Advertisement

ಸೋಂಕಿತರ ಸಂಪರ್ಕ; ತನಿಖೆ ಚುರುಕಾಗಲಿ

01:34 PM Apr 16, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸಲು ತನಿಖೆ ತೀವ್ರಗೊಳಿಸುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್‌ ಬಿಸ್ವಾಸ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ನಗರದ ನೂತನ ಪ್ರವಾಸ ಮಂದಿರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ್‌-19 ಕುರಿತು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಗರದಲ್ಲಿ ಕೋವಿಡ್ ಸೋಂಕಿತರು ದೃಢಪಟ್ಟ ಹಿನ್ನೆಲೆಯಲ್ಲಿ ಕಂಟೆನ್ಮೆಂಟ್‌ ಮತ್ತು ಬಫರ್‌ ಜೋನ್‌ ವ್ಯಾಪ್ತಿಯಲ್ಲಿ ಜ್ವರ, ಕೆಮ್ಮು, ನೆಗಡಿ ಮತ್ತು ತೀವ್ರತರ ಉಸಿರಾಟದ ತೊಂದರೆ ಇರುವವರನ್ನು ಯೋಜನಾಬದ್ಧವಾಗಿ ಗುರುತಿಸುವ ಕೆಲಸ ಮಾಡಬೇಕು. ಕೋವಿಡ್ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲರಲ್ಲೂ ತ್ವರಿತವಾಗಿ ಗುರುತಿಸುವ ಮೂಲಕ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್ ಸೋಂಕಿತರೊಂದಿಗೆ ಸಾಮಾಜಿಕ ಮತ್ತು ಭೌಗೋಳಿಕ ಸಂಪರ್ಕ ಇರುವವರನ್ನು ಅದರಲ್ಲೂ 60 ವರ್ಷ ಮೇಲ್ಪಟ್ಟವರನ್ನು ತ್ವರಿತವಾಗಿ ಗುರುತಿಸಿ ನಿಗಾ ಇರಿಸಬೇಕು. ಸೋಂಕಿತರು ಪತ್ತೆಯಾಗಿರುವ ಬಫರ್‌ ಜೋನ್‌ ವ್ಯಾಪ್ತಿಯಲ್ಲಿ ಯಾರಾದರೂ ಜ್ವರ, ಕೆಮ್ಮು, ನೆಗಡಿ, ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ, ಔಷಧಿ ಅಂಗಡಿಗಳಲ್ಲಿ ನೇರವಾಗಿ ಔಷಧಿ, ಮಾತ್ರೆ ಖರೀದಿಸಿದ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಇದಲ್ಲದೇ ಔಷಧಿ ಅಂಗಡಿಗಳಿಂದ ಇ-ಮೇಲ್‌ ಮೂಲಕ ನಿಗದಿತ ನಮೂನೆಯಲ್ಲಿ ಔಷಧಿ ಮಾರಾಟದ ಬಗ್ಗೆ ಔಷಧಿ  ಖರೀದಿಸಿದ ವ್ಯಕ್ತಿ, ಪ್ರೀಸ್ಕ್ರೀಪಶನ್‌ ನೀಡಿರುವ ವೈದ್ಯರ ಮಾಹಿತಿ ಸಂಗ್ರಹಿಸಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಎಚ್‌ಐ ಸೋಂಕಿತರು, ಕ್ಷಯರೋಗ, ಕುಷ್ಠರೋಗದಂಥ ಕಾಯಿಲೆ ಇರುವ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಜಿಲ್ಲೆಯಲ್ಲಿ ಆಗುವಂತಹ ಪ್ರತಿಯೊಂದು ನೈಸರ್ಗಿಕ ಸಾವಿನ ಕುರಿತಂತೆ ಸಂಬಂಧಪಟ್ಟ ವೈದ್ಯಕೀಯ ತಜ್ಞರಿಂದ ದೃಢೀಕರಣಗೊಳಿಸುವ ಕ್ರಮ ಜಾರಿಗೊಳಿಸಬೇಕು. ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿ ಕರ್ತವ್ಯದಲ್ಲಿರುವ ಅಧಿಕಾರಿ ಸಿಬ್ಬಂದಿಗಳು ಅವಶ್ಯಕ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಕೋವಿಡ್ ಮಹಾಮಾರಿ ಸಾಂಕ್ರಾಮಿಕ ರೋಗವಾಗಿದ್ದು, ಈ ಕುರಿತು ಪ್ರತಿಯೊಬ್ಬರು ಎಚ್ಚರಿಕೆ ವಹಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಈ ಕಾಯಿಲೆ ಕಟ್ಟಿಹಾಕಲು ಜಿಲ್ಲಾಡಳಿತದ ಮೂಲಕ ಉನ್ನತ ಮಟ್ಟದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್‌ ಅನ್ವಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೋವಿಡ್‌-19 ಸಾಂಕ್ರಾಮಿಕ ಹರಡುವಿಕೆಯ ಆತಂಕಗಳನ್ನು ಹೊಂದಿದ್ದು, ಈ ಕುರಿತಂತೆ ಗಂಭೀರವಾಗಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next