Advertisement

Talikot; ಕೂಲಿಗೆ ಹೊರಟಿದ್ದ ವಿದ್ಯಾರ್ಥಿಗಳಿದ್ದ ವಾಹನ ಅಪಘಾತ; ಓರ್ವ ಬಾಲಕಿ ಸಾವು

03:55 PM Dec 04, 2023 | keerthan |

ವಿಜಯಪುರ: ಶಾಲೆಗೆ ತೆರಳಬೇಕಿದ್ದ ವಿದ್ಯಾರ್ಥಿಗಳನ್ನು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳಲು ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಓರ್ವ ಬಾಲಕಿ ಮೃತಪಟ್ಟು ಸುಮಾರು 12 ಮಕ್ಕಳು ತೀವ್ರ ಗಾಯಗೊಂಡಿರುವ ಘಟನೆ ಸೋಮವಾರ ಜಿಲ್ಲೆಯ ತಾಳಿಕೋಟೆ ತಾಲೂಕಿನಿಂದ ವರದಿಯಾಗಿದೆ.

Advertisement

ತಾಳಿಕೋಟೆ ತಾಲೂಕಿನ ಬಿಳೆಭಾವಿ ಗ್ರಾಮದಿಂದ ತಾಳಿಕೋಟೆ ಬಳಿಯ ಬಮ್ಮನಹಳ್ಳಿ, ಫತ್ತೇಪೂರ ಗ್ರಾಮಗಳಿಗೆ ಹತ್ತಿ ಬಿಡಿಸುವ ಕೂಲಿಗಾಗಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬುಲೆರೋ ಪಿಕಪ್ ವಾಹನ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಮಕ್ಕಳನ್ನು ತಾಳಿಕೋಟೆ ಹಾಗೂ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಕಲ್ಪನಾ ಭಜಂತ್ರಿ ಎಂಬ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮೃತ ಹಾಗು ಗಾಯಾಳುಗಳಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಇದ್ದು, ವಿವಿಧ ತರಗತಿಗಳಲ್ಲಿ ಓದುತ್ತಿದ್ದರು. ಸೋಮವಾರ ಬೆಳಿಗ್ಗೆ ವಿದ್ಯರ್ಥಿಗಳು ಸೇರಿದಂತೆ 20 ಕ್ಕೂ ಹೆಚ್ಚು ಕಾರ್ಮಿಕರನ್ನು ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆಂದು ಬುಲೆರೋ ಪಿಕಪ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಬಮ್ಮನಹಳ್ಳಿ ಬಳಿ ಚಾಲಕ ಸುನಿಲ ಕುಕನೂರು ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ ಎಂದು ದೂರಲಾಗಿದೆ.

ಬಡತನದ ಕಾರಣ ಮಕ್ಕಳ ಪಾಲಕರು ವಿದ್ಯಾರ್ಥಿಗಳನ್ನು ಶಾಲೆ ಬಿಡಿಸಿ ಕೃಷಿಯಲ್ಲಿನ ಕೂಲಿ ಕೆಲಸಕ್ಕೆ ಕಳಿಸುತ್ತಿದ್ದರು. ಜಿಲ್ಲೆಯ ಬಹುತೇ ಕಡೆಗಳಲ್ಲಿ ಇದೀಗ ಹತ್ತಿ ಹಾಗೂ ಇತರೆ ಬೆಳೆಗಳ ಕಟಾವು ಹಂತ ತಲುಪಿದ್ದು, ಮಕ್ಕಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೆಲಸದಲ್ಲಿ ಬಳಕೆ ಮಾಡಲಾಗುತ್ತಿದೆ.

ಮಕ್ಕಳನ್ನು ಕೃಷಿಯಲ್ಲಿನ ಕೂಲಿಗೆ ಕಳಿಸಿದರೆ ಭೀಕರ ಬರ ಪರಿಸ್ಥಿತಿಯ ಈ ಹಂತದಲ್ಲಿ ನಿತ್ಯವೂ ಕನಿಷ್ಟ 200 ರೂ. ಕೂಲಿ ಸಿಗುತ್ತದೆ. ಇದರಿಂದ ಕುಟುಂಬದ ಬಡತನ ನೀಗಿಕೊಳ್ಳಲು ಸಹಕಾರಿ ಆಗಲಿದೆ ಎಂಬ ಕಾರಣಕ್ಕೆ ಪಾಲಕರು ಬಡತನದ ಅಸಹಾಯಕತೆಯಿಂದ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ನೂಕಿದ್ದಾರೆ ಎಂದು ದೂರಲಾಗಿದೆ.

Advertisement

ಘಟನೆಯ ಬಳಿಕ ಮಾತನಾಡಿರುವ ಬಾಲ ಕಾರ್ಮಿಕ ವಿದ್ಯಾರ್ಥಿಗಳ ಪಾಲಕರು, ನಮ್ಮ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಕೊಡಿಸಿ, ವಿದ್ಯಾವಂತರನ್ನಾಗಿ ಮಾಡುವ ಹಾಗೂ ಉನ್ನತ ಸ್ಥಾನಕ್ಕೆ ಏರಲಿ ಎಂಬ ಆಶಯ ನಮಗೂ ಇದೆ. ಆದರೆ ಭೀಕರ ಬರ ಆವರಿಸಿದ್ದು, ಕೂಲಿ ಕೆಲಸವೇ ಸಿಗುತ್ತಿಲ್ಲ. ಸರ್ಕಾರವೂ ನಮ್ಮ ನೆರವಿಗೆ ಬರುತ್ತಿಲ್ಲ. ಹೀಗಾಗಿ ಬಡತನದ ಕಾರಣದಿಂದ ಸಿಕ್ಕ ಕೂಲಿ ಕೆಲಸಕ್ಕೆ ನಮ್ಮ ಮಕ್ಕಳನ್ನು ಕಳಿಸಿವುದು ಅನಿವಾರ್ಯವಾಗಿದೆ ಎಂದು ಶಾಲೆಗೆ ಹೋಗಬೇಕಿದ್ದ ತಮ್ಮ ಮಕ್ಕಳನ್ನು ಬಾಲಕಾರ್ಮಿಕರಾಗಿ ದುಡಿಯಲು ಕಳಿಸಲು ಕಾರಣವಾದ ಅಸಹಾಯಕತೆ ತೋಡಿಕೊಂಡಿದ್ದಾರೆ.

ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿರುವ ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next