Advertisement

ಕೊರೊನಾ ಮುನ್ನೆಚ್ಛರಿಕೆ ಜಾಗೃತಿಗೆ ಸೂಚನೆ

12:02 PM Feb 13, 2020 | Naveen |

ವಿಜಯಪುರ: ಪ್ರಸ್ತುತ ಮಾರಕ ಕಾಯಿಲೆ ಎನಿಸಿರುವ ನೋವೆಲ್‌ ಕೊರೊನಾ ವೈರಸ್‌ ಕುರಿತು ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ನೋವೆಲ್‌ ಕೊರೊನಾ ವೈರಸ್‌ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ವೈರಸ್‌ ಬಗ್ಗೆ ಸದ್ಯಕ್ಕೆ ಯಾವುದೇ ಆತಂಕವಿಲ್ಲ. ಆದರೂ ಈ ವಿಷಯದಲ್ಲಿ ಸಾರ್ವಜನಿಕರು ಸೂಕ್ತ ಎಚ್ಚರಿಕೆ, ಸ್ವಚ್ಛತೆ ವಹಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ ಹಾಗೂ ಬೇಧಿ ಆದ ತಕ್ಷಣ ಭಯಪಡುವ ಅಗತ್ಯವಿಲ್ಲ. ಚಿಕಿತ್ಸೆಗಾಗಿ ಸಮೀಪದ ಸಾರ್ವಜನಿಕ, ಜಿಲ್ಲಾಸ್ಪತ್ರೆಗಳಿಗೆ ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಮೂಲಕ ಖಾತ್ರಿ ಪಡಿಸಿಕೊಳ್ಳಬಹುದೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂಬಂಧಿಸಿದ ಅ ಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ ಹಾಗೂ ಆಯಾ ತಾಲೂಕಾಸ್ಪತ್ರೆಗಳಲ್ಲಿ ತಲಾ 5 ಬೆಡ್‌, ಜಿಲ್ಲೆಯ ಮತ್ತು ನಗರದ ಪ್ರತಿಷ್ಠಿತ 16 ಖಾಸಗಿ ಆಸ್ಪತ್ರೆಗಳಲ್ಲಿ 146 ಬೆಡ್‌ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಕುರಿತು ಸಿದ್ಧತೆ ಮಾಡಿಕೊಳ್ಳಬೇಕು. ಸಂಶಯಾಸ್ಪದ ಪ್ರಕರಣಗಳ ಬಗ್ಗೆ ನಿಗಾ ಇಡಬೇಕು. ಸಂಶಯಾಸ್ಪದ ಪ್ರವಾಸಿಗರ ಮತ್ತು ರೋಗಿಗಳ ಬಗ್ಗೆ ನಿಗಾ ಇಡಬೇಕು. ಅವಶ್ಯಕ ಔಷಧ , ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಭಾರತೀಯ ವೈದ್ಯಕೀಯ ಸಂಘ, ಇನ್ನಿತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆ ಅಧಿಕಾರಿಗಳ ಮೂಲಕ ಈ ವೈರಸ್‌ ಕುರಿತು ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ, ರೈಲ್ವೆ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್‌, ಅರಣ್ಯ, ಪಶು ಸಂಗೋಪನೆ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಪಂ ವ್ಯಾಪ್ತಿ ಇಲಾಖೆಗಳ ಮೂಲಕ ರೋಗದ ಕುರಿತು ಜಾಗೃತಿ, ಸಂಶಯಾಸ್ಪದ ರೋಗಿಗಳ ಸಮೀಕ್ಷೆ ಮತ್ತು ಮಾಹಿತಿ ಸಲ್ಲಿಕೆ, ಶುಚಿತ್ವ ನಿರ್ವಹಣೆ, ಆಹಾರ, ಶುದ್ಧ ಕುಡಿಯುವ ನೀರು ಬಳಕೆ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಅವಶ್ಯಕ ಜಾಗೃತಿ ಮೂಡಿಸಲು ಸಲಹೆ ನೀಡಿದರು.

Advertisement

ಕೊರೊನಾ ವೈರಸ್‌ ಕುರಿತು ಕೈಗೊಂಡ ಕ್ರಮದ ಕುರಿತು ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ. ಬಿರಾದಾರ, ಮುನ್ನೆಚ್ಚರಿಕೆಯಾಗಿ ಜಿಲ್ಲಾಮಟ್ಟದಲ್ಲಿ ವಿವಿಧ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಸಮೀಕ್ಷೆ ಮತ್ತು ಸಂಪರ್ಕ ತಂಡ, ಮಾನವ ಸಂಪನ್ಮೂಲ ನಿರ್ವಹಣಾ ತಂಡ, ತರಬೇತಿ ಮತ್ತು ಜಾಗೃತಿ ತಂಡ, ವಸ್ತು ನಿರ್ವಹಣಾ ತಂಡ, ಮೂಲಸೌಕರ್ಯ ನಿರ್ವಹಣಾ ತಂಡ, ಪ್ರಚಾರ ಮತ್ತು ಜಾಗೃತಿ ತಂಡಗಳನ್ನು ರಚಿಸಲಾಗಿದೆ. ಕೊರೊನಾ ವೈರಸ್‌ ಒಬ್ಬರಿಂದ ಮತ್ತೊಬ್ಬರಿಂದ ಹರಡುವ ವೈರಸ್‌ ಆಗಿದ್ದು ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ, ಹಸ್ತಲಾಘವ ಮತ್ತು ಮುಟ್ಟುವಾಗ ರೋಗ ಹರಡುವ ಸಾಧ್ಯತೆ ಇದೆ. ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಕೊರೋನಾ ವೈರಸ್‌ ಸೋಂಕು ಹರಡುವ ಸಾಧ್ಯತೆಗಳಿವೆ ಎಂದು ರೋಗದ ಲಕ್ಷಣಗಳು ಹಾಗೂ ಹರಡುವಿಕೆ ವಿಧಾನಗಳ ಕುರಿತು ವಿವರಿಸಿದರು.

ಮಾಂಸ, ಮೊಟ್ಟೆ ಇನ್ನಿತರ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು. ಹೆಚ್ಚಿನ ಮಾಹಿತಿಗಾಗಿ 24×7
ಉಚಿತ ಆರೋಗ್ಯ ಸಹಾಯವಾಣಿ 104ಗೆ ಕರೆ ಮಾಡಬಹುದು. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ವೈರಸ್‌ ರೋಗಿಗಳ ಪತ್ತೆಯಾಗಿಲ್ಲ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಹೆಂದ್ರ ಕಾಪ್ಸೆ ಸೇರಿದಂತೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next