Advertisement

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

08:34 PM Jul 02, 2024 | Team Udayavani |

ವಿಜಯಪುರ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ತೆಪ್ಪದ ಮೂಲಕ ನದಿಯಲ್ಲಿ ಹೊರಟಿದ್ದಾಗ ಬಿರುಗಾಳಿಗೆ ತೆಪ್ಪ ಮುಳುಗಿದ ಘಟನೆ ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದು, ಓರ್ವನ ಶವ ಪತ್ತೆಯಾಗಿದೆ.

Advertisement

ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಏತ ನೀರಾವರಿ ಜಾಕವೆಲ್ ಬಳಿ ದುರಂತ ಸಂಭವಿಸಿದೆ. 35 ವರ್ಷದ ಪುಂಡಲೀಕ ಎನ್ ಕಂಚಿ ಎಂಬಾತನ ಶವ ಪತ್ತೆಯಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಲೇ ಪೊಲೀಸರು, ಅಗ್ನಿಶಾಮಕ ಸೇವಾ ಇಲಾಖೆಯ ಸಿಬ್ಬಂದಿ ಆಗಮಿಸಿದ್ದು, ನದಿಯಲ್ಲಿ ನಾಪತ್ತೆಯಾಗಿರುವವರ ಶೋಧ ಹಾಗೂ ರಕ್ಷಣಗೆ ಮುಂದಾಗಿದ್ದಾರೆ.

ಕೃಷ್ಣಾ ನದಿಯ ಬಳೂತಿ ಏತ ನೀರಾವರಿ ಜಾಕವೆಲ್ ಬಳಿ ಜೂಜುಕೋರರ ಗುಂಪು ಇಸ್ಪೀಟ್ ಆಟದಲ್ಲಿ ಮಗ್ನವಾಗಿತ್ತು. ಈ ವೇಳೆ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಪಕ್ಕದಲ್ಲಿದ್ದ ಮೀನುಗಾರರ ತೆಪ್ಪದಲ್ಲಿ ನದಿಯಲ್ಲಿ ಹೊರಟಿದ್ದಾರೆ.

Advertisement

ಈ ವೇಳೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಕುಳಿತಿದ್ದ ತೆಪ್ಪ ಬಿರುಗಾಳಿಗೆ ತುಂಬಿ ಹರಿಯುವ ನದಿಯಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ತೆಪ್ಪದಲ್ಲಿದ್ದವರು ನೀರು ಪಾಲಾಗಿದ್ದಾರೆ.

ಇದರಲ್ಲಿ ಇಬ್ಬರು ಈಜಿಕೊಂಡು ದಡ ಸೇರಿದ್ದರೆ, ಓರ್ವ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಯಲ್ಲಿ ನದಿಯಲ್ಲಿ ಮುಳುಗಿದವರು ಎಷ್ಟು ಜನ ಎಂಬುದು ನಿಖರವಾಗಿಲ್ಲ, ಪೊಲೀಸರೂ ಇದನ್ನು ಸ್ಪಷ್ಟಪಡಿಸಿಲ್ಲ. ಆದರೆ ಕನಿಷ್ಠ ಆರು ಜನ ಹರಿಯುವ ನದಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಎಸ್ಪಿ ಋಷಿಕೇಶ ಭಗವಾನ್, ಎಎಸ್ಪಿ ಶಂಕರ ಮಾರಿಹಾಳ ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next