆ ಜಿಲ್ಲಾಧಿಕಾರಿ ಭೂಬಾಲನ್ ಸಿಹಿ ತಿನ್ನಿಸಿ, ಅಭಿನಂದಿಸಿದರು. ಈ ವೇಳೆ ಇಸ್ರೇಲ್ ದೇಶದಲ್ಲಿ ಆವರಿಸಿರುವ ಯುದ್ಧ ಹಾಗೂ ಅಲ್ಲಿನ ಪರಿಸ್ಥಿತಿ ಕುರಿತು ಜಿಲ್ಲಾಕಾರಿ ಭೂಬಾಲನ್ ಅವರಿಗೆ ಸುಮೇಶ ವಿವರಿಸಿದರು.
ಇಸ್ರೇಲ್‍ನ ರೇಲಾ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಸಂಶೋಧನೆ ನಡೆಸಿರುವ ಜಿಲ್ಲೆಯ ಸಿಂದಗಿ ತಾಲೂಕ ಚಾಂದಕವಟೆ ಗ್ರಾಮದ ವಿದ್ಯಾರ್ಥಿಯೂ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ.ಈರಣ್ಣ ಮಲ್ಲಪ್ಪ ಉಡಚಣ ಎಂಬ ಯುವಕ ಶುಕ್ರವಾರ ಮಧ್ಯಾಹ್ನ 12-30 ರ ಸುಮಾರಿಗೆ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿನಲ್ಲಿರುವ ತಮ್ಮ ಸಹೋದರನ ಮನೆಗೆ ತೆರಳಿದ್ದಾರೆ.