Advertisement

ರಾಷ್ಟ್ರಮಟ್ಟಕ್ಕೆ 2, ರಾಜ್ಯಮಟ್ಟಕ್ಕೆ 3 ಆರೋಗ್ಯ ಕೇಂದ್ರ ಆಯ್ಕೆ

04:32 PM Jun 17, 2020 | Naveen |

ವಿಜಯಪುರ: ಜಿಲ್ಲೆಯಿಂದ ಸ್ವಚ್ಛ ಭಾರತ ಯೋಜನೆಯಲ್ಲಿ ಜಿಲ್ಲೆಯ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಜ್ಯಮಟ್ಟಕ್ಕೆ ಹಾಗೂ 2 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಶಸ್ತಿ ನಾಮನಿರ್ದೇಶನ ಸಮಿತಿ ಹಾಗೂ ಜಿಲ್ಲಾ ಗುಣಮಟ್ಟ ಭರವಸೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ತಿಕೋಟಾ ಹಾಗೂ ಹೊನವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ. ಮನಗೂಳಿ, ಹೊರ್ತಿ ಹಾಗೂ ನಗರದ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಫಲಿತಾಂಶ ಬರಬೇಕಿದೆ. ಎನ್‌.ಕ್ಯು,ಎ.ಎಸ್‌ ರಾಷ್ಟ್ರಮಟ್ಟದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದ ಏಕೈಕ ಜಿಲ್ಲೆ ನಮ್ಮ ವಿಜಯಪುರವಾಗಿದೆ ಎಂದರು.

ಕಳೆದ 2017-18ನೇ ಸಾಲಿನಲ್ಲಿ ಜಿಲ್ಲಾಸ್ಪತ್ರೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಪ್ರಶಸ್ತಿ ಪಡೆದುಕೊಂಡಿತ್ತು. ಮುಂದಿನ 2021 ಫೆಬ್ರುವರಿಗೆ ಅದರ ಅವಧಿ ಮುಗಿಯಲಿದೆ. ಹೆಚ್ಚಿನ ರೀತಿಯಲ್ಲಿ ಆಸ್ಪತ್ರೆ ಒಳಾಂಗಣ ಹಾಗೂ ಹೊರಾಂಗಣ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ತಾಲೂಕು ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಆಸ್ಪತ್ರೆಗಳಲ್ಲಿ ಯಾವುದೇ ತೊಂದರೆಗಳು ಆಗದಂತೆ ನಿರ್ವಹಿಸಬೇಕು ಎಂದು ಸೂಚಿಸಿದರು.

ಸ್ವಚ್ಛ ಭಾರತ ಯೋಜನೆಯಡಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಕೈಗೊಳ್ಳಬೇಕು ಹಾಗೂ ಅನುಷ್ಠಾನಗೊಳಬೇಕು. ಕಳೆದ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಹೆಚ್ಚಿಸಬೇಕು. ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿದ ಆಸ್ಪತ್ರೆಗಳ ಪೈಕಿ ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಶೇ. 22 ಹೆಚ್ಚಳವಾಗಬೇಕು ಎಂದರು. ಸಭೆಯಲ್ಲಿ ಎಡಿಸಿ ಡಾ| ಔದ್ರಾಮ್‌, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ. ಬಿರಾದಾರ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಡಾ| ಕವಿತಾ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next