Advertisement

ಕಂಟೇನ್ಮೆಂಟ್‌ ವಲಯ ನಿರ್ಬಂಧ ಮುಂದುವರಿಕೆ

04:47 PM May 03, 2020 | Naveen |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿತರು ಪತ್ತೆಯಾಗಿರುವ ವಿಜಯಪುರ ನಗರ, ತಿಕೋಟಾ ಭಾಗದ ಒಂದು ಹಳ್ಳಿಯ ಕಂಟೇನ್ಮೆಂಟ್‌ ವಲಯಗಳಲ್ಲಿ ಲಾಕ್‌ಡೌನ್‌ ನಿರ್ಬಂಧ ಮುಂದುವರಿಯಲಿದೆ. ಈ ನಾಲ್ಕು ವಲಯ ಹೊರತಾಗಿ ಮೇ 4ರಿಂದ ಜಿಲ್ಲೆಯಾದ್ಯಂತ ಕೇಂದ್ರ-ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನ್ವಯ ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಶನಿವಾರ ನಗರದಲ್ಲಿ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಜಿಲ್ಲೆಯ ಶಾಸಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಕೋವಿಡ್‌-19 ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಡಿಯೋ ಸಂವಾದದಲ್ಲಿ ನೀಡಿದ ನಿರ್ದೇಶನದಂತೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿರುವ ವಿಜಯಪುರ ನಗರ ಹೊರತಾಗಿ ಹಂತ-ಹಂತವಾಗಿ ವಿನಾಯತಿ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕಂಟೇನ್ಮೆಂಟ್‌ ಪ್ರದೇಶದ ಜನರ ಸಮಸ್ಯೆ ಆಲಿಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ವಿವಿಧ ತಂಡಗಳನ್ನು ರಚಿಸಲಾಗಿದೆ. ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಮುಂದುವರಿಸಿದ್ದಾರೆ ಎಂದು ಹೇಳಿದರು. ಇದಲ್ಲದೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಂಟೇನ್ಮೆಂಟ್‌ ವಲಯ ಮತ್ತು ವಿಜಯಪುರ ನಗರ ಹೊರತುಪಡಿಸಿ ಜಿಲ್ಲಾದ್ಯಂತ ಬಸ್‌ ಹೊರತುಪಡಿಸಿ, ವ್ಯಾಪಾರ ವಹಿವಾಟು, ಕೃಷಿ, ತೋಟಗಾರಿಕೆ, ಎಪಿಎಂಸಿ ಚಟುವಟಿಕೆಗೆ ಅವಕಾಶವಿದೆ. ಮಾಸ್ಕ್ ಧಾರಣೆ ಸೇರಿದಂತೆ ಕೆಲ ಷರತ್ತುಗಳೊಂದಿಗೆ ದ್ವಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ಚಿಕಿತ್ಸೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದರು.

ಸೋಂಕಿನ ಪ್ರಭಾವ ಹೆಚ್ಚಿರುವ ಮಹಾರಾಷ್ಟ್ರ ಹೊರತುಪಡಿಸಿ ಗೋವಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಕಾರ್ಮಿಕರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಹೇಳಿದರು. ವಿಜಯಪುರ ನಗರದಲ್ಲಿ ಇಂದಿನಿಂದ ಶ್ವಾಸಕೋಶ ತೊಂದರೆ ಸಂಬಂಧಿತ, ಗಂಭೀರ ರೀತಿಯ ಪ್ರಕರಣಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಗಂಟಲು ದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಇದರಿಂದ ನಿತ್ಯವೂ 30 ಗಂಟಲು ದ್ರವಗಳ ಮಾದರಿ ಪರೀಕ್ಷೆಗೆ ಸಹಕಾರಿಯಾಗಲಿದೆ. ಅಲ್ಲದೇ ಜಿಲ್ಲಾಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿರುವ ಕಾರಣ ಅನ್ಯ ವೈದ್ಯಕೀಯ ಸೇವೆ ಕಲ್ಪಿಸಲು ಪ್ರತ್ಯೇಕ ವಿಭಾಗ ತೆರೆಯುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಎಸ್‌.ಬಿ.ಪಾಟೀಲ ಸಾಸನೂರ, ಎಂ.ಸಿ.ಮನಗೂಳಿ ಮಾತನಾಡಿ, ಮಹಾರಾಷ್ಟ್ರ ರಾಜದಲ್ಲಿರುವ ಜಿಲ್ಲೆಯ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಶಾಸಕ ಅರುಣ ಶಹಾಪುರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಪಂ ಸಿಇಒ ಗೋವಿಂದರಡ್ಡಿ, ಎಸ್ಪಿ ಅನುಪಮ್‌ ಅಗರವಾಲ್‌, ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next