Advertisement

ಮಿಡತೆ ದಾಳಿಯಿಂದ ಬೆಳೆ ರಕ್ಷಿಸಲು ಪಾಟೀಲ ಆಗ್ರಹ

07:06 PM May 29, 2020 | Naveen |

ವಿಜಯಪುರ: ಜಗತ್ತು ಕೋವಿಡ್ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿರುವ ಈ ಸಂದರ್ಭದಲ್ಲೇ ಆಫ್ರಿಕಾದಲ್ಲಿ ಭಾರಿ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ರೈತರ ಬೆಳೆ ಹಾನಿ ಮಾಡಿವೆ. ಇದೀಗ ಉತ್ತರ ಭಾರತದ ರಾಜ್ಯಗಳನ್ನು ದಾಟಿಕೊಂಡು ಕರ್ನಾಟಕಕ್ಕೂ ಪ್ರವೇಶಿಸುತ್ತಿದ್ದು, ಕೂಡಲೇ ರಾಜ್ಯದ ರೈತರ ಬೆಳೆ ರಕ್ಷಣೆಗಾಗಿ ಮಿಡತೆ ದಾಳಿಯನ್ನು ತಪ್ಪಿಸುವಂತೆ ಬಬಲೇಶ್ವರ ಶಾಸಕ, ಮಾಜಿ ಸಚಿವ ಎಂ.ಬಿ. ಪಾಟೀಲ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ರೈತರ ಬೆಳೆ ಹಾನಿ ಮಾಡಿವೆ. ಗಂಟೆಗೆ 150 ಕಿಮೀ ವೇಗದಲ್ಲಿ ಹಾರಬಲ್ಲ ಈ ಮಿಡತೆಗಳು ಒಂದು ಬಾರಿಗೆ ತನ್ನ ತೂಕದಷ್ಟು ಆಹಾರ ಸೇವಿಸುವ ಶಕ್ತಿ ಹೊಂದಿವೆ. ಮಿಡತೆಗಳ ದಂಡು ಕ್ಷಣಾರ್ಧದಲ್ಲಿ 35 ಸಾವಿರ ಜನರು ಆಹಾರ ಸೇವಿಸುವಷ್ಟು ಧಾನ್ಯ ಸೇವಿಸುವ ಸಾಮರ್ಥ್ಯ ಹೊಂದಿರುವುದಾಗಿ ತಜ್ಞರು ತಿಳಿಸಿದ್ದಾರೆ.

ತನ್ನ ದೇಶದಲ್ಲಿ ಬಾರಿ ಪ್ರಮಾಣದ ಬೆಳೆ ಹಾನಿ ಮಾಡಿರುವ ಈ ಮಿಡತೆಯಿಂದಾಗಿ ಪಾಕಿಸ್ತಾನ್‌ ಸರ್ಕಾರ ಫೆಬ್ರವರಿಯಲ್ಲೇ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದೀಗ ಭಾರತಕ್ಕೆ ದಾಳಿ ಇಟ್ಟಿರುವ ಈ ಬೆಳೆ ನಾಶಕ ಮಿಡತೆಯನ್ನು ರಾಜ್ಯಕ್ಕೆ ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿರುವ ರೈತರು ಇದೀಗ ಮಿಡತೆಗಳ ಹಾವಳಿಯಿಂದ ಹೇಳತೀರದ ನಷ್ಟವನ್ನು ಎದುರಿಸುವುದನ್ನು ತಪ್ಪಿಸಬೇಕು. ಮಾರಕ ಈ ಮಿಡತೆ ಈಗಾಗಲೇ ಮಹಾರಾಷ್ಟ್ರವನ್ನೂ ಪ್ರವೇಶಿಸಿರುವ ಮಾಹಿತಿ ಇದ್ದು, ರಾಜ್ಯದ ಉತ್ತರ ಭಾಗದ ಜಿಲ್ಲೆಗಳ ರೈತರ ಬೆಳೆ ಹಾನಿಗೆ ಈಡಾಗುವ ಅಪಾಯವಿದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಂಭವನೀಯ ಮಿಡತೆಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next