Advertisement

ಪ್ರವಾಸಿಗರಿಂದ ‘ಪಾರ್ಕಿಂಗ್‌’ಸುಲಿಗೆ

11:11 AM Aug 15, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ನಿಧಿ ಎನಿಸಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸಗರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಪಾರ್ಕಿಂಗ್‌ ಶುಲ್ಕದ ಹೆಸರಿನಲ್ಲಿ ಸುಲಿಗೆ ನಡೆಯುತ್ತಿದೆ. ದೂರದ ಪ್ರವಾಸಿಗರನ್ನು ಪಾರ್ಕಿಂಗ್‌ ಶುಲ್ಕ ಗುತ್ತಿಗೆ ಪಡೆದಿರುವ ಸಂಸ್ಥೆ ಸರ್ಕಾರದ ನಿಯಮ ಮೀರಿ 2-3 ಪಟ್ಟು ಶುಲ್ಕ ವಸೂಲಿ ಮಾಡುತ್ತಿದ್ನು ಹಲಗಲು ಸುಲಿಗೆಗೆ ಇಳಿದಿದೆ. ಇತ್ತ ಎಲ್ಲವನ್ನೂ ಬಲ್ಲ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಇರುವುದು ಅನುಮಾನ ಮೂಡುವಂತೆ ಮಾಡುತ್ತಿದೆ.

Advertisement

ವಿಜಯಪುರ ನಗರದಲ್ಲಿ ಐತಿಹಾಸಿಕ ಪಾರಂಪರಿಕ ಕಥೆ ಹೇಳುವ ನೂರಾರು ಸ್ಮಾರಕರಳಿದ್ದರೂ ವಿಶ್ವದರ್ಜೆಯ 3-4 ಸ್ಮಾರಕಗಳನ್ನು ಮಾತ್ರ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಣೆ ಮಾಡುತ್ತಿದ್ದು ಇದರಲ್ಲಿ ಗೋಲಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಸ್ಮಾರಕಗಳಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕ. ಆದರೆ ಈ ಎರಡು ಸ್ಮಾರಕಗಳ ಹೊರತಾಗಿ ಇತರೆ ಕಡೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದೇ ಪ್ರವಾಸಿಗರಿಗೆ ಇತರೆ ಸ್ಮಾರಕಗಳ ವೀಕ್ಷಣೆಗೆ ಆಸಕ್ತಿ ತೋರದಿರಲು ಪ್ರಮುಖ ಕಾರಣ.

ವಿಜಯಪುರ ನಗರದಲ್ಲಿ ಗೋಲಗುಮ್ಮಟ ಹಾಗೂ ಇಬ್ರಾಹೀಂ ರೋಜಾ ಸ್ಮಾರಕಗಳ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆ, ಪಾದರಕ್ಷೆ ಹಾಗೂ ಲಗೇಜು ರಕ್ಷಣೆಯ ಗುತ್ತಿಗೆ ನೀಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಅಧಿಕೃತ ಗುತ್ತಿಗೆ ಪಡೆದಿರುವ ಶರಣಬಸಪ್ಪ ಜಿ. ಶಹಾಪುರ ಸಂಸ್ಥೆಗೆ 16-3-2019ರಿಂದ 15-3-2010 ಅವಧಿಯನ್ನು ನಿಗದಿ ಮಾಡಿದೆ. ಗೋಲ ಗುಮ್ಮಟ ಆವರಣದಲ್ಲಿನ ಗುತ್ತಿಗೆಯನ್ನು 29,15,254 ರೂ.ಗೆ ನೀಡಲಾಗಿದೆ. ಇಬ್ರಾಹೀಂ ರೋಜಾ ಸ್ಮಾರಕದ ಪ್ರದೇಶದಲ್ಲಿ 3.05 ಲಕ್ಷ ರೂ.ಗೆ ನೀಡಲಾಗಿದೆ. ಈ ಗುತ್ತಿಗೆ ನೀಡುವ ಮುನ್ನ ಪ್ರತಿ ವಿಷಯಕ್ಕೂ ನಿರ್ಧಿಷ್ಟ ಶುಲ್ಕ ನಿಗದಿ ಮಾಡಿ, ನಿಗದಿಯಷ್ಟು ಶುಲ್ಕವನ್ನು ಮಾತ್ರ ಆಕರಣೆ ಮಾಡುವಂತೆ ಷರತ್ತು ವಿಧಿಸಲಾಗಿದೆ.

ಆದರೆ 5 ರೂ. ಪಡೆಯಬೇಕಿರುವ ದ್ವಿಚಕ್ರ ವಾಹನ ಪಾರ್ಕಿಂಗ್‌ ಶುಲ್ಕಕ್ಕೆ 10 ರೂ., ಹಾರೂ ಹಾಗೂ ಇತರೆ ನಾಲ್ಕು ಚಕ್ರದ ವಾಹನಗಳಿಗೆ 15 ರೂ. ಶುಲ್ಕ ಇದ್ದರೂ ಕಾರುಗಳಿಗೆ 50 ರೂ. ಹಾಗೂ ಟ್ರ್ಯಾಕ್ಸ್‌ ಹಾಗೂ ಇತರೆ ವಾಹನಗಳಿಗೆ 60 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬಸ್‌-ಮಿನಿ ಬಸ್‌ಗಳ ಪಾರ್ಕಿಂಗ್‌ಗೆ 30 ರೂ. ಶುಲ್ಕ ನಿಗದಿ ಮಾಡಿದ್ದರೂ ವಸೂಲಿ ಮಾಡುವುದು ಮಾತ್ರ ಬರೋಬ್ಬರಿ 100 ರೂ.

ಚಪ್ಪಲಿಗೆ ರಕ್ಷಣೆ 1 ರೂ. ಹಾಗೂ ಬೂಟುಗಳಿಗೆ 2 ರೂ. ನಿಗದಿ ಮಾಡಿದ್ದರೂ ವಸೂಲಿ ಮಾಡುವುದು 10 ರೂ.ಗಳನ್ನು. ಪ್ರವಾಸಿಗರು ಲಗೇಜುಗಳನ್ನು ಸುರಕ್ಷಿತವಾಗಿ ಇರಿಸಲು ನಿರ್ಮಿಸಿರುವ ಕ್ಲಾಕ್‌ ರೂಂನಲ್ಲಿ ಪ್ರತಿ ಬ್ಯಾಗ್‌ಗೆ 2 ರೂ. ನಿಗದಿ ಮಾಡಿದ್ದರೂ ಗುತ್ತಿಗೆ ಪಡೆದ ಸಂಸ್ಥೆ‌ ಹುಡುಗರು ವಸೂಲಿ ಮಾಡುವುದು ಮಾತ್ರ 30-50 ರೂ. ಶುಲ್ಕವನ್ನು. ಚಪ್ಪಲಿ-ಬೂಟುಗಳಿಗೆ 5-10 ರೂ. ವಸೂಲಿ ಮಾಡಲಾಗುತ್ತದೆ.

Advertisement

ಭಾರತೀಯ ಪುರಾತತ್ವ ಇಲಾಖೆ ನಿಗದಿ ಮಾಡಿರುವ ಶುಲ್ಕಕ್ಕೆ ಬದಲಾಗಿ ಮನಬಂದಂತೆ ಹಾಡು ಹಗಲೇ ಬಹಿರಂಗವಾಗಿ ಪ್ರಾಸಿಗರನ್ನು ಸುಲಿಗೆ ಮಾಡುತ್ತಿರುವ ಎಲ್ಲ ದೃಶ್ಯಗಳೂ ನಿತ್ಯವೂ ಗೋಲಗುಮ್ಮಟ ಆವರಣದಲ್ಲಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗುತ್ತವೆ. ಗೋಲಗುಮ್ಮಟ ಸ್ಮಾರಕ ಪ್ರದೇಶ ದ್ವಾರದಲ್ಲೇ ಪಾರ್ಕಿಂಗ್‌, ಲಗೇಜ್‌ ರೂಂ ಇದ್ದು ಇಲ್ಲೆಲ್ಲ ಸಿಸಿ ಕ್ಯಾಮರಾಗಳಿವೆ. ಸಿಸಿ ಕ್ಯಾಮರಾದಲ್ಲಿ ಪಾರ್ಕಿಂಗ್‌ ಹೆಸರಿನಲ್ಲಿ ಪ್ರವಾಸಿಗರನ್ನು ಸುಲಿಗೆ ಮಾಡುವ ಎಲ್ಲ ದೃಶ್ಯಾವಳಿಗಳೂ ದಾಖಲಾಗಿದ್ದರೂ ಯಾರೂ ಇವರನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.

ಸ್ಮಾರಕ ಪ್ರವೇಶ ದ್ವಾರದಲ್ಲೇ ಪಾರ್ಕಿಂಗ್‌ ಶುಲ್ಕ ಎಷ್ಟೆಂದು ಪ್ರವಾಸಿಗರ ಗಮನಕ್ಕಾಗಿ ಫ‌ಲಕ ಅಳವಡಿಸಿದ್ದರೂ ಗುತ್ತಿಗೆ ಪಡೆದವರು ಉದ್ದೇಶಪೂರ್ವಕವಾಗಿ ಈ ಫ‌ಲಕ ಕಾಣದಂತೆ ಹೊದಿಕೆ ಹಾಕಿ ಮರೆ ಮಾಚುತ್ತಾರೆ. ಅವೈಜ್ಞಾನಿಕವಾಗಿರುವ ಪಾರ್ಕಿಂಗ್‌ ಶುಲ್ಕದ ಕುರಿತು ಪ್ರವಾಸಿಗರು ಪ್ರಶ್ನಿಸಿದರೆ ಸ್ಥಳದಲ್ಲೇ ಇರುವ ನಾಲ್ಕಾರು ಬಲಿಷ್ಠ ದೇಹಿ ಯುವಕರು ಪ್ರವಾಸಿಗರನ್ನು ಸುತ್ತುವರಿದು ಬೆದರಿಕೆ ಹಾಕುತ್ತಾರೆ. ನಮ್ಮಲ್ಲಿ ಪಾರ್ಕಿಂಗ್‌ ಶುಲ್ಕ ಇರುವುದೇ ಇಷ್ಟು, ನಾವು ಕೇಳಿದಷ್ಟು ಕೊಟ್ಟರೆ ಪಾರ್ಕಿಂಗ್‌ ಮಾಡಿ, ಇಲ್ಲವಾದಲ್ಲಿ ಇಲ್ಲಿಂದ ಗಾಡಿ ತೆಗೆಯಿರಿ ಎಂದು ಸೌಜನ್ಯದ ಎಲ್ಲೆ ಮೀರಿ ಬೆದರಿಕೆ ಹಾಕುತ್ತಾರೆ.

ಅನ್ಯಾಯ ಪ್ರಶ್ನಿಸುವ ಪ್ರವಾಸಿಗರನ್ನು ಬೆದರಿಸಲೆಂದೇ ಪಾರ್ಕಿಂಗ್‌ ಸ್ಥಳದಲ್ಲಿ ನಾಲ್ಕಾರು ಯುಕರ ದಂಡನ್ನು ಇರಿಸಿಕೊಳ್ಳಲಾಗಿದೆ. ಪ್ರವಾಸಿಗರು ಸ್ವಲ್ಪವೇ ಏರು ದನಿಯಲ್ಲಿ ಮಾತನಾಡಿದರೂ ಈ ಯುಕವರ ದಂಡು ಪ್ರವಾಸಿಗರನ್ನು ಸುತ್ತುವರಿದು ಎಚ್ಚರಿಕೆ ಕೊಡುವ ರೂಪದಲ್ಲಿ ಜಗಳ ತೆಗೆಯುತ್ತಾರೆ. ದೂರದ ಊರುಗಳಿಂದ ಐತಿಹಾಸಿಕ ಸ್ಮಾರಕದ ಸೌಂದರ್ಯ ಕಣ್ತುಂಬಿಕೊಂಡು ಸುಂದರ ಪ್ರವಾಸಿ ವಿಶಿಷ್ಟ ಅನುಭವ ಆಸ್ವಾದಿಸಲು ಬರುವ ಪ್ರವಾಸಿರು, ಪಾರ್ಕಿಂಗ್‌ ವಿಷಯವಾಗಿ ತಮ್ಮದಲ್ಲದ ಸ್ಥಳದಲ್ಲಿ ಜಗಳ ತೆಗೆಯಲಾಯದೇ ಭಯದಿಂದ ಸುಮ್ಮನಾಗುತ್ತಾರೆ. ಮತ್ತೂಂದೆಡೆ ಪ್ರವಾಸದಲ್ಲಿ ಸ್ಮಾರಕ ವೀಕ್ಷಣೆ ಹಾಗೂ ಬಳಿಕ ಮುಂದಿನ ಪ್ರವಾಸಕ್ಕೆ ತೆರಳುವ ಧಾವಂತ ಇರುತ್ತದೆ. ಅಲ್ಲದೇ ಸಾರ್ವಜನಿಕವಾಗಿ ಪಾರ್ಕಿಂಗ್‌ ಕಾಯುವ ಯುವಕರು ಬಳಸುವ ಶಬ್ದಗಳಿಂದ ಮುಜುಗುರಕ್ಕೆ ಈಡಾಗಬೇಕು. ಹೀಗಾಗಿ ಪ್ರವಾಸಿಗರು ಪಾರ್ಕಿಂಗ್‌, ಚಪ್ಪಲಿ ಕಾಯುವ ಹಾಗೂ ಕ್ಲಾಕ್‌ ರೂ. ಸಿಬ್ಬಂದಿ ಕೇಳಿದಷ್ಟು ಹಣ ಕೊಟ್ಟು ಹೋಗುತ್ತಾರೆ.

ಇನ್ನು ಪಾರ್ಕಿಂಗ್‌, ಲಗೇಜ್‌ ರೂಂನಲ್ಲಿ ಲಗೇಜ್‌ ಕಾಯುವುದಕ್ಕೆ ನೀಡುವ ಶುಲ್ಕಕ್ಕೆ ರಸೀದಿಗೆ ಕ್ರಮಸಂಖ್ಯೆ ಇರುವುದಿಲ್ಲ, ಗುತ್ತಿಗೆ ಪಡೆದ ಸಂಸ್ಥೆ ಹೆಸರು ಇರುವುದಿಲ್ಲ. ಕನಿಷ್ಠ ಯಾರು ತಮ್ಮ ವಾಹನ-ವಸ್ತುಗಳನ್ನು ರಕ್ಷಣೆ ಮಾಡಲು ಇರುವ ಅಧಿಕೃತ ವ್ಯಕ್ತಿ-ಸಂಸ್ಥೆ ಎಂಬ ಮಾಹಿತಿಯೂ ಅವರು ನೀಡುವ ರಸೀದಿಯಲ್ಲಿ ಇರುವುದಿಲ್ಲ. ಯಾವುದೇ ದಾಖಲೀಕರಣವನ್ನು ಇಲ್ಲಿ ಮಾಡಲಾಗುವುದಿಲ್ಲ.

ಗುತ್ತಿಗೆ ಪಡೆದಿರುವ ನಾವು ಈ ವ್ಯವಸ್ಥೆಯನ್ನು ನಿರ್ವಹಿಸಲು ಇಷ್ಟೆಲ್ಲ ವಸೂಲಿ ಮಾಡಲೇಬೇಕು. ನಿಯಯ ಮೀರಿ ಹಣ ಪಾರ್ಕಿಂಗ್‌ ಹಾಗೂ ಇತರೆ ಶುಲ್ಕ ಪಡೆಯುತ್ತಿರುವ ಕುರಿತು ಕೇಳಿದರೆ ನೀವು ಯಾರಿಗೆ ಬೇಕಾದರೂ ದೂರು ಕೊಡಿ, ಅದರಿಂದ ನಮಗೇನು ಆಗದು. ಇದೆಲ್ಲ ಗೊತ್ತಿಲ್ಲದೇ ನಾವು ಗುತ್ತಿದೆ ಪಡೆದಿದ್ದೇವೆ, ನಿಮ್ಮಿಂದ ನಮ್ಮನ್ನು ಏನು ಮಾಡಲಾಗದು ಎಂದು ಪ್ರವಾಸಿಗರಿಗೆ ಎಚ್ಚರಿಕೆ ಸ್ವರೂಪದಲ್ಲಿ ಬೆದರಿಸುವ ಕೆಲಸ ಮಾಡುತ್ತಾರೆ.

ತಮ್ಮ ಕಣ್ಣ ಮುಂದೆ ಪ್ರವಾಸಿರ ಮೇಲೆ ನಡೆಯುವ ದೌರ್ಜನ್ಯದ ನಡೆದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಚಕಾರ ಎತ್ತುವುದಿಲ್ಲ. ಆಷ್ಟಕ್ಕೂ ಬಲವಂತ ಮಾಡಿದರೆ ಲಿಖೀತ ದೂರು ಕೊಡಿ, ನೋಡುತ್ತೇವೆ ಎನ್ನುತ್ತಾರೆ. ಹೀಗೇಗೆ ಎಂದು ಇನ್ನೂ ಪ್ರಶ್ನಿಸಲು ಮುಂದಾದರೆ ನಮಗೆ ಪ್ರತಿಕ್ರಿಯಿಸುವ ಅಧಿಕಾರವಿಲ್ಲ. ಈ ಕುರಿತು ಧಾರವಾಡದಲ್ಲಿರುವ ಸರ್ಕಲ್ ಆಫೀಸ್‌ ಸಂಪರ್ಕಿಸಿ ಎಂದು ಸಬೂಬು ಹೇಳುವ ವರ್ತನೆ ಅನುಮಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next