Advertisement

ಜೋರಾಗಿದೆ ಸೋಲು-ಗೆಲುವಿನ ಲೆಕ್ಕಾಚಾರ

10:31 AM May 09, 2019 | Team Udayavani |

ವಿಜಯಪುರ: ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಸಾಮಾಜಿಕ ಕ್ರಾಂತಿ ಪುರುಷ ಬಸವೇಶ್ವವರರ ಜನ್ಮಭೂಮಿ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಬಳಿಕ ಮತದಾರ ಯಾರಿಗೆ ಒಲಿದಿದ್ದಾನೆ ಎಂಬ ಲೆಕ್ಕಾಚಾರ ಜೋರಾಗಿದೆ. ಬಿಜೆಪಿ ಹಾಗೂ ಮಿತ್ರ ಪಕ್ಷಗಳ ನಾಯಕರು ಮತದಾರ ತಮ್ಮ ಪರವಾಗಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Advertisement

ಈ ಲೋಕಸಭೆ ಚುನಾವಣೆಯಲ್ಲಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 2,04,850 ಮತದಾರರಿದ್ದು, 1,35,252 ಮತದಾನ ಮಾಡಿದ್ದಾರೆ. ಇದರಿಂದ ಶೇ. 66.02 ಮತದಾನವಾಗಿದ್ದು ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ. 64.01 ಮತದಾನವಾಗಿದ್ದು, ಹಿಂದಿನ ಮತದಾನಕ್ಕೆ ಹೋಲಿಸಿದರೆ ಶೇ. 2 ಮತದಾನ ಹೆಚ್ಚಳವಾಗಿದೆ. ಇದು ಯಾರಿಗೆ ವರವಾಗಲಿದೆ, ಯಾರಿಗೆ ವ್ಯತಿರಿಕ್ತ ಫ‌ಲಿತಾಂಶಕ್ಕೆ ಕಾರಣವಾಗಲಿದೆ ಎಂಬುದು ಚರ್ಚೆ ವಿಷಯವಾಗಿದೆ.

ಸತತ ಎರಡು ಬಾರಿ ಸಂಸದರಾಗಿ, ಕೆಲವು ವರ್ಷಗಳಿಂದ ಕೇಂದ್ರದಲ್ಲಿ ಸಚಿವರಾಗಿರುವ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ಎಲ್ಲೆಡೆ ಮೂಡಿರುವ ಚುನಾವಣೆ ಬಳಿಕ ಮುಖ ತೋರಿಸದ ನಾಯಕ ಎಂಬ ಅಪವಾದ ಈ ಕ್ಷೇತ್ರಲ್ಲೂ ಇದ್ದೇ ಇದೆ. ಆದರೆ ಈ ತಾಲೂಕಿನಲ್ಲಿ ಹೊಸಪೇಟೆ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರ್ಮಾಣ, ಕಳೆದ ವರ್ಷ ಮನಗೂಳಿ, ಮುತ್ತಗಿ ಬಳಿ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಮಾಡಿದ್ದಾರೆ. ಸಂಸದರ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇತರೆ ಸಂಸದರಂತೆ ಅನುದಾನ ಹಿಂದಕ್ಕೆ ಹೋಗದಂತೆ ನೋಡಿಕೊಂಡಿದ್ದಾರೆ ಎಂಬ ಸಹಮತ ಕೇಳಿ ಬರುತ್ತಿದೆ.

ಪ್ರಸಕ್ತ ಸಂದರ್ಭದಲ್ಲಿ ಮಾಡಿರುವ ಕೆಲಸಕ್ಕೆ ಗ್ರಾಪಂ ಸದಸ್ಯರು ಕೂಡ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ತಮ್ಮ ಹೆಸರು ಹಾಕಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಆದರೆ ಸಂಸದರಾಗಿ, ಕೇಂದ್ರ ಸಚಿವರಾದರೂ ರಮೇಶ ಜಿಗಜಿಣಗಿ ಅವರು ತಾವು ಮಾಡಿರುವ ಯಾವ ಕೆಲಸವನ್ನೂ ತಮ್ಮಿಂದಲೇ ಆಗಿದ್ದೆಂದು ಹೇಳಿಕೊಳ್ಳುವ ಜಾಯಮಾನ ಹೊಂದಿಲ್ಲ. ಆದರೆ ಜಿಗಜಿಣಗಿ ಅವರು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ಸ್ಪಷ್ಟವಾಗಿ ತಿಳಿದಿರುವ ಕಾರಣ ಕ್ಷೇತ್ರದಲ್ಲಿ ಬೆಂಬಲ ದೊರಕಿದೆ ಎಂಬ ಮಾತಿದೆ.

ಮತ್ತೂಂದೆಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೇರಿದ್ದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಮರಳಿ ಪಕ್ಷಕ್ಕೆ ಬಂದಿರುವುದು ಕೂಡ ಪೂರಕ ಕೆಲಸ ಮಾಡಿದೆ. ಯುವ ಮತದಾರರು ಮೋದಿ ಪರವಾಗಿದ್ದು, ಈ ಬಾರಿ ಶೇ. 2ಮತದಾನ ಹೆಚ್ಚಳವಾಗಿರುವುದು ಬಿಜೆಪಿಗೆ ಅನುಕೂಲವಾಗಿದೆ. ಮೋದಿ ಪರ ಅಲೆಯೂ ಸೇರಿ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿ ಅವರು 20 ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆ ಪಡೆಯಲಿದ್ದಾರೆ ಎಂದು ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

Advertisement

ಮತ್ತೂಂದೆಡೆ ಎದುರಾಳಿ ಕಾಂಗ್ರೆಸ್‌ ಬೆಂಬಲಿ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ ಅವರಿಗೆ ಈ ಕ್ಷೇತ್ರದಲ್ಲಿ ಮಿತ್ರ ಪಕ್ಷಗಳ ನಾಯಕರು ಒಗ್ಗೂಡಿ ಕೆಲಸ ಮಾಡಿಲ್ಲ. ಮೇಲ್ಮಟ್ಟದಲ್ಲಿ ನಾಯಕರು ಒಂದಾಗಿದ್ದರೂ ಈ ಕ್ಷೇತ್ರದಲ್ಲಿರುವ ನಾಯಕರಾದ ಸಚಿವ ಶಿವಾನಂದ ಪಾಟೀಲ ಹಾಗೂ ಜೆಡಿಎಸ್‌ ನಾಯಕ ಅಪ್ಪುಗೌಡ ಪಾಟೀಲ ಕಟ್ಟಾ ರಾಜಕೀಯ ವೈರಿಗಳು. ಜಿದ್ದಾ ಜಿದ್ದಿನ ರಾಜಕೀಯಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ ಒಂದೊಮ್ಮೆ ಕಾರ್ಯಕರ್ತರು ಒಂದಾದರೂ ನಾಯಕರು ಮಾತ್ರ ಎಂದಿಗೂ ಒಂದಾಗುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಈ ಇಬ್ಬರು ನಾಯಕರು ಎಲ್ಲೂ ಒಂದಾಗಿ ಕೆಲಸ ಮಾಡಿಲ್ಲ.

ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲ ಹಾಗೂ ಅವರು ರಾಜಕೀಯ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ ಅಪ್ಪುಗೌಡ ಪಾಟೀಲ ಮನಗೂಳಿ ಅವರು ಎಲ್ಲಿಯೂ ಒಂದೇ ವೇದಿಕೆ ಹಂಚಿಕೊಂಡು ಒಗ್ಗೂಡಿ ಪ್ರಚಾರ ಕೆಲಸ ಮಾಡಿಲ್ಲ. ಇದು ಸಹಜವಾಗಿ ಮತದಾರರ ಮೇಲೆ ಪರಿಣಾಮ ಬೀರಿದೆ ಎಂಬುದು ಲೆಕ್ಕಾಚಾರ.

ಈ ಇಬ್ಬರು ನಾಯಕರು ಒಂದಾಗಿ ಪ್ರಚಾರ ಮಾಡದೇ ಪ್ರತ್ಯೇಕ ಪ್ರಚಾರಕ್ಕೆ ತೆರಳಿದ್ದರಿಂದ ಇದು ಮಿತ್ರ ಪಕ್ಷಗಳಿಗೆ ನಕರಾತ್ಮಕ ಸ್ಥಿತಿ ನಿರ್ಮಿಸಿದೆ. ಅಧಿಕಾರದಲ್ಲಿರುವ ಶಿವಾನಂದ ಪಾಟೀಲ ಅವರ ಬೆಂಬಲಿಗರ ಪ್ರಕಾರ ತಾಲೂಕಿನ ಜಿಪಂ ಕಾಂಗ್ರೆಸ್‌ ಸದಸ್ಯರಿರುವ ಮಸೂತಿ, ಗೊಳಸಂಗಿ, ಉಕ್ಕಲಿ, ನಿಡಗುಂಡಿ ಪಪಂನಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬಲ ಬಂದಿದೆ.

ಜೆಡಿಎಸ್‌ ನಾಯಕರ ಪ್ರಕಾರ ಮನಗೂಳಿ ಪಪಂ ಅಪ್ಪುಗೌಡ ಪಾಟೀಲ ಮನಗೂಳಿ ಅವರ ಹಿಡಿತದಲ್ಲಿದೆ. ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ಸಹಜವಾಗಿ ಮನಗೂಳಿ ಗೌಡರ ಬೆಂಬಲಿತ ಮತದಾರ ಜೆಡಿಎಸ್‌ ಪಕ್ಷಕ್ಕೆ ಹೆಚ್ಚಿನ ಒಲವು ತೋರಿದ ಕಾರಣ ಸುನೀತಾ ಚವ್ಹಾಣ ಅವರಿಗೆ ಪೂರಕವಾಗಿ ಕೆಲಸ ಮಾಡಿದೆ ಎಂಬುದು ಜೆಡಿಎಸ್‌ ನಾಯಕರ ಅಂಬೋಣ. ಕೊಲಾØರ ಭಾಗದಲ್ಲಿ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಅವರು ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದು ಸ್ಥಳೀಯ ಕಾರ್ಯಕರ್ತರಲ್ಲಿ ಸಮ್ಮತಿ ಇಲ್ಲ. ಹೀಗಾಗಿ ಬೆಳ್ಳುಬ್ಬಿ ಅವರಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದು ಜೆಡಿಎಸ್‌ ಅಭ್ಯರ್ಥಿಗೆ ನೆರವಾಗಲಿದೆ ಎಂದು ಮಿತ್ರ ಪಕ್ಷಗಳ ನಾಯಕರು ವಿಶ್ಲೇಷಿಸುತ್ತಾರೆ.

ಸಚಿವ ಶಿವಾನಂದ ಪಾಟೀಲ ಹಾಗೂ ಅಪ್ಪುಗೌಡ ಪಾಟೀಲ ಮನಗೂಳಿ ಅವರು ಪರಸ್ಪರ ಒಗ್ಗೂಡಿ ಕೆಲಸ ಮಾಡಿಲ್ಲದಿದ್ದರೂ ಪ್ರತ್ಯೇಕವಾಗಿ ಮಾಡಿರುವ ಪ್ರಚಾರ ಕೂಡ ಅವರವರ ಪ್ರಭಾವದಿಂದ ಮಿತ್ರ ಪಕ್ಷಗಳ ಜೆಡಿಎಸ್‌ ಅಭ್ಯರ್ಥಿಗೆ ನೆರವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕನಿಷ್ಠ 10 ಸಾವಿರ ಮತ ಮುನ್ನಡೆ ಪಡೆಯಲಿದ್ದಾರೆ ಎಂಬ ಲೆಕ್ಕಾಚಾರ ನಡೆದಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಒಂದಾಗಿ ಕೆಲಸ ಮಾಡದಿದ್ದರೂ ನಮ್ಮ ಕ್ಷೇತ್ರದಲ್ಲಿ ಜಿಪಂ ಕಾಂಗ್ರೆಸ್‌ ಸದಸ್ಯರಿರುವ ಕ್ಷೇತ್ರದಲ್ಲಿ ಹಾಗೂ ಜೆಡಿಎಸ್‌ ಪ್ರಭಾವ ಇರುವ ಪ್ರದೇಶದಲ್ಲಿ ಜೆಡಿಎಸ್‌ ಪಕ್ಷದ ಸುನೀತಾ ಅವರಿಗೆ ಹೆಚ್ಚಿನ ಮತಗಳು ಬಂದಿವೆ. ಹೊಂದಾಣಿಕೆಯ ಕೊರತೆ ಮಧ್ಯೆಯೂ ನಮ್ಮ ಕ್ಷೇತ್ರದಲ್ಲಿ ಸಚಿವ ಶಿವಾನಂದ ಪಾಟೀಲ ಅವರಿಂದ ಜೆಡಿಎಸ್‌ ಪಕ್ಷಕ್ಕೆ ಹೆಚ್ಚಿನ ಮತಗಳು ಬರಲಿವೆ.
ಈರಣ್ಣ ಪಟ್ಟಣಶೆಟ್ಟಿ,
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಬಸವನಬಾಗೇವಾಡಿ

ಸಂಸದರಾಗಿ ಮಾಡಿರುವ ಕೆಲಸಕ್ಕೆ ಪ್ರಚಾರ ಪಡೆಯದ ಕಾರಣ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿ ಅವರ ಕುರಿತು ಮತದಾರರಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಇದಲ್ಲದೇ ಮೋದಿ ಅಲೆ, ಯುವ ಮತದಾರರ ಒಲವು ಶೇ. 2ಮತದಾನ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಸಹಜವಾಗಿ ಬಿಜೆಪಿ ಹಾಗೂ ಜಿಗಜಿಣಗಿ ಅವರಿಗೆ ಗೆಲುವಿನ ಮುನ್ನಡೆ ಕಾಯ್ದುಕೊಳ್ಳಲು ಸಹಕಾರಿ ಆಗಲಿದೆ.
ಜಗದೀಶ ಕೊಟ್ರಶೆಟ್ಟಿ,
ತಾಲೂಕ ಸಂಚಾಲಕರು ಬಿಜೆಪಿ ಪ್ರಚಾರ ಸಮಿತಿ, ಬಸವನಬಾಗೇವಾಡಿ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next