Advertisement

ನಗರದಲ್ಲಿ ‘ಭಿನ್ನ’ಮತ ಫ‌ಲಿತಾಂಶ ನಿರೀಕ್ಷೆ

11:57 AM Apr 27, 2019 | Naveen |

ವಿಜಯಪುರ: ಬಿಜೆಪಿ ಶಾಸಕರನ್ನು ಹೊಂದಿದ್ದರೂ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮತ ಪಡೆಯುವುದು ಕಷ್ಟ. ಅಭ್ಯರ್ಥಿಯ ವಿರೋಧಿ ಅಲೆಯ ಜೊತೆಗೆ ಸ್ವಪಕ್ಷೀಯರ ಬಹಿರಂಗ ವಿರೋಧಿ ಹೇಳಿಕೆಗಳು ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿಗೆ ಇಲ್ಲಿ ಸುಗಮ ಹಾದಿ ಮಾಡಿಕೊಟ್ಟಿದೆ. ಹೀಗಾಗಿಯೇ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ ನಾಯಕರು ಹೆಚ್ಚಿನ ಮತಗಳ ಅಂತರ ನೀಡುವ ವಿಶ್ವಾಸದಲ್ಲಿದ್ದಾರೆ.

Advertisement

ಮತದಾನದ ದಿನವಾದ ಮಂಗಳವಾರ ಉಷ್ಣಾಂಶ 39ರಷ್ಟಿದ್ದ ಬಿರು ಬಿಸಿಲು ನಗರದ ಮತದಾರರನ್ನು ಮನೆಯಿಂದ ಹೊರಗೆ ಬರದಂತೆ ಹೈರಾಣಾಗಿಸಿತ್ತು. ಇದರಿಂದಾಗಿ ವಿಜಯಪುರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರದಂತೆ ತಡೆಯಿತು ಎಂದು ಕೆಲವರು ವಿಶ್ಲೇಷಿಸುತ್ತಾರೆ. ಇದರ ಹೊರತಾಗಿ ನಗರ ಹಲವು ಪ್ರದೇಶಗಳಲ್ಲಿ ಬಹುತೇಕ ಮತದಾರರಲ್ಲಿ ಗುರುತಿನ ಚೀಟಿ ಇದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರೂ ಈ ಬಾರಿ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳು ರದ್ದುಗೊಂಡಿದ್ದವು. ಇಂಥ ಹಲವು ಪ್ರಕರಣಗಳಿಂದ ಬಹುತೇಕ ಮತಗಟ್ಟೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳು ಜನರನ್ನು ಮತಗಟ್ಟೆಗೆ ಬಂದರೂ ಮತದಾದಿಂದ ವಂಚಿತರನ್ನಾಗಿಸಿತು.

ಸತತ ಎರಡು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿ, ಕೇಂದ್ರದಲ್ಲಿ ಮಂತ್ರಿಯಾದರೂ ಜಿಲ್ಲಾ ಕೇಂದ್ರವನ್ನು ಹೊಂದಿರುವ ವಿಜಯಪುರ ನಗರಕ್ಕೆ ರಮೇಶ ಜಿಗಜಿಣಗಿ ಹೇಳಿಕೊಳ್ಳುವಂಥದ್ದೇನನ್ನೂ ಮಾಡಲಿಲ್ಲ ಎಂಬ ಟೀಕೆಗಳು ಸಾಮಾನ್ಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ದಿಂದ ಯಾವ ಯೋಜನೆಯನ್ನೂ ತರಲಿಲ್ಲ. ನಗರದಲ್ಲಿ ಕ್ಯೆಗಾರಿಕೆ ಪ್ರದೇಶವಿದ್ದರೂ ಒಂದೇ ಒಂದು ಬೃಹತ್‌ ಉದ್ಯಮವವನ್ನು ತರಲಿಲ್ಲ. ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಈ ಅಲೆಯನ್ನೇ ನಂಬಿ ನನಗೆ ಮತ ಹಾಕಿ ಎಂದು ಸ್ವಯಂ ಅಭ್ಯರ್ಥಿ ಮನವಿ ಮಾಡಿಕೊಂಡದ್ದು ಸೇರಿದಂತೆ ಹಲವು ವಿರೋಧಿ ನಡೆಗಳು ರಮೇಶ ಜಿಗಜಿಣಗಿ ಅವರನ್ನು ಕಾಡಿದವು.

ಇದರ ಹೊರತಾಗಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚುನಾವಣೆ ಮುನ್ನ ಜಿಗಜಿಣಗಿ ವಿರುದ್ಧ ಹೇಳಿಕೆ ನೀಡಿ, ಚುನಾವಣೆ ಸಂದರ್ಭದಲ್ಲಿ ಅವರ ಪರ ಪ್ರಚಾರಕ್ಕೆ ಬಾರದಿರುವುದು ಹಾಗೂ ಅವರ ಬೆಂಬಲಿಗರು ಕಾಣಿಸಿಕೊಳ್ಳದಿರುವುದು ನಕಾರಾತ್ಮಕ ಸಂದೇಶ ರವಾನಿಸಿದ್ದವು. ಆದರೆ ಇವೆಲ್ಲವನ್ನೂ ಮೀರಿ ಕೆಲಸ ಮಾಡಿದ್ದು ಯುವ ಸಮೂಹದ ಸಮೂಹ ಸನ್ನಿಯಂತಾಗಿರುವ ಮೋದಿ, ಮೋದಿ, ಮೋದಿ ಅಲೆ. ಗೆಲುವಿನ ಬಲ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಗರದ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸ್ವಯಂ ಬಲಿಷ್ಠ ಬಲವಿಲ್ಲ ಎಂಬುದು ಹಲವು ಬಾರಿಯಂತೆ ಕಳೆದ ವಿಧಾನಸಭೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ ಪರವಾಗಿ ಆರಂಭದಲ್ಲಿ ಕಾಂಗ್ರೆಸ್‌ ನಾಯಕರು-ಕಾರ್ಯಕರ್ತರು ಮಾನಸಿಕವಾಗಿ ಹೊಂದಾಣಿಕೆ ಕಾಣಿಸಿಕೊಳ್ಳಲಿಲ್ಲ. ಇದು ಸುನೀತಾ ಚವ್ಹಾಣ ಅವರಿಗೆ ಕೊಂಚ ಹಿನ್ನಡೆ ಎಂಬ ಮಾತಿದೆ. ಆದರೆ ಅಂತಿಮ ಹಂತದಲ್ಲಿ ಕಾಂಗ್ರೆಸ್‌ ನಾಯಕರು, ಜೆಡಿಎಸ್‌ ನಾಯಕರೊಂದಿಗೆ ಪ್ರಚಾರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವರವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ವಿರೋಧಿ ಮತಗಳೆಂದೇ ಸಾಂಪ್ರದಾಯಿಕವಾಗಿ ವಿಶ್ಲೇಷಿಸುವ ಅಲ್ಪಸಂಖ್ಯಾತ ಸಮುದಾಯದ ಮತದಾರರು ಈ ಕ್ಷೇತ್ರದಲ್ಲಿ ಮಿತ್ರಪಕ್ಷಗಳ ಅಭ್ಯರ್ಥಿ ಪರ ಒಲವು ತೋರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮುನ್ನಡೆ ನೀಡುವಲ್ಲಿ ಸಹಕಾರಿ ಆಗಲಿದೆ ಎಂದು ಮಿತ್ರ ಪಕ್ಷಗಳ ನಾಯಕರ ವಿಶ್ವಾಸ.

Advertisement

ಕೋಟ್ಯಂತರ ರೂ. ಖರ್ಚು ಮಾಡಿ ಸ್ವೀಪ್‌ ಸಮಿತಿ ಏನೆಲ್ಲ ಸಾಹಸ ಮಾಡಿದರೂ ಜಿಲ್ಲೆಯಲ್ಲಿ ಮತದಾನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಿಲ್ಲ. ನಗರ ಪ್ರದೇಶದ ಕೆಲ ನಿರ್ದಿಷ್ಟ ಪ್ರದೇಶದಲ್ಲಿ ಗುರುತು ಪತ್ರ ಹೊಂದಿದ್ದರೂ ಮತಪಟ್ಟಿಯಲ್ಲಿ ಹೆಸರು ಕಿತ್ತು ಹಾಕಲಾಗಿದೆ. ಇಂಥ ಬೆಳವಣಿಗೆಗಳು ಬಿಜೆಪಿಗೆ ಸ್ವಲ್ಪ ಹಿನ್ನಡೆ ಮೂಡುವಂತೆ ಮಾಡಿವೆ. ಇದರ ಹೊರತಾಗಿ ನೂತನ ಮತದಾರರು ಹಾಗೂ ಮೋದಿ ಪರ ಅಲೆಯಿಂದ ಜಿಗಜಿಣಗಿ ಕನಿಷ್ಟ 10 ಸಾವಿರ ಮತಗಳ ಹೆಚ್ಚಿನ ಅಂತರ ಪಡೆಯಲಿದ್ದಾರೆ.
•ಶಿವರುದ್ರ ಬಾಗಲಕೋಟ,
ಅಧ್ಯಕ್ಷರು, ವಿಜಯಪುರ ನಗರ ಮಂಡಲ

ಅತಿಯಾದ ಬಿಸಿಲಿನ ತಾಪದಿಂದಾಗಿ ನಗರ ಕ್ಷೇತ್ರದ ಜನರು ಹೆಚ್ಚಿನ ಪ್ರಮಾಣದಲ್ಲಿ ಮತದಾನಕ್ಕೆ ಮುಂದಾಗಿಲ್ಲ. ಇದರ ಹೊರತಾಗಿ ಹಿಂದಿನ ಚುನಾವಣೆಗಳ ಅನುಭವದಲ್ಲಿ ಹೇಳುವುದಾದರೆ ಹೆಚ್ಚಿನ ಮತದಾನಕ್ಕಿಂತ ಕಡಿಮೆ ಮತದಾನ ಆದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಈ ಹಿಂದೆ ಹೆಚ್ಚಿನ ಲಾಭವಾಗಿದೆ. ಇದೀಗ ನಮ್ಮ ಮಿತ್ರಪಕ್ಷ ಜೆಡಿಎಸ್‌ನ ಸುನೀತಾ ಚವ್ಹಾಣ ಅವರಿಗೂ ಇದೇ ಮಾನದಂಡದಲ್ಲಿ ಹೆಚ್ಚಿನ ಲಾಭವಿದ್ದು, ಕನಿಷ್ಟ ಈ ಕ್ಷೇತ್ರದಿಂದ 20 ಸಾವಿರ ಹೆಚ್ಚಿನ ಮತ ನಮಗೆ ಬರಲಿದೆ.
•ಜಮೀರ ಭಕ್ಷಿ,
ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ವಿಜಯಪುರ ನಗರ

ಕುಮಾರಸ್ವಾಮಿ ಅವರ ಸಾಧನೆಗಳು, ಕಾಂಗ್ರೆಸ್‌ ವಿಧಾನಸಭೆ ಚುನಾವಣೆಯಲ್ಲಿ 65 ಸಾವಿರ ಮತಗಳನ್ನು ಪಡೆದಿರುವುದು ಜೆಡಿಎಸ್‌ ಪಕ್ಷಕ್ಕೆ ಇಲ್ಲಿ ಮೈತ್ರಿ ಹೆಚ್ಚಿನ ಬಲ ನೀಡಿದ್ದರೂ ಮೋದಿ ಅಲೆ ಇಲ್ಲಿ ನಮಗೆ ಲೀಡ್‌ ಕೊಡುವುದು ಕಷ್ಟದ. ನಗರದಲ್ಲಿ ನಮ್ಮ ಪಕ್ಷದ ಸಮರ್ಥ ನಾಯಕರೂ ಇಲ್ಲ, ಕ್ಷೇತ್ರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಪಕ್ಷದ ಶಾಸಕರೂ ಇಲ್ಲ. ಇಂಥ ಹಲವು ಕಾರಣಗಳಿಂದ ನಗರದಲ್ಲಿ ನಮಗೆ ಹೆಚ್ಚಿನ ಲೀಡ್‌ ಬರುವುದು ಅನುಮಾನ.
•ರಾಜು ಹಿಪ್ಪರಗಿ,
ಜೆಡಿಎಸ್‌ ಜಿಲ್ಲಾ ವಕ್ತಾರ ವಿಜಯಪುರ

.ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next