ವಿಜಯಪುರ: ವಿಜಯಪುರ ಲೋಕಸಭಾ ಸದಸ್ಯ ಸಂಸದ ರಮೇಶ ಜಿಗಜಿಣಗಿ ಪ್ರಯಾಣದ ವೇಳೆ ಎದೆನೋವು ಕಾಣಿಸಿಕೊಂಡು, ಬಾಗಲಕೋಟೆಯ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಭಾನುವಾರ ಬೆಳಿಗ್ಗೆ ರಸ್ತೆ ಮಾರ್ಗವಾಗಿ ವಿಜಯಪರದಿಂದ ಹುಬ್ಬಳ್ಳಿಗೆ ಹೊರಟಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಬಾಗಲಕೋಟೆ ಜಿಲ್ಲೆ ಬಿಳಗಿ ಬಳಿ ಪ್ರಯಾಣಿಸುವಾಗ ಉಸಿರಾಟದ ಸಮಸ್ಯೆ ಹಾಗೂ ಎದೆನೋವು ಕಾಣಿಸಿಕೊಂಡಿದೆ.
ಕೂಡಲೇ ಅವರನ್ನು ಬಾಗಲಕೋಟೆ ಶ್ರೀಕುಮಾರೇಶ್ವರ ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆಯಲ್ಲಿರುವ ಬಸವೇಶ್ವರರ ವಿದ್ಯಾವರ್ಧಕ ಸಂಸ್ಥೆಯ ಶ್ರೀಕುಮಾರೇಶ್ವರ ಆಸ್ಪತ್ರೆ ದಾಖಲಿಸಿ, ಆಕ್ಸಿಜನ್ ನೀಡಿ ಚಿಕಿತ್ಸೆ ನೀಡಲಾಗಿದೆ.
ಮೇಲ್ನೋಟಕ್ಕೆ ಲಘು ಹೃದಯಾಘಾತ ಆಗಿರುವ ಶಂಕೆಯ ಹಿನ್ನೆಲೆ ವೈದ್ಯರು ಹೃದ್ರೋಗಕ್ಕೆ ಸಂಬಂಧಿಸಿದಂತೆ ಎಂಜಿಯೋಗ್ರಾಫಿ ಪರೀಕ್ಷೆಗೆ ಮುಂದಾಗಿದ್ದಾರೆ. ಸದ್ಯ ಜಿಗಜಿಣಗಿ ಅವರ ಆರೋಗ್ಯ ಸುಧಾರಿಸುತ್ತಿದ್ದು, ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಂಸದ ಜಿಗಜಿಣಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.