ವಿಜಯಪುರ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಕಂಠಿ ಅವರ ದೂರಾಲೋಚನೆ ಫಲವಾಗಿ ಉತ್ತರ ಕರ್ನಾಟಕ ಭಾಗದ ವಿಜಯಪುರ ನಗರದಲ್ಲಿ ಸೈನಿಕ ಶಾಲೆ ಆರಂಭಗೊಂಡಿವೆ. ಅವರ ಕನಸಿನ ಕೂಸಾಗಿರುವ ಈ ಸೈನಿಕ ಶಾಲೆ ಅತ್ಯುತ್ತಮ ಸೌಲಭ್ಯ ಹೊಂದಿರುವ ಶಾಲೆ ಎಂಬ ಹಿರಿಮೆ ಹೊಂದಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ ಹೇಳಿದರು.
ನಗರದ ಸೈನಿಕ ಶಾಲೆಯ ಎಸ್.ಆರ್. ಕಂಠಿ ಸಭಾಂಗಣದಲ್ಲಿ ವಿಜಯಪುರ ಸೈನಿಕ ಶಾಲೆಯ 56ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಏನಾದರು ಸಾಧಿಸುವ ಗುರಿ ಇದ್ದಲ್ಲಿ, ಕಿರಿ ವಯಸ್ಸಿನಲ್ಲೇ ಅದಕ್ಕಾಗಿ ಸದಾ ಕ್ರಿಯಾಶೀಲರಾಗಿರಬೇಕು. ಹೊಸ ಆವಿಷ್ಕಾರದ ಮನೋಭಾವಗಳನ್ನು ಮಕ್ಕಳು ಕಿರಿಯರಿದ್ದಾಗಲೇ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಸತತ ಪ್ರಯತ್ನದಿಂದ ಏನೆಲ್ಲವನ್ನೂ ಸಾಧಿಸಲು ಸಾಧ್ಯ. ನಾನು ಕೂಡ ಇದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಂಬುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಸೈನಿಕ ಶಾಲೆಯಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸಿದರು.
ಈ ಶಾಲೆಯಲ್ಲಿ ಶಿಕ್ಷಣ ಪಡೆಯುವ ಸದವಕಾಶ ನಿಮಗೆ ದೊರಕಿದ್ದು, ಇದರ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಗಳನ್ನು ನಿರ್ವಹಿಸಬೇಕು. ನಮ್ಮ ವ್ಯಕ್ತಿತ್ವ ನಿರ್ಮಾಣದ ವಿಷಯದಲ್ಲಿ ಸೈನಿಕ ಶಾಲೆ ಅತ್ಯುತ್ತಮವಾಗಿದೆ ಎಂದರು.
ಶಾಲೆಗೆ ಭೇಟಿ ನೀಡುತ್ತಲೇ ಶಿವಯೋಗಿ ಕಳಸದ ಹುತಾತ್ಮ ಸೈನಿಕ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು. ಸೈನಿಕ ಶಾಲೆ ಪ್ರಾಚಾರ್ಯ ಭಾರತೀಯ ನೌಕಾಪಡೆ ಕ್ಯಾಪ್ಟನ್ ವಿನಯ ತಿವಾರಿ ಶಾಲೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಶಾಲೆ ಸಾಧನೆ ವಾರ್ಷಿಕ ವರದಿ ಓದಿದರು.
ಉಪ ಪ್ರಾಚಾರ್ಯ ಲೆಫ್ಟಿನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಮ್ ಸಿಂಗ್ (ಸೇನಾ ಮೆಡಲ್), ಜಿ.ಶ್ರೀರಾಮಮೂರ್ತಿ ಸೇರಿದಂತೆ ಇತರರು ಇದ್ದರು.