Advertisement

ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ

12:59 PM Apr 24, 2020 | Naveen |

ವಿಜಯಪುರ: ಕೋವಿಡ್‌-19 ನಿಯಂತ್ರಿಸಲು ಸರ್ಕಾರ ಘೋಷಿಸಿದ್ದ ಲಾಕ್‌ಡೌನ್‌ ನಿಯಮದಲ್ಲಿ ಕೆಲವು ವಿನಾಯಿತಿ ನೀಡಿದ್ದು, ಸದ್ಯಕ್ಕೆ ಜಾರಿಯಲ್ಲಿರುವ ಲಾಕ್‌ ಡೌನ್‌ ನಿಯಮ ಮತ್ತು ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಗುರುವಾರ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕಂಟೇನ್ಮೆಂಟ್‌ ವಲಯ ಹೊರತು ಪಡಿಸಿ ವಿವಿಧ ಕಡೆ ಲಾಕ್‌ಡೌನ್‌ ನಿಯಮ ಮತ್ತು ನಿರ್ಬಂಧ ಅನುಷ್ಠಾನದಲ್ಲಿ ದೂರುಗಳಿಲ್ಲದಂತೆ ನಿರ್ವಹಿಸಬೇಕು. ತೀವ್ರ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರ ಇರುವವರನ್ನು ಗುರುತಿಸಲು ಆಶಾ ಕಾರ್ಯಕರ್ತೆಯರು, ಎಎನ್‌ಎಂ. ಬಿಎಲ್‌ ಒಗಳು ಮನೆ ಮೆನೆಗೆ ಭೇಟಿ ಕಾರ್ಯಕ್ರಮ ನಡೆಸಿದ್ದು, ಯಾವುದೇ ಸಮಸ್ಯೆ ಇಲ್ಲದಂತೆ ಸಮೀಕ್ಷೆ ನಡೆಸಬೇಕು. ತಹಶೀಲ್ದಾರರು, ಪೊಲೀಸ್‌ ಅಧಿಕಾರಿಗಳು ಈ ವಿಷಯವಾಗಿ ನಿಗಾ ಇರಿಸಬೇಕು. ಸೋಂಕಿತರು ಕಂಡು ಬಂದಲ್ಲಿ ತಕ್ಷಣ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ವಿನಾಯಿತಿ ನೀಡಿದ್ದರೂ ಕೂಡ ಪ್ರತಿದಿನ, ಕಾರಣವಿಲ್ಲದೆ ಓಡಾಡುವವರ ಬಗ್ಗೆ ತೀವ್ರ ನಿಗಾ ಇಡಬೇಕು. ಕೃಷಿ, ತೋಟಗಾರಿಕೆ, ಉದ್ಯಮ ವಲಯಕ್ಕೆ, ಲೋಕೋಪಯೋಗಿ, ಹೆದ್ದಾರಿ ನಿರ್ಮಾಣ ಚಟುವಟಿಕೆ ನಿರ್ವಹಿಸುವವರ ಬಗ್ಗೆ ಕೂಲಂಕುಷ ಪರಿಶೀಲಿಸಿ ಅನುಮತಿ ನೀಡಬೇಕು. ಕಾರ್ಮಿಕರಿಗೆ ದಿನನಿತ್ಯ ಓಡಾಡುವುದಕ್ಕೆ ಅವಕಾಶ ನೀಡದೆ, ಆಯಾ ಉದ್ಯಮ ಮಾಲೀಕರು ಮತ್ತು ಗುತ್ತಿಗೆದಾರರು ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನರ್‌, ಮಾಸ್ಕ್, ಸ್ಯಾನಿಟೈಸರ್‌ ಸೌಲಭ್ಯ ಕಲ್ಪಿಸುವ ಷರತ್ತು ವಿಧಿಸಬೇಕು ಎಂದರು.

ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಂಟಿ ಕೃಷಿ ನಿರ್ದೇಶಕರು, ಗ್ರಾಮಾಂತರ ಪ್ರದೇಶದಲ್ಲಿ ಆಯಾ ಕೃಷಿ ಸಹಾಯಕ ನಿರ್ದೇಶಕರು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗಿದೆ. ಕಾರ್ಮಿಕರನ್ನು ಸಾಗಿಸುವ ವಾಹನಗಳಿಗೆ ಗುರುತಿನ ಚೀಟಿ ನೀಡಬೇಕು. ಅರ್ಹರಿಗೆ ಮಾತ್ರ ಗುರುತಿನ ಚೀಟಿ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಉಪ ವಿಭಾಗಾಧಿಕಾರಿಗಳು, ಡಿವೈಎಸ್ಪಿ, ಆಯಾ ತಾಲೂಕು ತಹಶೀಲ್ದಾರ್‌ರು, ಪೊಲೀಸ್‌ ಅಧಿಕಾರಿಗಳೇ ಜವಾಬ್ದಾರರು. ಜಿಲ್ಲೆಯಿಂದ ಹೊರಗೆ ಹೋಗಲು ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿಗಳಿಗೆ ಮಾತ್ರ ಇದ್ದು, ಜಿಲ್ಲೆಯೊಳಗೆ ಸರ್ಕಾರದ ನಿಯಮಾವಳಿಗಳಂತೆ ಅನುಮತಿ ಮತ್ತು ಪಾಸ್‌ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಅತ್ಯಂತ ಅನಿವಾರ್ಯ ಸಂದರ್ಭದಲ್ಲಿ ಮದುವೆಗಳಿಗೆ 10 ಜನರಿಗೆ ಮಾತ್ರ ಮತ್ತು ಶವಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಈ ಕುರಿತು ಜನನ-ಮರಣ ನೋಂದಣಿ ಅಧಿಕಾರಿಗಳು ಮತ್ತು ಪಿಡಿಒ, ಗ್ರಾಮ ಲೆಕ್ಕಾ ಧಿಕಾರಿಗಳು ಜವಾಬ್ದಾರರಾಗಿದ್ದು, ಯಾವದೇ ಲೋಪವೆಸಗಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿ 188ರನ್ವಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಾದ್ಯಂತ ಯಾವುದೇ ಜಾತ್ರೆಗಳಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಆಯಾ ತಹಶೀಲ್ದಾರ್‌ರು, ಪೊಲೀಸ್‌ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ಇಡಬೇಕು. ಹೊಟೇಲ್‌, ಡ್ರೈ ಫ್ರೂಟ್ಸ್‌, ಐಸ್‌ ಕ್ರಿಂ, ಜ್ಯೂಸ್‌ ಅಂಗಡಿಗಳ ಮೂಲಕ ಮನೆ ಮನೆಗೆ ವಿತರಿಸುವವರಿಗೂ ಪಾಸ್‌ ನೀಡಲಾಗುವುದು. ಒಟ್ಟಾರೆ ಲಾಕ್‌ಡೌನ್‌ ಜಾರಿ ಜೊತೆಗೆ ಸಾಂಕ್ರಾಮಿಕ ರೋಗ ನಿವಾರಣಾ ಸಿಬ್ಬಂದಿಗಳಿಗೆ ರಕ್ಷಣೆ ಸಾಮಾಜಿಕ ಕ್ಷೇತ್ರ, ನರೇಗಾ, ಸಾರ್ವಜನಿಕ ಕ್ಷೇತ್ರ, ಸರಕು ಸಾಗಣೆ, ವಾಣಿಜ್ಯ ಚಟುವಟಿಕೆ, ಉದ್ಯಮ ಚಟುವಟಿಕೆ ಹಾಗೂ ನಿರ್ಮಾಣ ಚಟುವಟಿಕೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದು, ಮಹಾನಗರ ಪಾಲಿಕೆ, ಆಯಾ ನಗರ ಸ್ಥಳೀಯ ವ್ಯಾಪ್ತಿಯಲ್ಲಿ ಸೂಕ್ತ ನಿರ್ದೇಶನ ಸಹ ಪಾಲಿಸುವಂತೆ ತಿಳಿಸಿದ್ದಾರೆ. ಎಸ್ಪಿ ಅನುಪಮ್‌ ಅಗರವಾಲ್‌, ಜಿಪಂ ಸಿಇಒ ಗೋವಿಂದ ರಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next