ವಿಜಯಪುರ: ಜಿಲ್ಲೆಯಾದ್ಯಂತ ಅನರ್ಹರರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಾದ್ಯಂತ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಕ್ಷಣ ಪತ್ತೆ ಹಚ್ಚಬೇಕು. ನಿಯಮಾವಳಿ ಅನ್ವಯ ಇದೇ ಮಾರ್ಚ್ 31ರೊಳಗೆ ಎಪಿಎಲ್ ಪಡಿತರ ಚೀಟಿಗಳಾಗಿ ಪರಿವರ್ತಿಸುವ ಕುರಿತಂತೆ ಸೂಚಿಸಿದರು.
ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಲು ವೇತನವನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲ ಕಾಯಂ ನೌಕರರು, ಸೇವಾ ತೆರಿಗೆ ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೆರ್ ಒಣಭೂಮಿ, ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ಗ್ರಾಮೀಣ ಪ್ರದೇಶ ಹೊರತು ಪಡಿಸಿ ನಗರ, ಪಟ್ಟಣ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆಯನ್ನು ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವಂತವಾಗಿ ಓಡಿಸುವ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್ ಹೊಂದಿದ ಕುಟುಂಬಗಳನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ರೂ.ಗಿಂತ ಹೆಚ್ಚಿಗೆ ಇರುವ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಲ್ಲ ಎಂದು ವಿವರಿಸಿದರು.
ಅದರಂತೆ ಬಿಪಿಎಲ್ ಪಡಿತರ ಚೀಟಿಗೆ ಅರ್ಹತೆ ಹೊಂದದ ಕುಟುಂಬಗಳು ಒಂದು ವೇಳೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದರೆ, ಆಯಾ ಸ್ಥಳೀಯ ಸಂಸ್ಥೆಗಳಿಂದ ಮಾಹಿತಿ ಕ್ರೋಢೀಕರಿಸಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಕಂಡು ಹಿಡಿದು ಅವರು ಈವರೆಗೆ ಪಡೆದಿರುವ ಪಡಿತರ ವಸ್ತುಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆ ದರದಂತೆ ದಂಡವನ್ನು ವಿ ಧಿಸುವಂತೆ ಜಿಲ್ಲೆಯ ಎಲ್ಲ ತಾಲೂಲು ತಹಶೀಲ್ದಾರ್‌ರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರ್ಕಾರದ ಆದೇಶದನ್ವಯ ಪ್ರತಿಯೊಂದು ಮತ್ತು ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರು ಸಂಬಂಧಿಸಿದ ಆಯಾ ನ್ಯಾಯ ಬೆಲೆ ಅಂಗಡಿಗೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಬಯೋ ಮೆಟ್ರಿಕ್ ನೀಡಿ, ಇ-ಕೆವೈಸಿ ಮಾಡಿಸಲು ಸೂಚಿಸಿದೆ. ಈವರೆಗೆ ಕೇವಲ 2,90,646 ಪಡಿತರ/ ಚೀಟಿದಾರರು ಮಾತ್ರ ಕೆವೈಸಿ ಮಾಡಿದ್ದು, ಮಾರ್ಚ್ 31ರವರೆಗೆ ಮಾತ್ರ ಸರ್ಕಾರ ಇ-ಕೆವೈಸಿ ಮಾಡಲು ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳನ್ನು ಇ-ಕೆವೈಸಿ ಮಾಡಲು ಸೂಕ್ತ ಜಾಗೃತಿ ಮತ್ತು ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಕೆಲ ಪಡಿತರ ಚೀಟಿದಾರರು ಸರ್ಕಾರದಿಂದ ಪಡಿತರ ವಸ್ತುಗಳಾದ ಅಕ್ಕಿಯನ್ನು ಪಡೆದುಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಅಕ್ಕಿ ಮಾರಾಟ ಮಾಡುವವರ ಬಗ್ಗೆ ಪತ್ತೆ ಹಚ್ಚಬೇಕು. ಅಂತಹ ಪಡಿತರ ಚೀಟಿದಾರರ ವಿರುದ್ಧ ಪ್ರಕರಣ ಸಹ ದಾಖಲಿಸುವ ಜೊತೆಗೆ ಪಡಿತರ ಚೀಟಿ ರದ್ದು ಪಡಿಸಲು ಮತ್ತು ಕಾನೂನು ರಿತ್ಯ ಅವಶ್ಯಕ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲೆಯಲ್ಲಿ 2016ರಿಂದ ಈವರೆಗೆ 1,121 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದವರ ಮೇಲೆ ಕ್ರಮ ಕೈಗೊಂಡು 87 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ 6700 ಬಿಪಿಎಲ್ ಕಾರ್ಡ್ ಪಡೆದ ಅನರ್ಹರರನ್ನು ಪತ್ತೆ ಹಚ್ಚಿ 55 ಸಾವಿರ ರೂ. ದಂಡ ವಿ ಧಿಸಲಾಗಿದೆ. 5500 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ ಹೇಳಿದರು.