ವಿಜಯಪುರ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವುದನ್ನು ವಿರೋಧಿಸಿ ಮರ್ಚ್‌ಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬುಧವಾರ ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್ ಮಾಡಲಾಗಿತ್ತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅಸೋಸಿಯೇಷನ್ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸಂಘಟನೆ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ಕೆಲವೊಂದು ತಿದ್ದುಪಡಿ ತರಲು ಉದ್ದೇಶಿಸಿದೆ. ಈ ನೂತನ ತಿದ್ದುಪಡಿಯಿಂದ ರೈತರು, ವರ್ತಕರು, ಹಮಾಲರು, ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಮತ್ತು ವರ್ತಕರ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಪಿಎಂಸಿ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳಲಿದೆ.
ಎಪಿಎಂಸಿ ಅವಲಂಬಿತ ಕುಟುಂಬಗಳಿಗೆ ಕಾಯ್ದೆ ಮಾರಕವಾಗಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಪುನರ್ ಪರಿಶೀಲಿಸಿ ಕೂಡಲೇ ಈ ತಿದ್ದುಪಡಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ತಿದ್ದುಪಡಿ ಕಾಯ್ದೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಂಪೂರ್ಣ ಖಾಸಗೀಕರಣವಾಗಿ ರೈತರು, ವರ್ತಕರು, ಹಮಾಲರು, ಕೂಲಿಕಾರ್ಮಿಕರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಖಾಸಗೀಕರಣದಿಂದ ರೈತರ ಹಿತರಕ್ಷಣೆಗಿಂತ ಬಂಡವಾಳಿಗರ ಬಲವರ್ಧನೆಯಾಗಲಿದ್ದು, ಸರ್ಕಾರ ಕೂಡಲೇ ಕಾಯ್ದೆ ತಿದ್ದುಪಡಿಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ನೀಲೇಶ ಶಹಾ, ಜಯಾನಂದ ತಾಳಿಕೋಟಿ, ಪ್ರವೀಣ ವಾರದ ಇತರರು ಉಪಸ್ಥಿತರಿದ್ದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಂದು ಬಂದ್
ತಾಳಿಕೋಟೆ: ರೈತರು ಮತ್ತು ವರ್ತಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ಖಾಸಗಿ ಕರ ಮಾಡುವ ಉದ್ದೇಶ ಹೊಂದಿದೆ. ಸರ್ಕಾರದ ಈ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಮೇ 14ರಂದು ಒಂದು ದಿನ ಸಾಂಕೇತಿಕವಾಗಿ ಬಂದ್ ಮಾಡಲು ನಿರ್ದರಿಸಲಾಗಿದೆ ಎಂದು ಅಡತ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ವಿ.ಎ. ಹಜೇರಿ ತಿಳಿಸಿದ್ದಾರೆ.