Advertisement
ಈ ಹಿಂದಿನ ವಿಧಾನಸಭೆಯ ಮೂರ್ನಾಲ್ಕು ಚುನಾವಣೆಗಳನ್ನು ಗಮನಿಸಿದರೆ ಹಿಂದಿನ ದೇವರಹಿಪ್ಪರಗಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಬಿ.ಎಸ್. ಪಾಟೀಲ ಸಾಸನೂರು ಈ ಕ್ಷೇತ್ರದಲ್ಲಿ ಭದ್ರ ನೆಲೆಯೂರಿ ಸಚಿವರಾಗಿದ್ದರು. ಸತತ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಸೇರಿ ಮುದ್ದೇಬಿಹಾಳ ಹಾಲಿ ಶಾಸಕರಾಗಿದ್ದಾರೆ. ಇಂಥ ಕಾಂಗ್ರೆಸ್ ಭದ್ರಕೋಟೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್.ಪಾಟೀಲ ಸಾಸನೂರ ಅವರ ಪುತ್ರ ಸೋಮನಗೌಡ ಪಾಟೀಲ ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದಾರೆ.
Related Articles
Advertisement
ವಿರೋಧಿಗಳು ಏನೇ ಸುಳ್ಳು ಹೇಳಿದರೂ ಸಾಮಾನ್ಯ ಮತದಾರನಿಗೆ ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯವ್ಯಾಪ್ತಿ ಕನಿಷ್ಠ ಜ್ಞಾನ ಸ್ಪಷ್ಟವಾಗಿದೆ. ಕಾರಣ ಕೇಂದ್ರದ ಮೋದಿ ಸರ್ಕಾರದ ಹಲವು ಕ್ರಾಂತಿಕಾರಕ ಕಾರ್ಯಕ್ರಮಗಳಿಂದಾಗಿ ನಮ್ಮ ಭಾಗದ ಮತದಾರ ಕೂಡ ಘರ್ ಘರ್ ಮೋದಿ, ಫಿರ್ ಭೀ ಮೋದಿ ಎನ್ನುವ ಘೋಷಣೆಗೆ ಧ್ವನಿಯಾಗಿದ್ದಾನೆ ಎಂದು ಬಿಜೆಪಿ ನಾಯಕರು ವಿಶ್ಲೇಷಣೆ ಮಾಡುತ್ತಾರೆ.
ಆದರೆ ಕಾಂಗ್ರೆಸ್-ಜೆಡಿಎಸ್ ಮಿತ್ರ ಪಕ್ಷಗಳ ನಾಯಕರು ಮಾತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಇತಿಹಾಸವನ್ನು ದೇವರಹಿಪ್ಪರಗಿ ಕ್ಷೇತ್ರದಲ್ಲಿ ಬಿಟ್ಟು ಕೊಡುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಕೆಲವೇ ತೀವ್ರ ಪೈಪೋಟಿ ನೀಡಿದ್ದೇವೆ. ಅಲ್ಪಸಂಖ್ಯಾತರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಹಜವಾಗಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್‌ಗೆ ಹೆಚ್ಚಿನ ಮತಗಳು ಬರಲಿವೆ. ಅಲ್ಲದೇ ದೇವರಹಿಪ್ಪರಗಿ ಹಾಗೂ ಹೂವಿನಹಿಪ್ಪರಗಿ ಬ್ಲಾಕ್‌ಗಳಲ್ಲಿ ಕಾಂಗ್ರೆಸ್ ಸಮರ್ಥ ಹೋರಾಟ ನೀಡಿದೆ. ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಉಭಯ ಪಕ್ಷಗಳ ನಾಯಕರ ಸಮನ್ವಯದ ಪ್ರಚಾರ ಕಾರ್ಯ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇರಿಸಿಕೊಂಡಿದ್ದಾರೆ.
ಇದಲ್ಲದೇ ಎರಡು ಅವಧಿಗೆ ಸಂಸದರಾಗಿ, ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರೂ ರಮೇಶ ಜಿಗಜಿಣಗಿ ಅವರು ಕನಿಷ್ಠ ಕುಡಿಯುವ ನೀರಿನ ಇಲಾಖೆ ಹೊಂದಿದ್ದರೂ ನೀರಿನ ಸಮಸ್ಯೆ ನೀಗಿಸಲು ಯಾವುದೇ ಯೋಜನೆ ರೂಪಿಸುವಲ್ಲಿ ವಿಫಲವಾಗಿದ್ದಾರೆ. ಅಧಿಕಾರ ದಲ್ಲಿದ್ದಾಗ ಏನನ್ನೂ ಮಾಡದ ಜಿಗಜಿಣಗಿ ಅವರು ಚುನಾವಣೆಯಲ್ಲಿ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುವ ಮೂಲಕ ತಮ್ಮ ವ್ಯೆಫಲ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ದೇವರಹಿಪ್ಪರಗಿ ಕ್ಷೇತ್ರದ ಮತದಾರ ಅಭಿವೃದ್ಧಿ ಹೀನ ಬಿಜೆಪಿಯನ್ನು ಬೆಂಬಲಿಸಲಾರ ಎಂಬ ಅದಮ್ಯ ವಿಶ್ವಾಸ ಮಿತ್ರ ಪಕ್ಷಗಳ ನಾಯಕರಿಗೆ ಇದೆ.
ಹೀಗಾಗಿ ಕಾಂಗ್ರೆಸ್ ಭದ್ರಕೋಟೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಿರುವ ಇಲ್ಲಿನ ಮತದಾರ, ಈ ಲೋಕಸಭೆ ಚುನಾವಣೆಯಲ್ಲೂ ಕೇಸರಿ ಪಾಳೆಯಕ್ಕೆ ಒಲಿದಿದ್ದಾನೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ದೇವರಹಿಪ್ಪರಗಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲೋ ವ್ಯತ್ಯಾಸವಾಗಿ ಸೋತಿದ್ದೇವೆ. ಆದರೆ ಈ ಲೋಕಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿದ್ದು, ಮಿತ್ರ ಪಕ್ಷಗಳ ಅಭ್ಯರ್ಥಿಗೆ ಹೆಚ್ಚಿನ ಮತಗಳ ಅಂತರ ದೊರೆಯಲಿದೆ. ಮೋದಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳದ ಕಾರಣ ಆಡಳಿತ ವಿರೋಧಿ ಅಲೆ ಇದ್ದು, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗೆ ಈ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಮತಗಳ ಅಂತರ ದೊರೆಯುವ ವಿಶ್ವಾಸವಿದೆ.•ನಿಂಗನಗೌಡ ಪಾಟೀಲ,
ಅಧ್ಯಕ್ಷರು, ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿ ಸರಳ, ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದು, ಅಧಿಕಾರದ ದುರ್ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಹಲವು ಕ್ರಾಂತಿಕಾರಕ ಯೋಜನೆಗಳನ್ನು ರೂಪಿಸಿದೆ. ಇದಲ್ಲದೇ ನಮ್ಮ ಶಾಸಕ ಸಾಸನೂರು ಸೋಮನಗೌಡ ಪಾಟೀಲ ಅವರು ಒಂದೇ ವರ್ಷದಲ್ಲಿ ಬಹುತೇಕ ಹಳ್ಳಿಗಳಿಗೆ ಹಲವು ಯೋಜನೆಗಳಿಗೆ ಅನುದಾನ ತಂದಿದ್ದಾರೆ.
•ಚಿದಾನಂದ ಹಚ್ಯಾಳ
ಅಧ್ಯಕ್ಷರು, ದೇವರಹಿಪ್ಪರಗಿ ಬಿಜೆಪಿ ಮಂಡಲ ಜಿ.ಎಸ್. ಕಮತರ