ವಿಜಯಪುರ: ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಶ್ವಾಸಕೋಶ ತೊಂದರೆ ಸಂಬಂಧಿತ ರೋಗಿಗಳು ಕಂಡುಬಂದ ತಕ್ಷಣ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ಹರಡದಂತೆ ಎಚ್ಚರಿಸುವ ಜತೆಗೆ ಶ್ವಾಸಕೋಶ ತೊಂದರೆ ಸಂಬಂಧಿತ ಸಂಶಯಾಸ್ಪದ ರೋಗಿಗಳು ಚಿಕಿತ್ಸೆಗೆ ಬಂದಲ್ಲಿ ತಕ್ಷಣ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕು. ವೈದ್ಯರು ಎಂದಿನಂತೆ ಭಯಪಡದೆ ತಮ್ಮ ಸೇವೆ ಮುಂದುವರೆಸಲು ತಿಳಿಸಿದರು. ಜ್ವರ, ನೆಗಡಿ, ಕೆಮ್ಮು ಮತ್ತು ತೀವ್ರ ಶ್ವಾಸಕೋಶ ತೊಂದರೆ ಇರುವ ರೋಗಿಗಳು ಕೌಟುಂಬಿಕ ವೈದ್ಯರು ತಮ್ಮ ಅನುಭವ ಆಧಾರದ ಮೇಲೆ ರೋಗಿಯಲ್ಲಿ ಕೋವಿಡ್-19 ಲಕ್ಷಣಗಳನ್ನು ಗುರುತಿಸಲು ಪ್ರಯತ್ನಿಸಬೇಕು. ತುರ್ತು ಮತ್ತು ಯುದ್ಧ ರೀತಿ ಸಂದರ್ಭ ಎದುರಾಗಿದ್ದು ವೈದ್ಯರಿಗೆ ಯಾವುದೇ ರೀತಿಯ ಭಯಪಡದೇ ಸಮಾಜಕ್ಕೆ ಅಗತ್ಯವಾಗಿರುವ ತಮ್ಮ ಸೇವೆಯನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಕೊರೊನಾ ಸಂಶಯಾಸ್ಪದ ರೋಗಿಗಳ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ, ರೋಗಿಯನ್ನು ಪ್ರತ್ಯೇಕವಾಗಿ ಆಸ್ಪತೆಯಲ್ಲಿಯೇ ಚಿಕಿತ್ಸೆ ನೀಡಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಡಳಿತದೊಂದಿಗೆ ಜಿಲ್ಲೆ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಸಹಕಾರ ನೀಡಲು ಕೋರುತ್ತಿದ್ದು, ಸಂಕಷ್ಟದ ಈ ಸಂದರ್ಭದಲ್ಲಿ ಖಾಸಗಿ ವೈದ್ಯರು ಮುಕ್ತವಾಗಿ ಆಸ್ಪತ್ರೆಯ ಸೇವೆ ನೀಡಬೇಕು. ಒಂದೊಮ್ಮೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದಲ್ಲಿ ತಜ್ಞರ ಸಲಹೆಯಂತೆ ರೋಗಿಯ ಜೀವ ಉಳಿಸಲು ಮೊದಲ ಆದ್ಯತೆ ನೀಡಬೇಕು. ಲಾಕ್‌ಡೌನ್‌ಇದ್ದರೂ ವೈದ್ಯರು ಸೇವೆ ನೀಡಲು ಪೊಲೀಸರ ಸಹಕಾರ ಪಡೆಯಲೂ ಸೂಚಿಸಿದರು.
ಔಷಧ ತರುವ ವಾಹನಗಳಿಗೆ ನಿರ್ಬಂಧವಿಲ್ಲ. ಔಷಧಿ ತರಿಸಿಕೊಳ್ಳುವ ವಾಹನಗಳಿಗೆ ಜಿಲ್ಲಾಡಳಿತ ಪಾಸ್ ನೀಡಲಿದೆ. ಕೆಲವೆಡೆ ನಿರ್ಲಕ್ಷ ಸಂದರ್ಭದಲ್ಲಿ ಮಾತ್ರ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ವೈದ್ಯರು ಆತ್ಮಸ್ಥರ್ಯ ಕಳೆದುಕೊಳ್ಳದೇ ಸೇವೆ ಸಲ್ಲಿಸುವಂತೆ ಮನವಿ ಮಾಡಿದರು. ಎಸ್ಪಿ ಅನುಪಮ್ ಅಗರವಾಲ್ ಮಾತನಾಡಿ, ಇಂಥ ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ಬದ್ಧತೆ ನೀಡುವಲ್ಲಿ ವೈದ್ಯರು ರೋಗಿಗಳ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸಬಾರದು. ಸಮಸ್ಯೆ ಕಂಡು ಬಂದಲ್ಲಿ ಜಿಲ್ಲಾ ಧಿಕಾರಿ ಅಥವಾ ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ವೈದ್ಯಕೀಯ ರಂಗದ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸುವಂತೆ ಹೇಳಿದರು. ಜಿಪಂ ಸಿಇಒ ಗೋವಿಂದರಡ್ಡಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ, ಡಾ|ಮುಕುಂದ ಗಲಗಲಿ, ಜಿಲ್ಲಾ ಸರ್ಜನ್ ಡಾ| ಶರಣಪ್ಪ ಕಟ್ಟಿ ಸೇರಿದಂತೆ
ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.