Advertisement

ದೇಶದಲ್ಲೇ ಜೀವಂತಿಕೆ ಉಳಿಸಿಕೊಂಡ ಕನ್ನಡ ರಂಗಭೂಮಿ

05:27 PM Sep 14, 2019 | Naveen |

ವಿಜಯಪುರ: ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಜೀವಂತಿಕೆ ಉಳಿಸಿಕೊಂಡಿರುವ ಕ್ರಿಯಾಶೀಲತೆ ಮೈಗೂಡಿಸಿಕೊಂಡಿರುವ ಏಕೈಕ ರಂಗ ಎಂದರೆ ಕನ್ನಡ ರಂಗಭೂಮಿ ಮಾತ್ರ ಎಂದು ಖ್ಯಾತ ರಂಗ ವಿಮರ್ಶಕ ರಾಮಕೃಷ್ಣ ಮರಾಠೆ ಆಭಿಪ್ರಾಯಪಟ್ಟರು.

Advertisement

ಶುಕ್ರವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಿ| ಎಂ.ಎಂ. ಕಲಬುರ್ಗಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ನೆಲದ ರಂಗಭೂಮಿ ಸದಾ ಕ್ರಿಯಾಶೀಲತೆ ಪಡೆದುಕೊಂಡಿದೆ. ಪ್ರೇಕ್ಷಕರ ಜೊತೆ, ಸಮಾಜದ ಜೊತೆ, ಚಿಂತಕರ ಜೊತೆ ಕನ್ನಡ ರಂಗಭೂಮಿ ಮುಖಾಮುಖೀಯಾಗುತ್ತ ಬಂದಿದೆ. ಜಾನಪದ ರಂಗಭೂಮಿಯಲ್ಲಿ ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಹವ್ಯಾಸಿ, ಕಂಪನಿ ನಾಟಕ ಹೀಗೆ ನೂರಾರು ವೈವಿಧ್ಯತೆಗಳಿವೆ ಎಂದರು.

ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ಶ್ರೇಷ್ಠತೆಗಾಗಿ ನಡೆದಿರುವ ವೈರುಧ್ಯಗಳೂ ಇವೆ. ಪುಸ್ತಕ ರೂಪದಲ್ಲಿರುವುದು ನಾಟಕವೋ ಅಥವಾ ಪ್ರದರ್ಶನ ನಾಟಕವೋ ಎಂಬ ಕುರಿತು ಆರೋಗ್ಯಕರ ಚರ್ಚೆ ಕನ್ನಡ ರಂಗಭೂಮಿ ನೆಲದಲ್ಲಿ ನಡೆಯುತ್ತದೆ. ಆದರೆ ಈ ರೀತಿ ಚಿಂತನೆಗಳು ಮರಾಠಿ ನೆಲದಲ್ಲಿ ನಡೆಯುವುದಿಲ್ಲ. ಕಲೆ ಎಂಬುದು ಹೇಗರಿಬೇಕು, ಕಲೆ ಸ್ವರೂಪ ಹೇಗಿರಬೇಕು, ಕಲೆಯನ್ನು ಯಾವ ರೀತಿ ಉಳಿಸಬೇಕು ಎಂಬ ತಾತ್ವಿಕ ಚರ್ಚೆಗಳು ಕನ್ನಡ ನೆಲದಲ್ಲಿ ಮಾತ್ರ ನಡೆಯುತ್ತಿವೆ ಎಂದರು.

ಡಾ| ಕಲಬುರ್ಗಿ ಅವರು ಅನುಸಂಧಾನಕ್ಕೆ ಇಳಿದರೆ ಆ ವಿಷಯದ ತಳಮಟ್ಟಕ್ಕೆ ಹೋಗಿ ಅದನ್ನು ಸಂಶೋಸುವ ಮಹಾನ್‌ ಸಂಶೋಧಕರಾಗಿದ್ದರು. ಅಭಿನಯದ ಪಠ್ಯವೇ ಶ್ರೇಷ್ಠ ಎಂಬುದು ಅವರ ಅಭಿಪ್ರಾಯವಾಗಿತ್ತು. ನಾಟಕ ನಾಟಕಕಾರನ ಕೃತಿಯಲ್ಲ, ನಾಟಕಕಾರ ನೀಡಿರುವ ಕಚ್ಚಾ ಕೃತಿಯನ್ನು ರಂಗ ಸಜ್ಜಿಕೆಯಲ್ಲಿ ಅರಳಿಸುವವ ರಂಗ ನಿರ್ದೇಶಕ ಎಂಬುದು ಪ್ರತಿಪಾದನೆಯಾಗಿತ್ತು. ಸಾತ್ವಿಕ ಅಭಿನಯ ನಟನ ಶ್ರೇಷ್ಠ ಸಾಮರ್ಥ್ಯ ಎಂಬುದು ಕಲಬುರ್ಗಿ ಅರಿತಿದ್ದರು ಎಂದರು.

Advertisement

ಕಲಬುರ್ಗಿ ಅವರ ಪ್ರಥಮ ನಾಟಕ ಕೆಟ್ಟಿತ್ತು ಕಲ್ಯಾಣ ನಾಟಕದ ಮೂಲಕ ಶೂನ್ಯ ಪೀಠಾಪತಿ ಅಲ್ಲಮ ಪ್ರಭುಗಳನ್ನು ಜಾತಿ ವ್ಯವಸ್ಥೆಯ ಸಮಾಜ ಸಹಿಸಿಕೊಳ್ಳದ ಕರಾಳ ಮುಖವನ್ನು ಚಿತ್ರಿಸಿದ್ದಾರೆ ಎಂದ ಮರಾಠೆ, ವಿದ್ವತ್ತಿನ ಚರ್ಚೆಗೆ ವಿದ್ವತ್ತಿನ ಚರ್ಚೆಯೇ ಇರಬೇಕು ಹೊರತು ಅದಕ್ಕೆ ಪ್ರತ್ಯುತ್ತವಾಗಿ ಗುಂಡು, ಖಡ್ಗ ಇರಬಾರದು. ಸಂಶೋಧಕನ ಚರ್ಚೆಗೆ ಗುಂಡು ಉತ್ತರವಾಗಬಾರದು ಎಂದು ವೈಚಾರಿಕ ಹತ್ಯೆತನ್ನು ಖಂಡಿಸಿದರು.

ಖ್ಯಾತ ಸಂಶೋಧಕ ಡಾ| ಕೃಷ್ಣ ಕೊಲಾØರ ಕುಲಕರ್ಣಿ ಮಾತನಾಡಿ, ಎಂ.ಎಂ. ಕಲಬುರ್ಗಿ ಆವರು ತಲೆತಿರುಕನೊಬ್ಬನ ಗುಂಡಿಗೆ ಬಲಿಯಾಗಿದ್ದರಿಂದ ವೈಚಾರಿಕ ಶೂನ್ಯ ಆವರಿಸಿದೆ. ಇಡಿ ವೈಚಾರಿಕ ಕ್ಷೇತ್ರವೇ ಅವರ ಅಗಲಿಕೆಗೆ ಮರುಕಪಟ್ಟಿತ್ತು. ಒಬ್ಬ ಚಿಂತಕನನ್ನು ಹಂತಕ ಗುಂಡು ಹೊಡೆದು ಹತ್ಯೆ ಮಾಡಿದಾಕ್ಷಣ ವ್ಯಕ್ತಿಯ ಚಿಂತನೆಗಳು ಸಾಯುವುದಿಲ್ಲ ಎಂದರು.

ಇದಕ್ಕಾಗಿಯೇ ಡಾ| ಕಲಬುರ್ಗಿ ಅವರ ವಿಚಾರಗಳನ್ನು ಜೀವಂತವಾಗಿಡಲು ಕಲಬುರ್ಗಿಯವರ ಸಮಗ್ರ ಸಾಹಿತ್ಯ ಪ್ರಕಟಿಸಲು ಸರ್ಕಾರ ಮುಂದಾಯಿತು. ಡಾ| ಫ.ಗು. ಹಳಕಟ್ಟಿ ಅವರ ಸಮಗ್ರ ಸಾಹಿತ್ಯ, ಆದಿಲ್ಷಾಹಿ ಕಾಲದ ಸಾಹಿತ್ಯ ಹೊರ ತಂದು ಸಂಶೋಧನಾ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸುತ್ತಿರುವ ಡಾ| ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಡಾ| ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಹೊರತರುವ ಮಹತ್ತರವಾದ ಜವಾಬ್ದಾರಿ ವಹಿಸಿದೆ ಎಂದರು.

ರಂಗ ದಾಖಲಾತಿ ಸಂಗ್ರಹಕಾರ ಡಾ| ಎ.ಎಸ್‌. ಕೃಷ್ಣಮೂರ್ತಿ, ಖ್ಯಾತ ರಂಗ ವಿಮರ್ಶಕ ರಾಮಕೃಷ್ಣ ಮರಾಠೆ, ಬಿಎಲ್ಡಿಇ ವೈದ್ಯಕೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ಎಂ.ಎಸ್‌. ಬಿರಾದಾರ, ಡಾ| ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ.ಎಸ್‌. ಮದಭಾವಿ, ರಂಗ ನಿರ್ದೇಶಕರಾದ ಸಂಗಮೇಶ ಬಾದಾಮಿ, ಶಿವಾನಂದ ಇಂಗಳೇಶ್ವರ, ಯೋಗೆಂದ್ರಸಿಂಗ್‌ ಮುಖ್ಯ ಅತಿಥಿಯಾಗಿದ್ದರು.

ಮಾಜಿ ಶಾಸಕ ಆರ್‌.ಆರ್‌. ಕಲ್ಲೂರ, ಎನ್‌.ಎಸ್‌. ಖೇಡ, ಈಶ್ವರಚಂದ್ರ ಚಿಂತಾಮಣಿ, ರಂಗನಾಥ ಅಕ್ಕಲಕೋಟ, ಮ.ಗು. ಯಾದವಾಡ, ವಿ.ಸಿ. ನಾಗಠಾಣ, ಡಾ| ಮಲ್ಲಿಕಾರ್ಜುನ ಮೇತ್ರಿ ದ್ದರು.

Advertisement

Udayavani is now on Telegram. Click here to join our channel and stay updated with the latest news.

Next