Advertisement

ಆರ್‌ಟಿಒಗೆ ವಾಹನ ಮಾಲೀಕರ ಪರೇಡ್‌

11:53 AM Sep 14, 2019 | Naveen |

•ಜಿ.ಎಸ್‌. ಕಮತರ
ವಿಜಯಪುರ:
ದೇಶದಾದ್ಯಂತ ಮೋದಿ ಸರ್ಕಾರ ಮೋಟಾರು ವಾಹನ ನೂತನ ಕಾಯ್ದೆ ಜಾರಿಗೆ ತಂದದ್ದೇ ತಡ ವಾಹನಗಳ ಮಾಲೀಕರು ವಾಹನಗಳನ್ನು ರಸ್ತೆ ಇಳಿಸಲು ಬೆದರುವಂತೆ ಮಾಡಿದೆ. ವಾಹನ ಖರೀದಿ ಪತ್ರ, ಚಾಲನಾ ಪರವಾನಿಗೆ ಹೀಗೆ ವಾಹನಗಳಿಗೆ ಸಂಬಂಧಿಸಿದಂತೆ ಎಲ್ಲೆಲ್ಲೋ ಇಟ್ಟಿದ್ದ ದಾಖಲೆಗಳನ್ನು ತಡಕಾಡುವಂತೆ ಮಾಡಿದೆ. ಜಿಲ್ಲೆಯಲ್ಲಿ ವಿವಿಧ ಬಗೆಯ 2.20 ಲಕ್ಷ ವಾಹನಗಳಿದ್ದರೆ, ವಿವಿಧ ಬಗೆಯ ದ್ಚಿಚಕ್ರ ವಾಹನಗಳ ಸಂಖ್ಯೆ 2.26 ಲಕ್ಷ ಮೀರಿದೆ. ವಾಹನಗಳಿಂದ ಮಾಲಿನ್ಯ ತಡೆಗೆ ಜಿಲ್ಲೆಯಲ್ಲಿ ವಾಯುಮಾಲಿನ್ಯ ತಪಾಸಣೆಗಾಗಿ 10 ಕೇಂದ್ರಗಳಿದ್ದು, ಮತ್ತೂಂದು ಕೇಂದ್ರ ತೆರೆಯಲು ಪ್ರಸ್ತಾವನೆ ಹೋಗಿದೆ.

Advertisement

ಬರದನಾಡು ಎಂದೇ ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಬಳಕೆ ವಿಷಯದಲ್ಲಿ ಶ್ರೀಮಂತಿಕೆ ಹೆಚ್ಚುತ್ತಿದೆ. ವಾಹನಗಳೇ ಇಲ್ಲದ ಮನೆಗಳನ್ನು ಹುಡುಕುವ ಮಟ್ಟಿಗೆ ವಾಹನಗಳ ಮೇಲಿನ ಪ್ರೀತಿ ಹೆಚ್ಚಾಗಿರುವುದು ಜಿಲ್ಲೆಯಲ್ಲಿ ನೋಂದಣಿಯಾಗಿರುವ ಲಕ್ಷ ಲಕ್ಷ ವಾಹನಗಳ ಸಂಖ್ಯೆಯೇ ಹೇಳುತ್ತದೆ. ಅನ್ಯ ಜಿಲ್ಲೆ-ಹೊರ ರಾಜ್ಯಗಳಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೇ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ.

ನೂತನ ವಾಹನ ಕಾಯ್ದೆ ಜಾರಿಗೆ ಬಂದದ್ದೇ ತಡ ಜಿಲ್ಲೆಯ ವಾಹನಗಳ ಮಾಲೀಕರು ದಾಖಲೆ ಇಲ್ಲದ, ನೋಂದಣಿ ಇಲ್ಲದ, ವಿಮೆ ದಾಖಲೆ, ಸೇರಿದಂತೆ ವಿವಿಧ ಬಗೆಯ ದಾಖಲೆಗಳನ್ನೆಲ್ಲ ತಡಕಾಡುತ್ತಿದ್ದಾರೆ. ದಾಖಲೆ ಸರಿ ಇಲ್ಲದ ವಾಹನಗಳ ಮಾಲೀಕರು ತಮ್ಮ ವಾಹನಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಎಡತಾಕುತ್ತಿದ್ದಾರೆ. ಚಾಲನೆ ಪರವಾನಿಗೆ ಪಡೆಯುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

ವಿಜಯಪುರ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೆೇರಿಯಲ್ಲಿ ನೋಂದಣಿಯಾಗಿರುವ ದಾಖಲೆಗಳನ್ನೇ ಅವಲೋಕಿಸಿದರೆ ಜಿಲ್ಲೆಯಲ್ಲಿ ಟ್ರಕ್‌-ಲಾರಿ ಸೇರಿ ವಿವಿಧ ಬಗೆಯ ಸರಕು ಸಾಗಾಣಿಕೆಯ 7766, ಶಾಲಾ ವಾಹನಗಳು 980, ಒಪ್ಪಂದ‌, ಶಿಕ್ಷಣ ಸಂಸ್ಥೆ ಸೇರಿ 590 ಬಸ್‌ಗಳು, 1,318 ಮೋಟಾರು ಕ್ಯಾಬ್ಸ್, 939 ಮ್ಯಾಕ್ಸಿಕ್ಯಾಬ್‌ ಸೇರಿದಂತೆ 2,353 ಟ್ಯಾಕ್ಸಿ, ತ್ರಿ-ಚತುರ್ಥ ಸೀಟ್‌ಗಳ 6,928 ವಾಹನಗಳು 27,603, ಕಾರು-2950 ಜೀಪು-4,215 ಓಮ್ನಿ, 25,153 ಟ್ರ್ಯಾಕ್ಟರ್‌, 16,125 ಟ್ರ್ಯೆಲರ್‌, ಬೃಹತ್‌ ಕಟ್ಟಡಗಳ ನಿರ್ಮಾಣದಲ್ಲಿ ಬಳಸುವ ವಿವಿಧ ಮಾದರಿಯ ಭಾರಿಶಕ್ತಿಯ 2,659, 2,353 ಟ್ಯಾಕ್ಸಿಗಳಿವೆ. ವಿವಿಧ ಬಗೆಯ ವಾಹನಗಳಿಗಿಂತ ಜಿಲ್ಲೆಯಲ್ಲಿ ವಿವಿಧ ಬಗರೆಯ ದ್ವಿಚಕ್ರ ವಾಹನಗಳ ಸಂಖ್ಯೆ 2,26,925 ಎಂದು ಸಾರಿಗೆ ಇಲಾಖೆ ದಾಖಲೆಗಳು ಹೇಳುತ್ತವೆ. ಇದರ ಹೊರತಾಗಿ ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳ ನೋಂದಣಿ ಇರುವ ಹಾಗೂ ಈಚೆಗೆ ಹೊಸದಾಗಿ ನೋಂದಣಿ ಆಗುತ್ತಿರುವ ಪಾಂಡಿಚೇರಿ ನೋಂದಣಿಯ ವಾಹನಗಳು ಜಿಲ್ಲೆಯಲ್ಲಿ ಓಡಾಡುತ್ತಿದ್ದು, ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿಸುವಲ್ಲಿ ತಮ್ಮ ಪಾಲನ್ನೂ ನೀಡಿವೆ. ಜಿಲ್ಲೆಯಲ್ಲಿ ವಾಹನ ಚಾಲನೆ ತರಬೇತಿ ನೀಡುವ 47 ಕೇಂದ್ರಗಳಿವೆ. ಎಲ್ಲ ಬಗೆ ವಾಹನಗಳು ಸೇರಿದಂತೆ ಸುಮಾರು 5 ಲಕ್ಷ ವಾಹನಗಳಿದ್ದು, ಈ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಯಲು ಜಿಲ್ಲೆಯಲ್ಲಿ 10 ಕಡೆಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೇ ಮತ್ತೂಂದು ಕೇಂದ್ರ ತೆರೆಯಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಇಂಡಿ ತಾಲೂಕಿನ ಝಳಕಿ ಹಾಗೂ ಮುದ್ದೇಬಿಹಾಳ ತಾಲೂಕ ಕೇಂದ್ರದಲ್ಲಿ ತಲಾ ಒಂದೊಂದು ವಾಯು ಮಾಲಿನ್ಯ ತಪಾಷಣಾ ಕೇಂದ್ರಗಳಿದ್ದು, ಬಾಕಿ 8 ಕೇಂದ್ರಗಳು ಜಿಲ್ಲಾ ಕೇಂದ್ರದಲ್ಲೇ ಇವೆ. ವಾಯು ಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲು ಪ್ರಾದೇಶಿಕ ಸಾರಿಗೆ ಕಚೇರಿಗಳಿಂದಲೇ ಪ್ರಸ್ತಾವನೆ ಹೋದರೂ, ಪರವಾನಿಗೆ ನೀಡುವ ಹಾಗೂ ಈ ಕೇಂದ್ರಗಳಲ್ಲಿ ತಪಾಸಣೆಗೊಳ್ಳುವ ವಾಹನಗಳ ಸ್ಥಿತಿಗತಿಯ ಕುರಿತು ಪೂರ್ಣ ಪ್ರಮಾಣದ ದಾಖಲೆಗಳೆಲ್ಲ ಅನ್‌ಲೈನ್‌ ಮೂಲಕ ಸಾರಿಗೆ ಇಲಾಖೆ ಕೇಂದ್ರ ಕಚೇರಿಗೆ ನಿಯಂತ್ರಣದಲ್ಲಿ ಇರುತ್ತವೆ. ಹೀಗಾಗಿ ಜಿಲ್ಲೆಯಲ್ಲಿ ವಾಯು ಮಾಲಿನ್ಯ ಉಂಟು ಮಾಡುವ ವಾಹನಗಳ ಸಂಖ್ಯೆ ಎಷ್ಟು, ಮಾಲಿನ್ಯ ರಹಿತ ಪರಿಶೀಲನಾ ಪ್ರಮಾಣ ಪತ್ರ ಪಡೆದಿರುವ ವಾಹನಗಳ ಸಂಖ್ಯೆ ಎಷ್ಟು ಎಂದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಲಭ್ಯ ಇಲ್ಲ ಎಂದು ಇಲಾಖೆ ಮೂಲಗಳು ವಿವರಿಸುತ್ತವೆ.

Advertisement

ವಾಯು ಮಾಲಿನ್ಯ ಲೈಸೆನ್ಸ್‌ ಪಡೆದ ಬಳಿಕ ಏಜೆನ್ಸಿಗಳಿಗೆ ಕೇಂದ್ರ ಕಚೇರಿಯ ವೆಬ್‌ಸೈಟ್‌ಗೆ ಸಂಪರ್ಕ ಪಡೆಯುವ ಕಾರಣ ಪ್ರತಿ ಕೇಂದ್ರಕ್ಕೂ ಪ್ರತ್ಯೇಕ ಗುರುತಿನ ವ್ಯವಸ್ಥೆ ಹಾಗೂ ಪಾಸ್‌ವರ್ಡ್‌ ಇರುತ್ತದೆ. ವಾಯು ಮಾಲಿನ್ಯ ಪರಿಶೀಲನೆ ಮಾಡುವ ಯಂತ್ರ ಕಂಪ್ಯೂಟರೀಕೃತವಾಗಿದ್ದು, ಪರಿಣಾಮ ವಾಯುಮಾಲಿನ್ಯ ತಪಾಸಣಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಇರುವುದಿಲ್ಲ. ಒಂದೊಮ್ಮೆ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಲ್ಲಿ ಲೋಪಗಳು ಕಂಡು ಬಂದಲ್ಲಿ ಕೇಂದ್ರ ಕಚೇರಿಯಿಂದ ಪ್ರಾದೇಶಿಕ ಕಚೆೇರಿಗೆ ಸೂಚನೆ ನೀಡಿ, ಪರಿಶೀಲನೆ ಮೂಲಕ ವರದಿ ಪಡೆಯಲಾಗುತ್ತದೆ.

ಜಿಲ್ಲೆಯಲ್ಲಿ ನೂತನ ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ವಾಹನ ಚಾಲನೆ ಲೈಸೆನ್ಸ್‌ ಹೊಸದಾಗಿ ಪಡೆಯುವವರ ಹಾಗೂ ನವೀಕರಣ ಮಾಡಿಸುವವರ ಸಂಖ್ಯೆಯಲ್ಲಿ ಶೇ. 10 ಏರಿಕೆಯಾಗಿದೆ. ದಾಖಲೆಗಳನ್ನು ಸರಿ ಮಾಡಿಸಿಕೊಳ್ಳಲು ಜನರು ವಿಶೇಷ ಆಸಕ್ತಿ ತೋರುತ್ತಿದ್ದಾರೆ.
ಬಿ.ಆರ್‌. ಮಂಜುನಾಥ
ಪ್ರಾದೇಶಿಕ ಸಾರಿಗೆ ಆಯುಕ್ತರು, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next