ವಿಜಯಪುರ: ಮಾ.4ರಿಂದ 23ರ ವರೆಗೆ ನಡೆಯಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳನ್ನು ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನಡೆಸಬೇಕು. ಇಲಾಖೆಯ ನಿಯಮಾನುಸಾರ ಯಾವ ಲೋಪವಾಗದಂತೆ ಪರೀಕ್ಷಾ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ದ್ವಿತೀಯ ಪಿಯು ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ 15,972 ವಿದ್ಯಾರ್ಥಿಗಳು ಹಾಗೂ 11,387 ವಿದ್ಯಾರ್ಥಿನಿಯರು ಸೇರಿ ಒಟ್ಟು 27,359 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ 4 ಸರ್ಕಾರಿ ಕಾಲೇಜು, 27 ಅನುದಾನಿತ ಹಾಗೂ 10 ಅನುದಾನ ರಹಿತ ಕಾಲೇಜುಗಳಲ್ಲಿ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದರು.
ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳ ಕೊಠಡಿ ಹಾಗೂ ಹೋರಾಂಗಣದಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಮತ್ತೆ ಯಾರೂ ಸ್ಮಾರ್ಟ್ ಫೋನ್ ಬಳಸುವಂತಿಲ್ಲ. ಶೀತಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಹಾಗೂ ವಿದ್ಯಾರ್ಥಿಗಳು ನೆಲದ ಮೇಲೆ ಪರೀಕ್ಷೆಯನ್ನು ಬರೆಸುವಂತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದಂಡ ಪ್ರಕ್ರಿಯೆ 1973ರ ಪ್ರಕಾರ ಸೆಕ್ಷನ್ 107 ಹಾಗೂ 110ರ ಪ್ರಕಾರ ಪರೀಕ್ಷೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇನ್ನಿತರ ರೀತಿಯಲ್ಲಿ ಸುಳ್ಳು ಸುದ್ದಿ ಹರಡಿದ ವ್ಯಕ್ತಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಪಿಯು ಪರೀಕ್ಷೆಯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಧೀ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ವ್ಯವಸ್ಥೆ ಹಾಗೂ ಜಾಗೃತಿ ದಳಗಳನ್ನು ನೇಮಿಸಲಾಗುವುದು.
ಪರೀ ಸಮಯದಲ್ಲಿ ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತು ಪಡಿಸಿ, ಅನ್ಯರಿಗೆ ಪ್ರವೇಶ ಕಲ್ಪಿಸಬಾರದು. ಪರೀಕ್ಷಾ ಕ್ರಮಗಳ ಬಗ್ಗೆ
ಯಾವುದೇ ಸುದ್ದಿ ವಾಹಿನಿಗಳು ಬ್ರೇಕಿಂಗ್ ನ್ಯೂಸ್ ಗಳನ್ನು ಬಿತ್ತರಿಸುವಂತಿಲ್ಲ ಎಂದು ಸೂಚಿಸಿದರು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ನಿರ್ದೇಶನಾಲಯದ ಪ್ರಕಾರ ಸಾಧ್ಯವಿದ್ದ ಶಾಲೆಯ ವಿದ್ಯಾರ್ಥಿಗಳನ್ನು ರ್‍ಯಾಂಡ್‌ಮೈಜ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ರ್‍ಯಾಂಡ್‌ಮೈಜೇಶನ್ ಆಗದ ಪರೀಕ್ಷಾ ಕೇಂದ್ರಗಳಲ್ಲಿ ಸಂಪೂರ್ಣ ಸಿಬ್ಬಂದಿಗಳನ್ನು ರ್‍ಯಾಂಡ್ ಮೈಜ್ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ.ಎಸ್. ಪೂಜಾರಿ ಸೇರಿದಂತೆ ಇತರರು ಸಭೆಯಲ್ಲಿ
ಹಾಜರಿದ್ದರು.