ವಿಜಯಪುರ: ಸಮಾಜದ ಅಭಿವೃದ್ಧಿ ವಿಷಯದಲ್ಲಿ ಪತ್ರಕರ್ತ ವ್ಯಕ್ತಿನಿಷ್ಠೆಗೆ ಒತ್ತು ಕೊಡದೇ ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿದಲ್ಲಿ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯ. ಇದೇ ವೇಳೆ ಪತ್ರಕರ್ತ ವಾಸ್ತವ ವರದಿಗಾರಿಕೆ ಮಾಡಬೇಕೇ ಹೊರತು ತೀರ್ಪು ನೀಡುವ ಕೆಲಸ ಮಾಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ರವಿವಾರ ನಗರದ ಜಿಪಂ ಅವರಣದಲ್ಲಿರುವ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಪತ್ರಿಕಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತ ಹಾಗೂ ಆಡಳಿತಗಾರರು ಒಂದಾಗಿ ಸಾಗಿದಲ್ಲಿ ಸಮಾಜದಲ್ಲಿ ನಿರೀಕ್ಷಿತ ಆಭಿವೃದ್ಧಿ ಸಾಧ್ಯ ಎಂದರು.
ಉತ್ತಮ ಪತ್ರಕರ್ತನ ಗುಣಗಳನ್ನು ಆಡಳವಡಿಸಿಕೊಂಡಲ್ಲಿ ಆಡಳಿತ ನಡೆಸುವ ಅಧಿಕಾರಿ ಕೂಡ ಉತ್ತಮ ಆಡಳಿತ ನೀಡಬಲ್ಲ. ಪತ್ರಕರ್ತ-ಅಧಿಕಾರಿ ಇಬ್ಬರಿಗೂ ಉತ್ತಮ ಸಂವಹನ ಕೌಶಲ್ಯ, ಧೈರ್ಯ, ಸಾಹಸ ಈ ಎಲ್ಲ ಗುಣಗಳಿದ್ದರೆ ಮಾತ್ರ ಉತ್ತಮ ಆಡಳಿತಗಾರನಾಗಿ ಸಮಾಜದಲ್ಲಿ ನಿರೀಕ್ಷಿತ ಆಭಿವೃದ್ಧಿ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿದೆ. ಒಂದೊಮ್ಮೆ ಪತ್ರಕರ್ತ ಹಾಗೂ ಅಧಿಕಾರಿಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗಿದಲ್ಲಿ ಸಮಾಜಕ್ಕೆ ಅಪಾಯ ಸಾಧ್ಯತೆ ಹೆಚ್ಚು ಎಂದು ವಿವರಿಸಿದರು.
ಪತ್ರಕರ್ತ ಹಾಗೂ ಅಧಿಕಾರಿಗಳು ವೃತ್ತಿ ಜೀವನ ಅರಂಭಿಸಿದ ಮೇಲೆ ಅಧ್ಯಯನ ವಿಮುಖರಾಗುತ್ತಾರೆ. ಇದರಿಂದ ವೃತ್ತಿ ಕೌಶಲ್ಯತೆ, ನೈಪುಣ್ಯತೆ ಕಳೆದುಕೊಳ್ಳುತ್ತಾರೆ. ಓದಿಗೆ ಆದ್ಯತೆ ನೀಡದ ಪತ್ರಕರ್ತನ ವರದಿಗಾರಿಕೆಯಲ್ಲಿ ಶಕ್ತಿಯೇ ಇರುವುದಿಲ್ಲ. ಹೀಗಾಗಿ ಆಧ್ಯಯನ ಶೀಲತೆ ಹಾಗೂ ಜ್ಞಾನ ಸಂಪಾದನೆ ಮೂಲಕ ಜನಮನ ಮುಟ್ಟುವ ವರದಿಗಾರಿಕೆ ಮಾಡಬೇಕು. ಪತ್ರಕರ್ತರು ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ವಸ್ತುನಿಷ್ಠ ವರದಿ ಮಾಡಿದ ಸಂದರ್ಭದಲ್ಲಿ ವಾಸ್ತವವನ್ನು ಒಪ್ಪಿಕೊಳ್ಳುವ ಕೆಲಸವನ್ನು ಅಧಿಕಾರಿಗಳು ಮಾಡಿದಲ್ಲಿ ಪರಿಸ್ಥಿತಿಯಲ್ಲಿನ ಬದಲಾವಣೆ ಸಾಧ್ಯ ಎಂದು ವಿಶ್ಲೇಷಿಸಿದರು.
ಎಸ್ಪಿ ಪ್ರಕಾಶ ಅಮೃತ ನಿಕ್ಕಂ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ ಸಹಾಯಕ ನಿರ್ದೇಶಕ ಡಾ| ಬಿ.ಆರ್. ರಂಗನಾಥ ಕುಳಗಟ್ಟೆ, ವಿಜಯಪುರ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್, ಕಾರ್ಯನಿರತ ಪತ್ರಕಕರ್ತ ಸಂಘದ ಜಿಲ್ಲಾಧ್ಯಕ್ಷ ಶರಣು ಮಸಳಿ, ಗೌರವಾಧ್ಯಕ್ಷ ಸಚೇಂದ್ರ ಲಂಬು, ಫಿರೋಜ್ ರೋಜಿನದಾರ ಪಾಲ್ಗೊಂಡಿದ್ದರು.
ಗ್ರಾಮೀಣ ಕಾರ್ಯದರ್ಶಿ ದೌಲತರಾಯ ವಡವಡಗಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಕುಮಾರ ಕೋತವಾಲ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ದೇವೇಂದ್ರ ಹೆಳವರ ವಂದಿಸಿದರು.