Advertisement

ಹೆಚ್ಚಿನ ಮತ ನಿರೀಕ್ಷೆಯಲ್ಲಿ ಸ್ಪರ್ಧಾಳುಗಳು

10:36 AM May 07, 2019 | Naveen |

ವಿಜಯಪುರ: ಕೃಷ್ಣೆಯ ಉಪ ನದಿ ಭೀಮೆ ಮಡಿಲಲ್ಲಿರುವ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಹಲವು ಲೋಕಸಭೆ ಚುನಾವಣೆಯನ್ನು ಗಮನಿಸಿದರೆ ನಿರಂತರ ಬಿಜೆಪಿ ಬೆಂಬಲಿಸಿದೆ. ಆದರೆ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ಬಲದಾವಣೆ ಅಗಿದೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಶಾಸಕರಿಲ್ಲ, ಬದಲಾಗಿ ಜೆಡಿಎಸ್‌ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಪ್ರತಿನಿಧಿಸುತ್ತಿರುವ ಕಾರಣ ಈ ಬಾರಿ ಬಿಜೆಪಿ ಮಣಿಸುವ ವಿಶ್ವಾಸ ಮಿತ್ರ ಪಕ್ಷಗಳಲ್ಲಿ ಮನೆ ಮಾಡಿದೆ.

Advertisement

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ 2,27,114 ಮತದಾರರಿದ್ದು, 1,35,874 ಮತದಾರರು ಮತದಾನ ಮಾಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 59.39 ಮತದಾನ ಪ್ರಮಾಣ ಈ ಬಾರಿ ಶೇ.59.83 ಆಗಿದ್ದು ಶೇ.0.44 ಮಾತ್ರ ಹೆಚ್ಚಳವಾಗಿದೆ. ಹಿಂದಿನ ಚುನಾವಣೆಗಳನ್ನು ಅವಲೋಕಿಸಿದರೆ ಬಹುತೇಕ ಈ ಕ್ಷೇತ್ರ ಬಿಜೆಪಿ ಆಭ್ಯರ್ಥಿಗೆ ಹೆಚ್ಚಿನ ಬೆಂಬಲ ನೀಡಿದ್ದು,, ಕಳೆದ ಚುನಾವಣೆಯಲ್ಲಿ ಸುಮಾರು 24 ಸಾವಿರ ಅಧಿಕ ಮತಗಳನ್ನು ನೀಡಿದೆ.

ಹಿಂದಿನ ಎರಡು ಲೋಕಸಭೆ ಚುನಾವಣೆಗಳನ್ನು ಗಮನಿಸಿದರೆ ಸಿಂದಗಿ ಕ್ಷೇತ್ರದಲ್ಲಿ ರಮೇಶ ಭೂಸನೂರ ಬಿಜೆಪಿ ಶಾಸಕರಾಗಿದ್ದರು. ಆದರೆ ಈ ಬಾರಿ ಜೆಡಿಎಸ್‌ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಂ.ಸಿ. ಮನಗೂಳಿ ತೋಟಗಾರಿಕೆ ಖಾತೆಯೊಂದಿಗೆ ಜಿಲ್ಲೆಯ ಉಸ್ತುವಾರಿ ಹೊಂದಿದ್ದಾರೆ. ಮತ್ತೂಂದೆಡೆ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿದ್ದು, ಕಾಂಗ್ರೆಸ್‌ ಪಕ್ಷದ ಮಿತ್ರತ್ವದ ಬೆಂಬಲವೂ ಇದೆ. ತಳ ಹಂತದಲ್ಲಿ ಕಾಯಕರ್ತರು ಒಂದಾಗಿಲ್ಲ ಎಂಬ ಮಾತಿದ್ದರೂ ಮೈತ್ರಿ ಖಂಡಿತಾ ಸಕಾರಾತ್ಮಕ ಪರಿಣಾಮ ಆಗಿದೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗಿಂತ ಮಿತ್ರ ಪಕ್ಷಗಳ ಒಗ್ಗೂಡುವಿಕೆ ಸಕಾರಾತ್ಮಕ ಫ‌ಲಿತಾಂಶ ನೀಡಿದ್ದು, ಸತತ ಹೆಚ್ಚಿನ ಮತ ಪಡೆಯುತ್ತಿದ್ದ ಬಿಜೆಪಿಗೆ ಹಿನ್ನಡೆ ಆಗಲಿದೆ ಎಂಬುದು ಮೈತ್ರಿ ನಾಯಕರ ವಿಶ್ವಾಸ.

ಎರಡು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾದರೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸಿಂದಗಿ ಕ್ಷೇತ್ರಕ್ಕೆ ಹೇಳಿಕೊಳ್ಳುವಂತ ಒಂದೇ ಒಂದು ಕೆಲಸ ಮಾಡಿಲ್ಲ. 10 ವರ್ಷಗಳಲ್ಲಿ ಈ ಕ್ಷೇತ್ರ 10 ಹಳ್ಳಿಗಳಿಗೂ ಸಮಸ್ಯೆ ಆಲಿಸಲು ಬಂದಿಲ್ಲ, ಒಂದೇ ಒಂದು ಕಾಮಗಾರಿ ಅವರಿಂದ ಇಲ್ಲಿ ಉದ್ಘಾಟನೆ ಕಂಡಿಲ್ಲ. ಕಳೆದ ಬಾರಿಯೇ ಸೋಲುವ ಹಂತದಲ್ಲಿದ್ದಾಗ ಮೋದಿ ಅಲೆಯಲ್ಲಿ ತೇಲಿ ಬರಲು ಸಿಂದಗಿ ಕ್ಷೇತ್ರದ ಮತದಾರ ಪ್ರಮುಖ ಕಾರಣ. ಆದರೆ ಕೆಲಸವನ್ನೂ ಮಾಡದ ಹಾಗೂ ಮೋದಿ ಅಲೆಯೂ ಇಲ್ಲದಿರುವುದರಿಂದ ಜಿಗಜಿಣಗಿ ಅವರಿಗೆ ಸಿಂದಗಿ ಕೈ ಹಿಡಿಯುವುದು ಕಷ್ಟ ಎಂಬ ವಿಶ್ಲೇಷಣೆ ಇದೆ.

ಸಿಂದಗಿ ಕ್ಷೇತ್ರದಲ್ಲಿ ನಿರ್ದಿಷ್ಟವಾಗಿ ಜೆಡಿಎಸ್‌ನ ಸಾಂಪ್ರದಾಯಿಕ ಮತಗಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರ ವಯಕ್ತಿಕ ವರ್ಚಸ್ಸಿನಿಂದ ಈ ಕ್ಷೇತ್ರದಲ್ಲಿ ಜೆಡಿಎಸ್‌ ನೆಲೆ ಕಂಡುಕೊಂಡಿದೆ. ಹೀಗಾಗಿ ಸಚಿವ ಮನಗೂಳಿ ಅವರಿಗೂ ತಮ್ಮ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಸ್ವ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ತಂದುಕೊಡುವ ಒತ್ತಡವೂ ಇದೆ. ಒಂದೊಮ್ಮೆ ಕಡಿಮೆ ಮತಗಳು ಬಂದಲ್ಲಿ ಸಚಿವರಿಗೆ ಹೈಕಮಾಂಡ್‌ ತಲೆ ದಂಡ ನೀಡುವ ಭೀತಿಯೂ ಇದೆ. ಹೀಗಾಗಿ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಮತಗಳು ಹೆಚ್ಚಿಗೆ ಪಡೆಯುವ ನಿರೀಕ್ಷೆ ಇರಿಸಿಕೊಂಡಿದ್ದಾರೆ ಜೆಡಿಎಸ್‌ ನಾಯಕರು.

Advertisement

ಆದರೆ ಬಿಜೆಪಿ ನಾಯಕರ ಲೆಕ್ಕಾಚಾರಗಳೇ ಬೇರೆ ಇವೆ. ಪ್ರಸಕ್ತ ಚುನಾವಣೆಯಲ್ಲಿ ವ್ಯಕ್ತಿಗಿಂತ ದೇಶ ಮೊದಲು ಎಂಬ ಸಿದ್ಧಾಂತದಲ್ಲಿ ಬಿಜೆಪಿ ಸಾಂಪ್ರದಾಯಿಕ ಮತಗಳು ಮಾತ್ರವಲ್ಲ, ಮೈತ್ರಿ ಪಕ್ಷಗಳ ಸಾಮಾನ್ಯ ಕಾರ್ಯಕರ್ತ ಕೂಡ ದೇಶಕ್ಕಾಗಿ ಬಿಜೆಪಿಗೆ ಮತ ಹಾಕಿದ್ದಾನೆ. ಸಿಂದಗಿ ಮಾತ್ರವಲ್ಲ ಇಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಖ ನೋಡದೇ ಪ್ರಧಾನಿ ಮೋದಿ ಅವರಿಗೆ ಮತ್ತೂಮ್ಮೆ ಅಧಿಕಾರ ನೀಡುವುದಕ್ಕಾಗಿ ಮತದಾರ ಬಿಜೆಪಿಗೆ ಬೆಂಬಲ ನೀಡಿದ್ದಾನೆ.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕಳೆದ 10 ವರ್ಷಗಳಲ್ಲಿ ಸಿಂದಗಿ ಮಾತ್ರವಲ್ಲ ಜಿಲ್ಲೆಯ ಬಹುತೇಕ ಹಳ್ಳಿಗಳ ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ, ಬಹುತೇಕ ಎಲ್ಲ ಸಮುದಾಯದ ಜನರಿಗಾಗಿ ಸಮುದಾಯ ಭವನ ನಿರ್ಮಿಸಿದ್ದಾರೆ. ಇದಲ್ಲದೇ ಮಾಡಿರುವ ಕೆಲಸಗಳನ್ನು ಹೇಳಿಕೊಂಡಿಲ್ಲ. ಕಾಮಗಾರಿಗೆ ತಾನೇ ಅನುದಾನ ತಂದಿದ್ದು ಎಂದು ಬೋರ್ಡ್‌ ಹಾಕಿಕೊಂಡಿಲ್ಲ. ಆದರೆ ಜನರಿಗೆ ಮಾತ್ರ ಜಿಗಜಿಣಗಿ ಅವರು ಮಾಡಿರುವ ಕೆಲಸಗಳ ಕುರಿತು ಸ್ಪಷ್ಟ ಅರಿವಿದ್ದು, ಸಿಂದಗಿ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಸಂಪ್ರದಾಯ ಮುಂದುವರಿಯಲಿದೆ ಎಂಬ ವಿಶ್ವಾಸ ಇರಿಸಿಕೊಂಡಿದ್ದಾರೆ.

ಇದಲ್ಲದೇ ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರ ಮಟ್ಟದಲ್ಲಿ ಮೈತ್ರಿ ಏರ್ಪಟ್ಟಿದ್ದರೂ ಪರಸ್ಪರ ಎಲ್ಲ ಚುನಾವಣೆಗಳಲ್ಲಿ ಕಿತ್ತಾಡಿಕೊಂಡು, ಬಡಿದಾಡಿಕೊಂಡಿರುವ ಉಭಯ ಪಕ್ಷಗಳ ಕಾರ್ಯಕರ್ತರು ತಳ ಮಟ್ಟದಲ್ಲಿ ಒಂದಾಗಿ ಕೆಲಸ ಮಾಡಿಲ್ಲ. ಇದಲ್ಲದೇ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಾನಸಿಕವಾಗಿ ಒಂದಾಗಿ ಕೆಲಸ ಮಾಡಿಲ್ಲ. ಮಿತ್ರರ ಈ ಆಂತರಿಕ ಬೇಗುದಿ ಬಿಜೆಪಿಗೆ ಬಲ ತಂದುಕೊಡುವಲ್ಲಿ ಹೆಚ್ಚಿನ ಕೆಲಸ ಮಾಡಿದೆ ಎಂಬ ಅಂದಾಜು ಮಾಡುತ್ತಿದೆ ಕೇಸರಿ ಪಡೆ.

ಸಂಸದರಾಗಿ ರಮೇಶ ಜಿಗಜಿಣಗಿ ಅವರು ಏನು ಮಾಡಿದ್ದಾರೆ ಎಂಬುದಕ್ಕಿಂತ ದೇಶಕ್ಕಾಗಿ ಮೋದಿ ಅವರನ್ನು ಬೆಂಬಲಿಸಲು ಸಿಂದಗಿ ವಿಧಾನಸಭೆ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ದೇಶದೆಲ್ಲಡೆ ಇರುವಂತೆ ಪ್ರಧಾನಿ ಮೋದಿ ಆಲೆ ಮಾತ್ರವಲ್ಲ ಪಕ್ಷದ ಸಾಂಪ್ರದಾಯಿಕ ಮತಗಳ ಮತದಾರ, ಹೊಸ ಮತದಾರರು, ಹೊಂದಾಣಿಕೆ ಒಪ್ಪದ ಮೈತ್ರಿ ಪಕ್ಷಗಳ ಸಾಂಪ್ರದಾಯಿಕ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಇದರಿಂದಾಗಿ ಬಿಜೆಪಿಗೆ ಈ ಬಾರಿಯೂ 20 ಸಾವಿರಕ್ಕೂ ಅಧಿಕ ಮತ ದಕ್ಕಲಿವೆ.
•ಈರಣ್ಣ ರಾವೂರ, ಪ್ರಧಾನ ಕಾರ್ಯದರ್ಶಿ
ಬಿಜೆಪಿ ಮಂಡಲ, ಸಿಂದಗಿ

ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ವರ್ಚಸ್ಸೇನೂ ಇಲ್ಲ. ಪಕ್ಷಕ್ಕೆ ನಿರ್ದಿಷ್ಟ ಸಾಂಪ್ರದಾಯಿಕ ಮತಗಳೂ ಇಲ್ಲ. ಆದರೆ ಸಚಿವ ಎಂ.ಸಿ. ಮನಗೂಳಿ ಹಾಗೂ ನಾಯಕರ ವರ್ಚಸ್ಸಿನಿಂದಾಗಿ ಕ್ಷೇತ್ರದಲ್ಲಿ ಸುನೀತಾ ಚವ್ಹಾಣ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್‌ ಮೈತ್ರಿ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂಬುದು ಮತ ಎಣಿಕೆ ನಂತರ ಬಹಿರಂಗವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿಗಜಿಣಗಿ ಅವರು 10 ವರ್ಷಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದೇ ಪ್ರಬಲ ಸಮುದಾಯಗಳ ನಾಯಕರನ್ನು ತುಳಿಯುವ ಹುನ್ನಾರ ಮಾಡಿದ ಫ‌ಲವನ್ನು ಪಡೆದಿದ್ದಾರೆ.
•ಕುಮಾರ ದೇಸಾಯಿ,
ತಾಲೂಕು ಉಪಾಧ್ಯಕ್ಷರು, ಜೆಡಿಎಸ್‌, ಸಿಂದಗಿ.

ಮೈತ್ರಿ ಪಕ್ಷಗಳ ನಾಯಕರು, ಕಾರ್ಯಕರ್ತರು ಯಾರೂ ಮುನಿಸಿಕೊಳ್ಳದೇ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಹೈಕಮಾಂಡ್‌ ಸೂಚನೆಯಂತೆ ಜೆಡಿಎಸ್‌ ಮೈತ್ರಿಯನ್ನು ಒಪ್ಪಿಕೊಂಡು ಸಕ್ರೀಯರಾಗಿ ಒಗ್ಗಟ್ಟಿನಿಂದ ದುಡಿದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಎರಡು ಬಾರಿ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾದರೂ ಜಿಗಜಿಣಗಿ ಅವರು ನಮ್ಮ ಭಾಗಕ್ಕೆ ಯಾವ ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಅವರನ್ನು ಸೋಲಿಸಲು ಕ್ಷೇತ್ರದ ಜನರೇ ನಿರ್ಧರಿಸಿರುವುದು ನಮಗೆ ಹೆಚ್ಚಿನ ಬಲ ತಂದುಕೊಟ್ಟಿದ್ದು, 10 ಸಾವಿರ ಮತಗಳ ಅಂತರ ನಮಗೆ ದೊರೆಯಲಿದೆ.
ವಿಠ್ಠಲ ಕೊಳ್ಳೂರ,
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌, ಸಿಂದಗಿ

•ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next