Advertisement

ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಬಯಲಾಗಿಲ್ಲ: ಡಿಸಿ

12:15 PM Mar 05, 2020 | Naveen |

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು, ಪರೀಕ್ಷಾ ಅಕ್ರಮದ ಕುರಿತು ವಿದ್ಯಾರ್ಥಿ ಸೇರಿ ಇಬ್ಬರನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. 7 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಿದ್ದು, ಕೋಠಡಿ ಮೇಲ್ವಿಚಾರಕಿ ಅಮಾನತಿಗೆ ಸೂಚಿಸಲಾಗಿದೆ.

Advertisement

ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಇಂಡಿ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ 10:30ಕ್ಕೆ ಪರೀಕ್ಷೆ ಆರಂಭವಾದ ಬಳಿಕ ಹೊರಗಿನಿಂದ ಅಕ್ರಮವಾಗಿ ಪರೀಕ್ಷಾ ಕೇಂದ್ರದ ಹಿಂಭಾಗದಲ್ಲಿ ಬಂದಿದ್ದ ಬಾಗಪ್ಪ ಸಗರ ಎಂಬ ವ್ಯಕ್ತಿ 11:45ರ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ. ಪರೀಕ್ಷೆ ಬರೆಯುತ್ತಿದ್ದ ಮುರುಗೇಂದ್ರ ಹಿರೇಮಠ ಎಂಬ ವಿದ್ಯಾರ್ಥಿಯ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾನೆ. ಹೀಗಾಗಿ ಪರೀಕ್ಷೆ ಆರಂಭದ ಬಳಿಕ ನಿರ್ದಿಷ್ಟ ಕೇಂದ್ರದಲ್ಲಿ ನಡೆದಿರುವ ಈ ಕೃತ್ಯ ಪರೀಕ್ಷಾ ನಕಲು ಸ್ವರೂಪದ ಅಕ್ರಮವೇ ಹೊರತು, ಪ್ರಶ್ನೆಪತ್ರಿಕೆ ಬಯಲು ಪ್ರಕರಣವಲ್ಲ ಎಂದು
ಸ್ಪಷ್ಟಪಡಿಸಿದರು.

ಸದರಿ ಪ್ರಕರಣದಲ್ಲಿ ಕೃತ್ಯ ಎಸಗಿದ ಬಾಗಪ್ಪ, ಕೃತ್ಯಕ್ಕೆ ಸಹಕರಿಸಿದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಈ ಇಬ್ಬರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ 24-(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ದೂರು ನೀಡಲು ಸೂಚಿಸಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೇಲ್ವಿಚಾರಕಿ ಎಂ.ಡಿ. ನಾರಾಯಣಕರ ಅವರನ್ನು ಸಸ್ಪೆಂಡ್‌ ಮಾಡಲು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ. ಸಸ್ಪೆಂಡ್‌ ಕ್ರಮ ಜರುಗಿಸದಿದ್ದಲ್ಲಿ ಸಂಸ್ಥೆಯ ನೋಂದಣಿ ರದ್ದು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಯಲು ಬೇಕಾದ ಎಲ್ಲ ರೀತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಇರುವ 41 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತ ಪರೀಕ್ಷೆ ನಡೆದಿದ್ದು, ಏನೆಲ್ಲ ಪೊಲೀಸ್‌ ಬಂದೋಬಸ್ತ್ ಮಧ್ಯೆಯೂ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಈ ಬೆಳವಣಿಗೆ ನಡೆದಿದೆ. ಸದರಿ ಪರೀಕ್ಷಾ ಕೇಂದ್ರವನ್ನು ಅತ್ಯಂತ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದರೆ ಆರೋಪಿ ಹಿಂಭಾಗದಿಂದ ಗೋಡೆ ಹಾರಿ ಬಂದು ಕೃತ್ಯ ಎಸಗಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕೃತ್ಯದ ಹಿಂದೆ ವ್ಯವಸ್ಥಿತ ಜಾಲ ಇರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು. ಎಸ್ಪಿ ಅನುಪಮ ಅಗರವಾಲ, ಪಿಯು ಉಪ ನಿರ್ದೇಶಕ ಪ್ರಜೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next