ವಿಜಯಪುರ: ಪ್ರವಾಹ ಹಾಗೂ ಕೋವಿಡ್ ಸಂಕಷ್ಟದಿಂದ ಕಂಗೆಟ್ಟಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಬಿತ್ತನೆಗೆ ಅನ್ನದಾತ ಸಿದ್ಧತೆ ನಡೆಸಿದ್ದಾನೆ. ಮಾಸಾಂತ್ಯಕ್ಕೆ ನಾಲ್ಕು ದಿನ ಇರುವಾಗಲೇ ಮೇ ತಿಂಗಳಲ್ಲಿ ಸುರಿದಿರುವ ಮಳೆಯಲ್ಲಿ ರೈತರು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಗೆ ನೆರೆ-ಬರ ಎಂಬ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಕೃಷಿ ವ್ಯವಸ್ಥೆ ನಂಬಿದವರು ಹೈರಾಣಾಗಿದ್ದರೂ, ಉತ್ತಮ ಕೃಷಿ ಭವಿಷ್ಯದ ನಿರೀಕ್ಷೆಯಲ್ಲಿ ಮತ್ತೂಂದು ಹೋರಾಟಕ್ಕೆ ಸಿದ್ಧತಾಗುತ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಅನ್ನದಾತರು ಏನೆಲ್ಲ ಕನಸುಗಳನ್ನು ಇರಿಸಿಕೊಂಡು ಪ್ರತಿ ವರ್ಷ ಬಿತ್ತನೆಗೆ ಮುಂದಾದರೂ ಅತಿವೃಷ್ಟಿಯಿಂದ ಪ್ರವಾಹ ಇಲ್ಲವೇ ಅನಾವೃಷ್ಟಿಯಿಂದ ಬರ ಎದುರಿಸಬೇಕಾದ ದುಸ್ಥಿತಿ ಇದೆ. ಜಿಲ್ಲೆಯ ಇಕ್ಕೆಲಗಳಲ್ಲಿ ಹರಿಯುವ ಜೀವ ನದಿಗಳಾದ ಕೃಷ್ಣೆ, ಭೀಮೆ ಮಾತ್ರವಲ್ಲ, ಜಿಲ್ಲೆಯ ಹೃದಯ ಭಾಗದಲ್ಲಿ ನೂರಾರು ಕಿಮೀ ಹರಿಯುವ ಡೋಣಿ ನದಿ ಕೂಳ್ಳ ಕಳೆದ ವರ್ಷ ಪ್ರವಾಹ ಸೃಷ್ಟಿಸಿ ರೈತರು ಬೆಳೆದ ಬೆಳೆಯನ್ನು ಆಪೋಷಣ ಪಡೆದಿದೆ.
ಮತ್ತೊಂದೆಡೆ ಕಳೆದ ಒಂದು ದಶಕದಲ್ಲಿ 6-7 ವರ್ಷ ಅನಾವೃಷ್ಟಿ ಕಾಡಿ ಜಿಲ್ಲೆಯಲ್ಲಿ ಭೀಕರ ಬರವನ್ನೂ ಕಂಡಿದೆ. ನೆರೆ-ಬರದ ಹಾನಿಯ ಪರಿಹಾರ ನೀಡುವ ಆಶಯದಿಂದ ಕೇಂದ್ರ-ರಾಜ್ಯ ಸರ್ಕಾರಗಳ ಅಧ್ಯಯನ ಸಮಿತಿಗಳು, ಸಚಿವರು, ವಿಪಕ್ಷಗಳ ನಾಯಕರ ದಂಡು ಬಂದು ಹೋಗಿವೆ. ಜಿಲ್ಲೆಯ ರೈತರಿಗೆ ಸಿಕ್ಕ ಪರಿಹಾರ ಮಾತ್ರ ಆನೆಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದರ ಮಧ್ಯೆ ಕಳೆದ ಮೂರು ತಿಂಗಳಿಂದ ಬಾಧಿಸುತ್ತಿರುವ ಕೋವಿಡ್-19 ಸೋಂಕಿನ ಅಬ್ಬರ, ಲಾಕ್‌ಡೌನ್ ಪರಿಣಾಮ ಸಂಗ್ರಹ ಸಾಧ್ಯವಿಲ್ಲದ ಹಲವು ಬೆಳೆಗಳನ್ನು ಮಾರಾಟ ಮಾಡಲಾಗದೇ ರೈತರು ಆರ್ಥಿಕ ಸಂಕಷ್ಟ ಎದುರಿಸಿ, ಕೈಸುಟ್ಟುಕೊಂಡಿದ್ದಾರೆ. ಪ್ರಕೃತಿ ಸೃಷ್ಟಿಸಿದ ಇಂಥ ಅವಾಂತರಗಳನ್ನೆಲ್ಲ ಸಹಿಸಿಕೊಂಡು ಜಿಲ್ಲೆಯ ಅನ್ನದಾತ ಮತ್ತೂಮ್ಮೆ ಮುಂಗಾರು ಹಂಗಾಮಿನ ಸವಾಲಿಗೆ ಎದೆಯೊಡ್ಡಲು ಸನ್ನದ್ಧರಾಗಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 4.84 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇರಿಸಿಕೊಳ್ಳಲಾಗಿದೆ. ಇದರಲ್ಲಿ 2.80 ಲಕ್ಷ ಹೆಕ್ಟೇರ್ ತೊಗರಿ, 49 ಸಾವಿರ ಹೆಕ್ಟೇರ್ ಮೆಕ್ಕೇಜೋಳ, 30 ಸಾವಿರ ಹೆಕ್ಟೇರ್ ಸಜ್ಜೆ, ಹೆಸರು, ಸೇಂಗಾ ಸೇರಿದಂತೆ ಮುಂಗಾರು ಹಂಗಾಮಿನ ಬಿತ್ತನೆಗಳಾದ ಇತರೆ ಬೆಳೆಗಳ ಬಿತ್ತನೆಗೆ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 657 ಮಿಮೀ ಮಳೆ ಆಗಬೇಕಿದ್ದು, ಮಾಸಾಂತ್ಯಕ್ಕೆ ವಾಡಿಕೆಯಂತೆ 46 ಮಿಮೀ ಮಳೆ ಸುರಿಯುವ ನಿರೀಕ್ಷೆಯಲ್ಲಿ ತಿಂಗಳಾಂತ್ಯಕ್ಕೆ ನಾಲ್ಕು ದಿನ ಇರುವಾಗಲೇ 33 ಮಿಮೀ ಮಳೆಯಾಗಿದೆ. ಈ ಮಳೆಯನ್ನು ಆಧರಿಸಿ ಈಗಾಗಲೇ ಬಿತ್ತನೆಗೆ ಪೂರಕವಾಗಿ ರೈತರು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಂದೆರಡು ಮಳೆ ಸುರಿದರೆ ಜೂನ್ ಮೊದಲ ವಾರದಲ್ಲಿ ನಿರೀಕ್ಷಿತ ಮಳೆಯಾದಲ್ಲಿ ಜಿಲ್ಲೆಯಲ್ಲಿ ಭರ್ಜರಿ ಬಿತ್ತನೆ ಕಾರ್ಯ ಆರಂಭಗೊಳ್ಳಲಿವೆ.
5600 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು: ಇನ್ನು ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಅಗತ್ಯವಾದ ತೊಗರಿ, ಮೆಕ್ಕಜೋಳ, ಹೆಸರು, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಈಗಾಗಲೇ 5600 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದು, ಜೂನ್ ಮೊದಲ ವಾರದಿಂದ ರೈತ ಸಂಪರ್ಕ ಕೇಂದ್ರಗಳಿಂದ ವಿತರಣೆ ಮಾಡಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
72 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ: ಜಿಲ್ಲೆಗೆ ಏಪ್ರೀಲ್-ಸೆಪ್ಟೆಂಬರ್ ವರೆಗೆ 72 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಏಪ್ರೀಲ್ ತಿಂಗಳಲ್ಲೇ 18 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದಲ್ಲದೇ ಮೇ-ಜೂನ್ ತಿಂಗಳಲ್ಲಿ ಇನ್ನೂ 10 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಪ್ರಸಕ್ತ ವರ್ಷದ ಮುಂಗಾರು ಹಂಗಾಮು ಬಿತ್ತನೆಗೆ ಜಿಲ್ಲೆಯ ರೈತರು ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಇನ್ನು ಒಂದೆರಡು ಮಳೆ ಸುರಿದರೆ ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ-ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗುವುದು.
ಶಿವಕುಮಾರ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ವಿಜಯಪುರ
ಜಿ.ಎಸ್.ಕಮತರ