Advertisement

ಸ್ವಚ್ಛ ಭಾರತ ಅನುಷ್ಠಾನಕ್ಕೆ ಸೂಚನೆ

12:19 PM Nov 07, 2019 | Naveen |

ವಿಜಯಪುರ: ಜನರ ಆರೋಗ್ಯದ ಹಾಗೂ ಪರಿಸರ ಶುಚಿತ್ವದ ಹಿತದೃಷ್ಟಿಯಿಂದ ಜಾರಿಗೊಂಡಿರುವ ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ನಿಗದಿತ ಗುರಿ ಸಾಧಿಸುವಂತೆ ಈ ಮಾಸಾಂತ್ಯಂಕ್ಕೆ ಬಾಕಿ ಉಳಿದಿರುವ ಶೌಚಾಲಯ ನಿರ್ಮಾಣಕ್ಕೂ ವಿಶೇಷ ಅದ್ಯತೆ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ|ಆರ್‌.ವಿಶಾಲ ಜಿಲ್ಲೆಯ ಆಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಯೋಜನೆಗಳಡಿ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಸ್ವಚ್ಛ ಭಾರತ ಮಿಷನ್‌ ಯೋಜನೆ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು, ಅರ್ಹ ಫಲಾನುಭವಿಗಳಿಗೆ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಸೌಲಭ್ಯ ದೊರೆಯುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಅದರಂತೆ ನಿಗದಿಪಡಿಸಿದ ಗುರಿ ಸಾಧಿಸಲು ಹಾಗೂ ಜೊತೆಗೆ ಬಾಕಿ ಉಳಿದಿರುವ ವೈಯಕ್ತಿಕ ಶೌಚಾಲಯಗಳ ನಿರ್ಮಾಣಗೊಳಿಸಿ ಸಕಾಲಕ್ಕೆ ವೇತನ ಸಂದಾಯ ಮಾಡಬೇಕು ಎಂದು ಸೂಚಿಸಿದರು.

ಸ್ವಚ್ಚ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ಅರ್ಹತೆ ಇದ್ದರೂ ಸೌಲಭ್ಯ ವಂಚಿತರಾಗಿರುವ ಬಗ್ಗೆ ಹಾಗೂ ಅನರ್ಹರಿಗೆ ಈ ಸೌಲಭ್ಯ ದೊರೆತಿರುವ ಬಗ್ಗೆ ದೂರುಗಳಿವೆ. ಅನರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವಲ್ಲಿ ಏಜೆನ್ಸಿಯ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬರುವ ದಿನಗಳಲ್ಲಿ ತಾಲೂಕುವಾರು ಪ್ರಗತಿ ಸಾಧಿಸುವ ಜೊತೆಗೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್‌ ಅಧಿಕಾರಿಗಳ ಮೂಲಕ ಸೂಕ್ತ ನಿಗಾ ಇಡಬೇಕು. ಸೌಜನ್ಯ ಮತ್ತು ಜವಾಬ್ದಾರಿ ರೀತಿಯಲ್ಲಿ ಈ ಯೋಜನೆ ಅನುಷ್ಠಾನದ ವಿಷಯದಲ್ಲಿ ಅಧಿಕಾರಿಗಳು, ಅನುಷ್ಠಾನ ಏಜೆನ್ಸಿ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಗ್ರಾಪಂವಾರು ನಿಗದಿತ ಗುರಿ ಸಾಧಿ ಸುವಂತೆ ಸೂಚನೆ ನೀಡಿದರು.

Advertisement

ಗ್ರಾಪಂ ಮಟ್ಟದಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು. ಹಸಿ ಹಾಗೂ ಒಣ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೆ ಗಮನ ನೀಡಬೇಕು. ಗ್ರಾಪಂವಾರು ಸಮರ್ಪಕ ಕರ ವಸೂಲಿ ಕಾರ್ಯ ಕೈಗೊಳ್ಳಬೇಕು. ಸ್ವಚ್ಛ ಭಾರತ ಮಿಷನ್‌ ಹಾಗೂ ಘಣತ್ಯಾಜ್ಯ ನಿರ್ವಹಣೆ ಕುರಿತು ಪರಿಣಾಮಕಾರಿಯಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ವೇಳಾಪಟ್ಟಿಯಂತೆ ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರದಿಂದ ನಿಗದಿತ ಕ್ರಿಯಾಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕಟ್ಟಡಗಳಿಗೆ ಬಣ್ಣ ಬಳಿಯುವಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದೀರಿ.

ಇನ್ನೂ ಹೆಚ್ಚಿನ ಪ್ರಗತಿಗಾಗಿ ವಿವಿಧ ಶಾಲೆ, ಅಂಗನವಾಡಿ ಕಟ್ಟಡಗಳಿಗೆ ಶೌಚಾಲಯ ಸೌಲಭ್ಯ ಇರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗಳೊಂದಿಗೆ ಸಮನ್ವಯತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶಾಲೆ, ಅಂಗನವಾಡಿ ಕೇಂದ್ರ, ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಪರಿಸರ ನಿರ್ಮಾಣಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಶೌಚಾಲಯ ನಿರ್ಮಾಣಕ್ಕೆ ಜಾಗದ ವ್ಯವಸ್ಥೆ ಇದ್ದಲ್ಲಿ ಸಿಂಗಲ್‌ ಪಿಟ್‌ ಜೊತೆಗೆ ಸೋಕೆಜ್‌ ಪಿಟ್‌ ನಿರ್ಮಾಣಕ್ಕೆ ಗಮನ ನೀಡಬೇಕು. ಸರಳ ಹಾಗೂ ವಿಕೇಂದ್ರಿಕರಣ ವಿಧಾನಗಳ ಮೂಲಕ ವಿವಿಧ ಕಾಮಗಾರಿ ಅನುಷ್ಠಾನ ಮಾಡಬೇಕು. ಶೌಚಾಲಯಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಬೇಡಿಕೆ ಸಲ್ಲಿಸಿದಲ್ಲಿ ಅನುದಾನ ಒದಗಿಸಲಾಗುವದೆಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು ಶುದ್ಧ ಕುಡಿಯುವ ನೀರಿನ ಘಟಕಗಳ ನೀರನ್ನು ಲ್ಯಾಬ್‌ ರೀಪೊರ್ಟ್‌ ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ ಶುದ್ಧ ನೀರಿನ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗುವುದು ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಜನರಿಗೆ ಸುರಕ್ಷಿತ ನೀರು ಆಧಾರದ ಮೇಲೆ ನೀರು ಪೂರೈಸಬೇಕು. ಜೀವ ಹಾನಿ ಹಾಗೂ ಬೆಳೆ ಹಾನಿಗೆ ಕಾರಣವಾಗಬಲ್ಲ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ತೆರುವುಗೊಳಿಸಬೇಕು.

ಮುಂಬರುವ ವರ್ಷದಲ್ಲಿ ಗ್ರಾಮಗಳ ಮನೆ ಮನೆಗೆ ನೀರು ಪೂರೈಕೆ ಮಾಡುವ ಕುರಿತಂತೆ ಅಧಿಕಾರಿಗಳು ಗಮನ ನಿಡುವಂತೆ ತಿಳಿಸಿದ ಅವರು, ಹೆಸ್ಕಾಂ ಅಧಿಕಾರಿಗಳು ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ ಸೌಲಭ್ಯ ಕಲ್ಪಿಸಲು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next