ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ನಗರದಲ್ಲಿ 2022-23ನೇ ಸಾಲಿನ ಸಂತೆ ಬಜಾರ, ಸಂಡೆ ಬಜಾರ, ನೆಹರು ಮಾರ್ಕೆಟ್ ಒಳ ಬದಿ ಕಟ್ಟೆ, ಕೋಳಿ ಬಜಾರ ಕರ ವಸೂಲಿ ಗುತ್ತಿಗೆ 1.17 ಕೋಟಿ ರೂ.ಗೆ ಹರಾಜಾಗಿದೆ. ಪಾಲಿಕೆ ಇತಿಹಾಸದಲ್ಲೇ ಇಷ್ಟೊಂದು ಮೊತ್ತಕ್ಕೆ ಸಂತೆ ಕರ ವಸೂಲಿ ಹರಾಜಾಗಿರುವುದು ದಾಖಲೆ ಎನಿಸಿದೆ.
ಗುರುವಾರ ಮಹಾನಗರ ಪಾಲಿಕೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸುನಿಲಕುಮಾರ ಅಶಧ್ಯಕ್ಷತೆಯಲ್ಲಿ ಜರುಗಿದ ಸಂತೆ ಕರ ಹರಾಜು ಸಭೆಯಲ್ಲಿ ಹೆಚ್ಚಿನ ಬಿಡ್ ಹಾಕಿದ ಆರ್.ಎಚ್.ಜಾನವೇಕರ ಗುತ್ತಿಗೆ ಪಡೆದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ದಿನದ ಸಂತೆ ಕರ ಹರಾಜು ಪ್ರಕ್ರಿಯೆ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಂತೆ ಬಜಾರ, ಸಂಡೆ ಬಜಾರ, ವಿಭಾಗದಲ್ಲಿ ಸನ್-2018-19 ನೇ ಸಾಲಿಗಾಗಿ ಹರಾಜು ಪ್ರಕ್ರಿಯೆ ನೆರವೇರಿಸಲಾಗಿತ್ತು. ನಿಗದಿಯಂತೆ ಪ್ರತಿ ವರ್ಷ ಶೇ.5 ರಂತೆ ಹೆಚ್ಚುವರಿ ಮೊತ್ತ ಹೆಚ್ಚಿಸಿ ನೀಡಲಾಗಿತ್ತು. ಈ ಬಾರಿ ಸನ್-2022-23 ಸಾಲಿಗೆ ಬಹಿರಂಗ ಹರಾಜನ್ನು 99.25 ಲಕ್ಷ ರೂ.ಗಳಿಗೆ ನಿಗದಿ ಮಾಡಲಾಗಿತ್ತು.
ಸದರಿ ಮೊತ್ತ ಈ ಹಿಂದಿನ ದರವಾರುಗಳಿಗೆ ಅಂದಾಜು 5 ಪಟ್ಟು ಹೆಚ್ಚುವರಿಯಾಗಿರುತ್ತದೆ. ಈ ಮೊತ್ತದೊಂದಿಗೆ ಬೇಡಿಕೆ ಹಣದ ಶೇ.18 ರಷ್ಟು ಜಿ.ಎಸ್.ಟಿ ಸೇರಿಕೆ 1,17,11,500 ರೂ.ಗೆ ಗುತ್ತಿಗೆ ನೀಡಲಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಪಾಲಿಕೆ ಸಂತೆ ಕರ ವಸೂಲಿ ಗುತ್ತಿಗೆಯಲ್ಲಿ ಇಷ್ಟೊಂದು ಬೃಹತ ಮೊತ್ತ ಪಡೆದಿದೆ.
ನೆಹರು ಮಾರ್ಕೆಟ್ ಒಳ ಬದಿಯಲ್ಲಿರುವ ಕಟ್ಟೆ ಮೇಲೆ ವ್ಯಾಪಾರ ಮಾಡುವ 2022-23 ಸಾಲಿಗೆ ಸದರಿ 1.41 ಲಕ್ಷ ರೂ.ಗಳಿಗೆ ಬೇಡಿಕೆ ಇತ್ತು.ಅಲ್ತಾಫ್ ಅಬ್ದುಲ್ ರಸೀದ್ ಬಾಗವಾನ್ ಎಂಬವರು ಶೇ.18 ಜಿ.ಎಸ್.ಟಿ ಸೇರಿ 1,66,380 ಗುತ್ತಿಗೆ ಪಡೆದಿದ್ದಾರೆ.
ಕೋಳಿ ಬಜಾರ ವ್ಯಾಪಾರ ಸ್ಥಳದ ಬಹಿರಂಗ 1.20 ಲಕ್ಷ ರೂ.ಗೆ ಹರಾಜಾಗಿದ್ದು, ಹಿಂದಿಒನ ದರಕ್ಕೆ ಹೋಲಿಸಿದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಶೇ.18 ಜಿ.ಎಸ್‍ಟಿ ಸೇರಿ 1,41,600 ರೂ.ಗೆ ಹಸನ ಬಾಲನವರ ಗುತ್ತಿಗೆ ಪಡೆದಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಉಪ ಆಯುಕ್ತ ಮಹಾವೀರ ಬೋರಣ್ಣವರ, ಕಂದಾಯ ಅಧಿಕಾರಿಗಳಾದ ಆರ್.ಬಿ.ಶಿರಶ್ಯಾಡ, ಕೆ.ಎ.ಲೈನ್, ಶಿವಾನಂದ ಪೂಜಾರ, ಕಂದಾಯ ನಿರೀಕ್ಷಕರಾದ ಆರ್.ಎ.ಮುಜಾವರ, ಕಚೇರಿ ವ್ಯವಸ್ಥಾಪಕರು ಎಲ್.ಎಂ.ಕಾಂಬಳೆ, ಕರ ವಸೂಲಿ ವಿಭಾಗದ ಎನ್.ಆರ್.ಶೆಟಗಾರ, ಜೆ.ವಿ.ಕಾಂಬಳೆ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದರ, ಪಾಂಡು ಸಾಹುಕಾರ ದೊಡಮನಿ, ಚಂದ್ರು ಚೌದರಿ, ರಾಚು ಬಿರಾದಾರ, ಸಂತೋಷ ತೆಲಸಂಗ ಸೇರಿದಂತೆ ಇತರರು ಪಾಲ್ಗೊಂಡಿದ್ದರು.