ವಿಜಯಪುರ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 5 ವಿವಿ ಪ್ಯಾಟ್ ಮತಗಳ ಎಣಿಕೆ ಮಾಡಿ, ಮತ ಯಂತ್ರಗಳಲ್ಲಿನ ಮತಗಳ ಜೊತೆಗೆ ತಾಳೆ ಮಾಡಿದ ಬಳಿಕ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿ ಪ್ಯಾಟ್‌ನಲ್ಲಿನ ಮತಗಳನ್ನು ಎಣಿಕೆ ನಡೆಸಲಾಗುತ್ತದೆ. ನಂತರ ಇವಿಎಂ ಮತಗಳ ಜೊತೆ ತಾಳೆ ಮಾಡಲಾಗುತ್ತದೆ. ಮೊದಲು ಅಂಚೆ ಮತಗಳ ಎಣಿಕೆ ನಂತರ ಇವಿಎಂ ಮತಗಳ ಎಣಿಕೆ ನಡೆಸಲಾಗುತ್ತಿದ್ದು, ಇದಾದ ನಂತರ ವಿವಿ ಪ್ಯಾಟ್ ಮತಗಳನ್ನು ಇವಿಎಂ ಮತಗಳೊಂದಿಗೆ ತಾಳೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕವೇ ಅಧಿಕೃತ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿವರಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯ ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಅವಶ್ಯಕವಿರುವ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೇ 21ಕ್ಕೆ ಇಬ್ಬರು ವೀಕ್ಷಕರು ಸಹ ಜಿಲ್ಲೆಗೆ ಆಗಮಿಸಲಿದ್ದು, ಅವರ ಸಮಕ್ಷಮ ಮತ ಎಣಿಕೆಗೆ ಸಂಬಂಧಿತ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಪ್ರತಿ ದಿನ ಮತ ಎಣಿಕೆಗೆ ಸಂಬಂಧಪಟ್ಟಂತೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ನಿರಂತರ ಪರಿಶೀಲಿಸಿ, ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ. ಭದ್ರತಾ ಕೊಠಡಿಗಳಿಗೆ ಸಂಬಂಧಪಟ್ಟಂತೆ ಸಿಸಿ ಟಿವಿಗಳ ಮೂಲಕ ನಿರಂತರ ದಾಖಲೀಕರಣ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಆಯಾ ರಾಜಕೀಯ ಪಕ್ಷಗಳು ತಕ್ಷಣ ಮತ ಎಣಿಕೆ ಏಜೆಂಟ್‌ಗಳನ್ನು ನೇಮಿಸಿಕೊಳ್ಳುವಂತೆ ತಿಳಿಸಿದ ಅವರು, ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 14 ಟೇಬಲ್ಗಳಲ್ಲಿ ಮತ ಎಣಿಕೆ ಏಜೆಂಟ್‌ಗಳನ್ನು ನೇಮಿಸಿಕೊಳ್ಳಬೇಕು. ಈ ಎಲ್ಲ ಏಜೆಂಟ್‌ಗಳಿಗೆ ಮತ ಎಣಿಕೆ ದಿನದಂದು ಸೈನಿಕ ಶಾಲೆಯ ಎರಡನೇ ಗೇಟ್ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿ ಹಾಗೂ ನಿಯೋಜಿತ ಚುನಾವನಾ ಏಜೆಂಟ್‌ಗಳಿಗೆ ಮುಖ್ಯ ಗೇಟ್ ಮೂಲಕ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ ಅವರು, ಒಟ್ಟಾರೆ ಮತ ಎಣಿಕೆ ಸಂದರ್ಭದಲ್ಲಿ ಪ್ರತಿಯೊಂದು ವಿಷಯವನ್ನು ವೀಕ್ಷಕರ ಗಮನಕ್ಕೆ ತಂದು ಶಿಸ್ತುಬದ್ಧವಾಗಿ ಫಲಿತಾಂಶ ಪ್ರಕಟಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಎಎಸ್ಪಿ ನೇಮೇಗೌಡ, ಶಾಸಕ ಅರುಣ ಶಹಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಕಾಂಗ್ರೆಸ್‌ನ ಇರ್ಫಾನ್ ಶೇಖ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.