ವಿಜಯಪುರ: ನಿರ್ಗತಿಕ ಮಕ್ಕಳಿಗಾಗಿ ಇರುವಂತಹ ಪಾಲನಾ ಸಂಸ್ಥೆಗಳು ಮತ್ತು ಅನಾಥಾಶ್ರಮಗಳು ಕಾನೂನಿನ ರಿತ್ಯ ನೋಂದಣಿ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿ ಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ತನಿಖಾ ಸಮಿತಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಬಡ, ನಿರ್ಗತಿಕ ಹಾಗೂ ಅನಾಥಾಶ್ರಮ ನಡೆಸುವಂತಹ ಪಾಲನಾ ಸಂಸ್ಥೆಗಳು ಕಾನೂನಿನ ರಿತ್ಯ ಸರಿಯಾದ ರೀತಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಪರಿಶೀಲಿಸಬೇಕು. ಈ ಕುರಿತಂತೆ ಪರಿಶೀಲನಾ ಸಮಿತಿ ಮೂಲಕ ಪರಿಶೀಲನೆ ನಡೆಸಿ, ನೋಂದಣಿ ಕ್ರಮ ಬದ್ಧವಾಗಿರದ ಪಾಲನಾ ಸಂಸ್ಥೆಗಳ ನೋಂದಣಿ ರದ್ಧತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಇಂತಹ ಅನ ಧಿಕೃತ ಸಂಸ್ಥೆಗಳ ಬಗ್ಗೆ ತನಿಖಾ ಸಮಿತಿ ಮೂಲಕ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದ ಅವರು, ತಪ್ಪಿತಸ್ಥ ಸಂಸ್ಥೆಗಳ ನೋಂದಣಿ ರದ್ಧತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದ ಅವರು, ನೋಂದಾಯಿತ ಮಕ್ಕಳ ಪಾಲನಾ ಸಂಸ್ಥೆಗಳು ಕ್ರಮಬದ್ಧ ನೋಂದಣಿ ಹೊಂದಿದ್ದಲ್ಲಿ ಮಾತ್ರ ಸರ್ಕಾರದ ಅನುದಾನ ನೀಡಲು ಅವಕಾಶವಿದ್ದು, ಈ ಕುರಿತಂತೆ ಸಮಿತಿ ರಚಿಸುವ ಮೂಲಕ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪದ್ಧತಿ ನಿಯಂತ್ರಣಕ್ಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಪದೇ ಪದೇ ಬಾಲ್ಯವಿವಾಹ ನಡೆಯುವಂತಹ ಜನಾಂಗ ಮತ್ತು ಪ್ರದೇಶಗಳಲ್ಲಿ ಗಮನ ನೀಡುವಂತೆ ಸೂಚಿಸಿದ ಅವರು, ಹೆಚ್ಚು ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವಂತಹ ಸಮುದಾಯಗಳನ್ನು ಗುರುತಿಸಿ ಅವರನ್ನು ಮನವರಿಕೆ ಮಾಡುವ ಮೂಲಕ ಬಾಲ್ಯವಿವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತಕ್ಷಣ ಮಕ್ಕಳ ರಕ್ಷಣಾ ಘಟಕಕ್ಕೆ ಎಫ್‌ಐಆರ್ ಪ್ರತಿ ಸಲ್ಲಿಸಲು ಪೊಲೀಸ್ ಇಲಾಖೆ ಅಧಿ ಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ಬಾಲಮಂದಿರಕ್ಕೆ ಅವಶ್ಯಕ ವೈದ್ಯರೋಬ್ಬರನ್ನು ಚಿಕಿತ್ಸೆಗಾಗಿ ನಿಯೋಜಿಸಬೇಕು. ಅದರಂತೆ ಬಾಲಮಂದಿರಗಳಿಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಪೂರೈಸುವ ಕುರಿತಂತೆ ಸಂಬಂಧಪಟ್ಟ ಸಂಘ-ಸಂಸ್ಥೆಗಳಿಗೆ ಮನವಿ ಮಾಡಿದ ಅವರು, ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಾಲಕಿಯರ ಬಾಲಮಂದಿರದ ಆವರಣದಲ್ಲಿ ಸಿಮೆಂಟ್ ಆಸನ ಪೂರೈಕೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.