Advertisement

ಪ್ರವಾಹ ಎದುರಿಸಲು ಜಿಲ್ಲೆ ಯುದ್ಧ ಸನ್ನದ್ಧ

01:22 PM Jun 29, 2020 | Naveen |

ವಿಜಯಪುರ: ಕಳೆದ ವರ್ಷವೂ ಸೇರಿದಂತೆ ದಶಕದಲ್ಲಿ ಸಂಭವಿಸಿದ ಭೀಕರ ಸ್ವರೂಪದ 4-5 ಪ್ರವಾಹಗಳು ವಿಜಯಪುರ ಜಿಲ್ಲೆಗಳ ನದಿ ಪಾತ್ರಗಳ ಜನರನ್ನು ಹೈರಾಣಗಿಸಿದೆ. ಈ ಕಹಿ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಮಳೆಗಾಲದ ಈ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.

Advertisement

ಜಿಲ್ಲೆಗೆ ನೆರೆ ಉಂಟು ಮಾಡುವಲ್ಲಿ ಕಾರಣವಾಗಿರುವ ನೆರೆಯ ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದೆ. ಜೊತೆಗೆ ಜಿಲ್ಲೆಯ ಅ ಧಿಕಾರಿಗಳಿಗೆ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇರಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಉತ್ತರ ಕರ್ನಾಟಕದ ಜೀವ ನದಿ ಎನಿಸಿರುವ ಕೃಷ್ಣೆ ಪ್ರವಾಹ ಸೃಷ್ಟಿಸಿದರೆ ಜಿಲ್ಲೆಯ ಗಡಿಯಲ್ಲಿರುವ ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಮುದ್ದೇಬಿಹಾಳ ತಾಲೂಕಗಳ ನದಿ ಪಾತ್ರದ ಹಳ್ಳಿಗಳು ತತ್ತರಿಸುತ್ತವೆ. ಕೃಷ್ಣೆಯ ಪ್ರಮುಖ ಉಪ ನದಿಗಳಲ್ಲಿ ಒಂದಾದ ಭೀಮೆ ಕೂಡ ಜಿಲ್ಲೆಯ ಉತ್ತರದಲ್ಲಿ ಮೈಚಾಚಿ ಹರಿಯುತ್ತಿದ್ದು, ಚಡಚಣ, ಇಂಡಿ, ಸಿಂದಗಿ ತಾಲೂಕಿನ ತೀರ ಪ್ರದೇಶದ ಹಳ್ಳಿಗಳಲ್ಲಿ ಜನರು ಪ್ರವಾಹ ಎಂದರೆ ಸಾಕು ನಡುಗುತ್ತಾರೆ. ಇನ್ನು ಜಿಲ್ಲೆಯ ಮಧ್ಯದಲ್ಲಿ ಹರಿಯುವ ಡೋಣಿ ನದಿ ಪ್ರಮಾಣದಲ್ಲಿ ಸಣ್ಣದಾದರೂ ಹಾನಿ ಮಾಡುವಲ್ಲಿ ಪ್ರಮುಖ ನದಿಗಳಿಗಿಂತ ಕಡಿಮೆ ಏನಿಲ್ಲ. ಈ ನದಿ ತಿಕೋಟಾ, ಬಬಲೇಶ್ವರ, ವಿಜಯಪುರ, ಬಸವನಬಾಗೇವಾಡಿ, ದೇವರಹಿಪ್ಪರಗಿ ಹಾಗೂ ತಾಳಿಕೋಟೆ ತಾಲೂಕುಗಳ ಹಳ್ಳಿಗಳಲ್ಲಿ ಸಾಮಾನ್ಯ ಮಳೆಗೂ ಅಬ್ಬರಿಸುವುದು ಸಾಮಾನ್ಯ.

2007, 2008 ಹಾಗೂ 2009 ಆಗಸ್ಟ್‌-ಸೆಪ್ಟೆಂಬರ್‌, 2014 ಸೆಪ್ಟೆಂಬರ್‌-ಆಕ್ಟೋಬರ್‌, 2019 ಆಗಸ್ಟ್‌ ತಿಂಗಳಲ್ಲಿ ಸಂಭವಿಸಿದ ಭೀಕರ ಪ್ರವಾಹಗಳು ವಿಜಯಪುರ ಜಿಲ್ಲೆಯ ಜನರಲ್ಲಿ ನಡುಕ ಹುಟ್ಟಿಸಿವೆ. ಅದರಲ್ಲೂ ನದಿ ತೀರದಲ್ಲಿರುವ ಗ್ರಾಮೀಣ ಜನರ ಬದುಕನ್ನು ಪದೇ ಪದೇ ಬೀದಿಗೆ ತಂದು ನಿಲ್ಲಿಸಿವೆ. ಕಳೆದ ವರ್ಷದ ಪ್ರವಾಹಕ್ಕೆ ಜಿಲ್ಲೆಯ 21 ಗ್ರಾಮಗಳು ಬಹುತೇಕ ಜಲಾವೃತವಾಗಿ, 54 ಹಳ್ಳಿಗಳ ಜನರು ಸಂಕಷ್ಟ ಎದುಸಿದ್ದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಏನೆಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಲೇ ಇವೆ. ಇದರ ಮಧ್ಯೆಯೂ ನೆರೆಯ ಮಹಾರಾಷ್ಟ್ರ ರಾಜ್ಯದ ತನ್ನ ನೆಲದಲ್ಲಿ ಹರಿಯುವ ಕೃಷ್ಣೆ-ಭೀಮೆ ನದಿಗಳಿಗೆ ನಿರ್ಮಿಸಿರುವ ಜಲಾಶಯಗಳಿಂದ ಏಕಾಏಕಿ ನೀರು ಹರಿಸಿ ಸೃಷ್ಟಿಸಿದ ಪ್ರವಾಹ ಸಂಕಷ್ಟವೇ ಜಿಲ್ಲೆಯನ್ನು ಹೆಚ್ಚು ಬಾಧಿಸಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಮಳೆಗಾಲದ ಆರಂಭದಲ್ಲೇ ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆಗಳನ್ನು ನಡೆಸಿದೆ. ಅಲ್ಲದೇ ಜಿಲ್ಲೆಯ ಎಲ್ಲ ತಹಶೀಲ್ದಾರ್‌ರಿಂದ ಪ್ರತಿ ತಾಲೂಕಿನಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಕೈಗೊಂಡ ಸಿದ್ಧತಾ ಕ್ರಮಗಳ ವರದಿ ಪಡೆಯಲು ಮುಂದಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲು ಸೂಚನೆ ನೀಡಿದೆ.

ಹಿಂದಿನ ಕಹಿ ಅನುಭವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಹಾಗೂ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಕೃಷ್ಣಾ-ಭೀಮಾ ನದಿಗಳಿಗೆ ನಿರ್ಮಿಸಿರುವ ಕೊಯ್ನಾ, ಉಜಿನಿ, ವೀರ ಜಲಾಶಯಗಳ ಹೊರ ಹರಿವಿನ ಮೇಲೆ ಕಣ್ಣು ಇರಿಸಿದೆ. ಅಲ್ಲದೇ ಈ ನದಿಗಳಿಗೆ ರಾಜ್ಯದ ಆಲಮಟ್ಟಿ, ನಾರಾಯಣಪುರ ಬಳಿ ನಿರ್ಮಿಸಿರುವ ಮಹಾ ಜಲಾಶಯಗಳು ಸೇರಿದಂತೆ ವಿವಿಧ ಸಣ್ಣಪುಟ್ಟ ಜಲಾಶಯಗಳಿಗೆ ಹರಿಯುತ್ತಿರುವ ಒಳ ಹರಿವಿನ ಮೇಲೆಯೂ ತೀವ್ರ ನಿಗಾ ಇರಿಸಿದೆ.

Advertisement

ಮತ್ತೊಂದೆಡೆ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ವಿಜಯಪುರ ಜಿಲ್ಲಾಡಳಿತ, ಕೆಬಿಜೆಎನ್ನೆಲ್‌ ಅಧಿ ಕಾರಗಳ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದ್ದು ಎಲ್ಲ ಜಲಾಶಯಗಳ ಅ ಧಿಕಾರಿಗಳನ್ನು ಈ ಗ್ರೂಪ್‌ಗೆ ಸೇರಿಸಿ ಕ್ಷಣ ಕ್ಷಣದ ಮಾಹಿತಿ ವಿನಿಯಮ ಮಾಡಿಕೊಳ್ಳುವ ಕೆಲಸ ನಡೆಸಿದೆ. ಇದಲ್ಲದೇ ಪ್ರವಾಸ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಇಂಡಿ, ಸಿಂದಗಿ ತಾಲೂಕಾಡಳಿತದ ಬಳಿ ತಲಾ 1 ಹಾಗೂ ಕೆಬಿಜೆಎನ್ನೆಲ್‌ ಅ ಧೀನದಲ್ಲಿ 2 ಸೇರಿ 4 ಯಾಂತ್ರೀಕೃತ ದೋಣಿಗಳನ್ನು ಹೊಂದಿದೆ. ಅಲ್ಲದೇ ಜಿಲ್ಲಾಡಳಿತ ತನ್ನ ಬಳಿ 9 ಕಯಾಕ್‌ ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಜೆ ದಿನಗಳೂ ಸೇರಿದಂತೆ ವಾರದ 7 ದಿನಗಳಲ್ಲೂ ದಿನದ 24 ಗಂಟೆ ಸೇವೆಗೆ 08352-1077 ಸಂಖ್ಯೆಯ ಸಹಾಯವಾಣಿ ತೆರೆದಿದೆ.

ಹಿಂದೆ ಸಂಭವಿಸಿದ ಪ್ರವಾಹಗಳ ಸಂದರ್ಭದಲ್ಲಿ ಬಾದಿತ ಹಳ್ಳಿಗಳ ಪರಿಸರದಲ್ಲಿ ಎತ್ತರ ನೆಲೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ, ಸಂಭವನೀಯ ಪರಿಸ್ಥಿತಿ ಎದುರಿಸಲು ತಾತ್ಕಾಲಿಕ ಪುನರ್ವಸತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದ ಬಾರಿ ಹೆಚ್ಚು ಬಾಧೆ ಅನುಭವಿಸಿ ಸ್ಥಳಾಂತರಕ್ಕೆ ಪ್ರಸ್ತಾವಿತ 18 ಹಳ್ಳಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿದೆ. ಅಷ್ಟರ ಮಟ್ಟಿಗೆ ಜಿಲ್ಲಾಡಳಿತ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಹಿಂದಿನ ಪ್ರವಾಹಗಳ ಕಹಿ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಈಗಾಗಲೇ ಸಂಭವನೀಯ ಪ್ರವಾಹ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಪೂರಕ ಸಂಪನ್ಮೂಲಗಳೊಂದಿಗೆ ಅಧಿಕಾರಿಗಳನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸಿದ್ಧವಾಗಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಡಾ| ಔದ್ರಾಮ್‌,
ಅಪರ
ಜಿಲ್ಲಾಧಿಕಾರಿ, ವಿಜಯಪುರ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next