ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಶಿಸ್ತು ಹಾಗೂ ಯೋಜನಾಬದ್ಧವಾಗಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಜಿಪಂ ಸಿಇಒ ಕಚೇರಿಯಲ್ಲಿ ಜರುಗಿದ ತೊಗರಿ ಬೆಳೆ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ತೊಗರಿ ಬೆಳೆ ಖರೀದಿಗಾಗಿ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ 5,800 ರೂ. ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸರ್ಕಾರದ ಬೆಂಬಲ ಬೆಲೆ ಘೋಷಣೆ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಖರೀದಿ ಕೇಂದ್ರಗಳಿಗೆ ಬರಬಹುದಾದ ತೊಗರಿ ಬೆಳೆಯ ಸಮಗ್ರ ಸಮೀಕ್ಷೆ ನಡೆಸಬೇಕು. ತೊಗರಿ ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲ ಆಗದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖರೀದಿ ಕೇಂದ್ರದಲ್ಲಿ ಯಾವುದೇ ಲೋಪ ಆಗದಂತೆ ಯೋಜನಾ ಬದ್ಧವಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇಂಥ ಕಡೆಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಈ ಹಿಂದಿನ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಬೇಕು. ನಾಫೆಡ್‌ಗೆ ಪತ್ರ ಬರೆದು ಗ್ರೇಡರ್ ಮತ್ತು ಸಾಗಾಣಿಕೆ ಕುರಿತು ಕ್ರಮ ಕೈಗೊಳ್ಳುವ ಮಾರ್ಗಸೂಚಿ ಸಿದ್ಧಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿನ ತೊಗರಿ ದಾಸ್ತಾನಿಗೆ ಸಂಬಂಧಪಟ್ಟವರಿಗೆ ತರಬೇತಿ ನೀಡಬೇಕು. ಖರೀದಿಸಿದ ತೊಗರಿ ಬೆಳೆ ದಾಸ್ತಾನು ಮಾಡುವ ಕುರಿತು ಅಗತ್ಯ ಪ್ರಮಾಣದಲ್ಲಿ ಉಗ್ರಾಣಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇದಕ್ಕಾಗಿ ಸಂಬಧಿಸಿದ ಉಗ್ರಾಣಗಳ ಅಧಿಕಾರಿಗಳಿಗೆ ಪತ್ರ ಬರೆದು, ಸರ್ಕಾರದ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.
2017-18ನೇ ಸಾಲಿನಲ್ಲಿ 73,683 ರೈತರಿಂದ ಬೆಂಬಲ ಬೆಲೆ ಯೋಜನೆಯಲ್ಲಿ 848 ಲಕ್ಷ ಕ್ವಿಂಟಲ್ ಹಾಗೂ 2018-19ನೇ ಸಾಲಿನಲ್ಲಿ 37,769 ರೈತರಿಂದ 345 ಲಕ್ಷ ಕ್ವಿಂಟಲ್ ಖರೀದಿಸಿದ ತೊಗರಿಯನ್ನು ಜಿಲ್ಲೆಯ ರಾಜ್ಯ ಉಗ್ರಾಣ ನಿಗಮ ಪಕ್ಕದ ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದೆ. ಪ್ರಸಕ್ತ ವರ್ಷಲ್ಲಿ ಜಿಲ್ಲೆಯಲ್ಲಿ 15 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷೆಯಿದ್ದು, 5-6 ಲಕ್ಷ ಕ್ವಿಂಟಲ್ ತೊಗರಿ ಉತ್ಪನ್ನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಯ ಅಂದಾಜಿದೆ. ಹೀಗಾಗಿ ಈ ವರ್ಷ ತೊಗರಿ ಖರೀದಿ ಬಳಿಕ ದಾಸ್ತಾನು ಮಾಡಲು ಉಗ್ರಾಣಗಳಲ್ಲಿ ಸ್ಥಳಾವಕಾಶದ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸುಮಾರು 2 ವರ್ಷದಿಂದ ದಾಸ್ತಾನದಲ್ಲಿರುವ ತೊಗರಿ ಉತ್ಪನ್ನವನ್ನು ವಿಲೇವಾರಿ ಮಾಡಲು ಸರ್ಕಾರದ ಹಂತದಲ್ಲಿ ಕ್ರಮ ಜರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ವಿಜಯಪುರ ಜಿಲ್ಲೆಯ ಉಗ್ರಾಣಗಳಲ್ಲಿ ತೊಗರಿ ಉತ್ಪನ್ನ ದಾಸ್ತಾನು ಇದ್ದು ಉಗ್ರಾಣಗಳಲ್ಲಿ ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ 2019-20ನೇ ಸಾಲಿನಲ್ಲಿ ಖರೀದಿಸಿದ ಉತ್ಪನ್ನವನ್ನು ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ದಾಸ್ತಾನಿನ ವಿವರ ಪರಿಶೀಲಿಸಲಾಯಿತು. 200 ಕಿ.ಮೀ. ಅಂತರದಲ್ಲಿ ದಾಸ್ತಾನು ಮಾಡಿದರೂ ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಅಲ್ಲದೇ ಈ ಹಿಂದೆ ಗುತ್ತಿಗೆದಾರರು ಸಾಗಾಣಿಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಖರೀದಿಸುವ ತೊಗರಿ ಬೆಳೆಯನ್ನು ಸಾಗಾಣಿಕೆ ಮಾಡಲು ಹೆಚ್ಚಿನ ವಾಹನ ಪೂರೈಸಿ, ಸಮರ್ಪಕ ಸಾಗಾಣಿಕೆಗೆ ಕೆಎಸ್‌ಡಿಎಂಎಫ್ ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶನ ನೀಡುವಂತೆ ಮನವಿ ಮಾಡಲು ಸೂಚಿಸಿದರು.
ಜಿಲ್ಲೆಯಲ್ಲಿ ಆರಂಭಗೊಳ್ಳುವ ಪ್ರತಿ ತೊಗರಿ ಖರೀದಿ ಕೇಂದ್ರಗಳಿಗೆ ಒಬ್ಬರಂತೆ ಅನುಭವವುಳ್ಳ ಗ್ರೇಡರ್ ನೇಮಿಸಲು ನಾಪೆಡ್ ಸಂಸ್ಥೆಗೆ ಸೂಚಿಸಬೇಕು. ತೂಕದ ಯಂತ್ರ ಮತ್ತು ಚಾಣಿಗಳನ್ನು ನಿರ್ವಹಿಸಿದ ಪ್ರಕಾರವೇ ಸಂಬಂಧಪಟ್ಟ ಸಂಸ್ಥೆಗಳೆ ತಮ್ಮ ಸಂಪನ್ಮೂಲಗಳಿಂದ ವೆಚ್ಚ ಭರಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಸಹಾಯಕ ನಿರ್ದೇಶಕ ಎ.ಬಿ. ಚಬನೂರ, ಜಿಲ್ಲೆಯ ತೊಗರಿ ಬೆಳೆ ಬೇಡಿಕೆ ಬಗ್ಗೆ ಖರೀದಿ ಕೇಂದ್ರಗಳ ಸ್ಥಾಪನೆ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ ಹಾಗೂ ಇತರ ಅಧಿಕಾರಿಗಳು ಇದ್ದರು.