ವಿಜಯಪುರ: ಟ್ಯಾಂಕರ್ ನೀರಿನ ಹಾಲಿ ಬಾಡಿಗೆ ದರವನ್ನು ಹೆಚ್ಚಿಸುವ ಅಗತ್ಯವಿಲ್ಲ. ಜಲಮೂಲಗಳು ದೂರ ಇದ್ದರೂ ನೆಪ ಹೇಳದೇ ಜನರಿಗೆ ಕುಡಿಯುವ ನೀರು ಪೂರೈಸುವಂತೆ ಸೂಚಿಸಲಾಗಿದೆ ಎಂದು ಕಂದಾಯ ಖಾತೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಅಧಿಕಾರಿಗಳೊಂದಿಗೆ ಜಿಲ್ಲೆಯ ಪ್ರಗತಿ ಪರಿಶೀಲನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳೊಂದಿಗೆ ಕಳೆದ ಎರಡು ತಿಂಗಳಿಂದ ಸಂಪರ್ಕ ಇಲ್ಲವಾಗಿದೆ. ಹೀಗಾ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಯುಧ್ದೋಪಾದಿಯಲ್ಲಿ ಎದುರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ತುರ್ತು ಸಂದರ್ಭದ ಹೊರತಾಗಿ ಅಧಿಕಾರಿಗಳಿಗೆ ರಜೆ ನೀಡದಂತೆ ನಿರ್ದೇಶನ ನೀಡಲಾಗಿದೆ. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕ್ಯೆಗೊಳ್ಳುವ ಜತೆಗೆ, ಉತ್ತಮ ಕೆಲಸ ಮಾಡಿದ ಅಧಿಕಾರಿಗಳ ಕಾರ್ಯವೈಖರಿಯನ್ನೂ ಶ್ಲಾಘಿಸಲಾಗುತ್ತದೆ ಎಂದು ತಿಳಿಸಿದರು.
ಬರದ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ದನಕರುಗಳು, ಕುರಿ, ಮೇಕೆಗಳಿಗೂ ಕೂಡ ಮೇವಿನ ಕೊರತೆ ಅಗದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಲಾಗಿದೆ. ಜಿಲ್ಲೆಯಿಂದ ಕೂಲಿ ಅರಸಿ ಜನರು ಗುಳೆ ಹೋಗದಂತೆ ತಡೆಯಲು ನರೇಗಾ ಯೋಜನೆಯಡಿ ಹೆಚ್ಚೆಚ್ಚು ಮಾನವ ದಿನ ಸೃಷ್ಟಿಸಿ, ಹಳ್ಳಿಗಳಲ್ಲೇ ಕೂಲಿ ಕೆಲಸ ಒದಗಿಸಲು ತಾಕೀತು ಮಾಡಲಾಗಿದೆ. ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಚೇರಿ ಬಿಟ್ಟು ಹಳ್ಳಿಗಳಿಗೆ ತೆರಳಿ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳ ಜನರ ಸಮಸ್ಯೆ ಆಲಿಸಿ ಪರಿಹಾರ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಿಂದಿನ ವರ್ಷ ರಾಜ್ಯದಲ್ಲಿ 10.48 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದ್ದ ನರೇಗಾ ಯೋಜನೆಯಲ್ಲಿ ಪ್ರಸಕ್ತ ವರ್ಷ 13 ಕೋಟಿ ಮಾನದ ದಿನ ಸೃಷ್ಟಿಗೆ ಗುರಿ ನೀಡಲಾಗಿದೆ. ರಾಜ್ಯಕ್ಕೆ ಇಷ್ಟು ಪ್ರಮಾಣದಲ್ಲಿ ಅವಕಾಶ ನೀಡಿರುವುದು ಇದೇ ಮೊದಲು. ಜಿಲ್ಲೆಯಲ್ಲಿ ಮೇ ಅಂತ್ಯದ ವರೆಗೆ 6.5 ಲಕ್ಷ ಮಾನವ ದಿನಗಳ ಸೃಷ್ಟಿ ಗುರಿಯಲ್ಲಿ 7.18 ಲಕ್ಷ ಮಾನವ ದಿನ ಸೃಷ್ಟಿಸುವ ಮೂಲಕ ಈಗಾಗಲೇ ಗುರಿ ಮೀರಿ ಸಾಧನೆ ಮಾಡಲಾಗಿದೆ. ನರೇಗಾ ಕಾಮಿರಕರಿಗೆ 7 ದಿನಗಳಲ್ಲಿ ಕೂಲಿ ಹಣ ಪಾವತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಇಂಡಿ, ತಿಕೋಟಾ, ಚಡಚಣ, ತಾಳಿಕೋಟೆ, ದೇವರಹಿಪ್ಪರಗಿ, ಬಬಲೇಶ್ವರ ಕ್ಷೇತ್ರಗಳು ತೀವ್ರ ನೀರಿನ ಅಭಾವ ಎದುರಿಸುತಿದೆ. ಮುಂದಾಲೋಚನೆ ಇರಿಸಿಕೊಂಡು ಅಧಿಕಾರಿಗಳು ತುರ್ತು ಕ್ರಮಕ್ಕೆ ಆದ್ಯತೆ ನೀಡಬೇಕು. ಜನ-ಜಾನುವಾರು ನಿತ್ಯ 40 ಲೀಟರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಜತೆಗೆ ಖಾಸಗಿ ಕೊಳವೆಬಾವಿ ನೀರು ಪಡೆಯಲು ಬರುವ ಒಂದು ವಾರದಲ್ಲಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಸಕಾಲಕ್ಕೆ ಬಿಲ್ ಸಂದಾಯ ಮಾಡಬೇಕು ಎಂದು ತಾಕೀತು ಮಾಡಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ 113 ಗ್ರಾಮಗಳಿಗೆ 347 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 323 ಹೆಚ್ಚು ನೀರಿರುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಟ್ಯಾಂಕರ್ ಮೂಲಕ ಪೂರೈಸುವ ನೀರಿನ ಬಿಲ್ 15 ದಿನಗಳಲ್ಲಿ ಹಾಗೂ ಖಾಸಗಿ ಕೊಳವೆಬಾವಿಗಳ ಮಾಲೀಕರಿಗೆ 30 ದಿನಗಳೊಳಗೆ ಬಿಲ್ ಸಂದಾಯ ಮಾಡಲು ಸೂಚಿಸಲಾಗಿದೆ. ಟ್ಯಾಂಕರ್ ನೀರು ಸರಬರಾಜುವಿಗೆ ಸಂಬಂಧಪಟ್ಟಂತೆ ತಹಶೀಲ್ದಾರರು ನಿರ್ಣಯಿಸುವ ವರದಿಗೆ ಸಂಬಂಧಪಟ್ಟಂತೆ ಮೂರು ಗಂಟೆಯೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸಕಾಲಕ್ಕೆ ಅನುಮತಿ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಬರ ಪರಿಸ್ಥಿತಿ ಎದುರಿಸಲು ಈಗಾಗಲೇ ಹೆಚ್ಚಿನ ಅನುದಾನ ಸಹ ನೀಡಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಹಣದ ಕೊರತೆಯಿಲ್ಲ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.26 ಲಕ್ಷ ರೈತರಿಗೆ ಇನ್‌ಪುಟ್ ಸಬ್ಸಿಡಿ ವಿತರಿಸಲಾಗಿದೆ. ಬಾಕಿ ರೈತರಿಗೆ ಮುಂಬರುವ ಜೂನ್ ಆಂತ್ಯದೊಳಗೆ ಆಧಾರ ಲಿಂಕ್ ಪೂರ್ಣಗೊಳಿಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಅದರಂತೆ ನೀರು ಸರಬರಾಜು ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಕೆಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಇನ್ನೂ ಅಗತ್ಯ ಎನಿಸಿದಲ್ಲಿ ಪ್ರತಿ ಹಳ್ಳಿಗೆ ಮೇವು ಬ್ಯಾಂಕ್ ತೆರೆಯಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಗೃಹ ಖಾತೆ ಸಚಿವ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಹಾಗೂ ತೋಟಗಾರಿಕೆ ಖಾತೆ ಸಚಿವ ಎಂ.ಸಿ. ಮನಗೂಳಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಲಿಂಬೆ ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಮಹಾರಾಷ್ಟ್ರ ಮಾದರಿಯಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕಿದ್ದು, ತೋಟಗಾರಿಕೆ ಖಾತೆ ಸಚಿವರು ಸಂಪುಟ ಸಭೆಯಲ್ಲಿ ವಿಷಯ ತರಲಿದ್ದಾರೆ. ಬಳಿಕ ಈ ಕುರಿತು ಕೇಂದ್ರಕ್ಕೆ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
•
ಆರ್.ವಿ. ದೇಶಪಾಂಡೆ,
ಕಂದಾಯ ಖಾತೆ ಸಚಿವರು