Advertisement
2009ಕ್ಕೂ ಮುನ್ನ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ ಯತ್ನಾಳ ಸತತ ವಿಜಯ ಸಾಧಿಸಿದ್ದರು. ಅಲ್ಲದೇ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಹಾಗೂ ಜವಳಿ ಖಾತೆ ರಾಜ್ಯ ಸಚಿವರೂ ಅಗಿದ್ದರು. 2009ರಲ್ಲಿ ಕ್ಷೇತ್ರ ಮರು ವಿಂಗಡಣೆ ಸಂದರ್ಭದಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದಾಗ ಚಿಕ್ಕೋಡಿ ಮೀಸಲು ಕ್ಷೇತ್ರದ ಸಂದಸರಾಗಿದ್ದ ರಮೇಶ ಜಿಗಜಿಣಗಿ ಬಿಜೆಪಿ ಸೇರಿ, ವಿಜಯಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. 2014 ಹಾಗೂ 2019ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವ ಮೂಲಕ ವಿಜಯಪುರ ಲೋಕಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂಬುದನ್ನು ಮತ್ತೂಮ್ಮೆ ಸಾಬೀತಾಗಿದೆ.
Related Articles
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಸ್ಥಾನ ಹಂಚಿಕೆ, ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಘೋಷಣೆಯಲ್ಲಿ ವಿಳಂಬ ಮಾಡಿದ್ದು ಜೆಡಿಎಸ್‌ಗೆ ಮುಳುವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ದೇವಾನಂದ ಚವ್ಹಾಣ ಶಾಸಕರಿದ್ದರೂ ತಮ್ಮ ಪತ್ನಿಗೆ ಟಿಕೆಟ್ ತರುವ ಮೂಲಕ ಕುಟುಂಬ ರಾಜಕಾರಣಕ್ಕೆ ಅಂಟಿಕೊಂಡರು ಎಂಬ ಅಸಮಾಧಾನ ಉಭಯ ಪಕ್ಷಗಳ ನಾಯಕರಲ್ಲಿ ಮನೆ ಮಾಡಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ವಿಜಯಪುರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಪಡೆದುಕೊಂಡು, ಮಾಜಿ ಶಾಸಕರಾದ ಪ್ರೊ| ರಾಜು ಆಲಗೂರ ಅಥವಾ ವಿಠuಲ ಕಟಕದೊಂಡ ಅವರನ್ನು ಕಣಕ್ಕಿಳಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು, ರಾಜಕೀಯದ ಆನುಭವವೇ ಇಲ್ಲದ ಡಾ| ಸುನೀತಾ ಚವ್ಹಾಣ ಅವರನ್ನು ಕಣಕ್ಕೆ ಇಳಿಸಿದ್ದು ಮೈತ್ರಿ ಗೆಲುವಿಗೆ ಮುಳುವಾಯಿತು.
ಇನ್ನು ಆಡಳಿತ ವಿರೋಧಿ ಅಲೆ ಇದ್ದು, ಸ್ವಪಕ್ಷೀಯರಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬಹಿರಂಗ ಬಂಡಾಯ ಘೋಷಿಸಿದರೂ ಕಾಂಗ್ರೆಸ್-ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಒಗ್ಗಟ್ಟು ಕಂಡು ಬರಲಿಲ್ಲ. ಹೀಗಾಗಿ ಬಿಜೆಪಿ ಬಂಡಾಯವನ್ನು ಸದ್ಬಳಕೆ ಮಾಡಿಕೊಂಡು ಬಲಿಷ್ಠ ರಣ ತಂತ್ರ ರೂಪಿಸುವಲ್ಲಿ ವಿಫಲವಾದ ಜೆಡಿಎಸ್ ಹೀನಾಯ ಸೋಲಿಗೆ ಬಲಿಯಾಗುವಂತಾಯಿತು.
ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗಿಂತ ಹೆಚ್ಚಾಗಿ ಕ್ಷೇತ್ರದ ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರು ಮೈತ್ರಿಯನ್ನು ಒಪ್ಪಲು ಸಿದ್ಧ ಇರಲಿಲ್ಲ. ಮತದಾನದ ಸಂದರ್ಭದಲ್ಲಿ ಮತಯಂತ್ರದಲ್ಲಿ ಹಸ್ತದ ಚಿಹ್ನೆ ಇಲ್ಲದಿರುವುದನ್ನು ಕಂಡು ಬೆರಗಾಗಿದ್ದ ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರು ಬೇಸರಗೊಂಡಿದ್ದು ಮತದಾನದ ಸಂದರ್ಭದಲ್ಲಿ ಬಹಿರಂಗವಾಗಿತ್ತು. ಮತಯಂತ್ರದಲ್ಲಿ ಹಸ್ತ ಕಾಣದ ಕಾಂಗ್ರೆಸ್ ಮತಗಳು ಅಂತಿಮವಾಗಿ ಮೋದಿ ಅಲೆಯಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸಿರುವುದು ಸ್ಪಷ್ಟವಾಗಿದೆ.
ಕ್ಷೇತ್ರದಲ್ಲಿ ತಮ್ಮ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದರೂ ಮೋದಿ ಅಲೆ, 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಹೊಸ ಹಾಗೂ ಯುವ ಮತದಾರರು ಮೋದಿ ಅಲೆಯಲ್ಲಿ ಬಿಜೆಪಿ ಆಭ್ಯರ್ಥಿಯನ್ನು ಬೆಂಬಲಿಸಿದ್ದು, ಮೈತ್ರಿ ಪಕ್ಷಗಳ ನಾಯಕರಲ್ಲಿ ಕಂಡು ಬರದ ಒಗ್ಗಟ್ಟಿನ ಪರಿಸ್ಥಿತಿ. ಹೀಗೆ ಹಲವು ಕಾರಣಗಳಿಂದ ಬಿಜೆಪಿ ಪಕ್ಷಕ್ಕೆ ವಿಜಯಪುರ ಭದ್ರಕೋಟೆ ಎಂಬ ಕೀರ್ತಿಯನ್ನು ಸಂಪಾದಿಸಲು ಸಾಧ್ಯವಾಯಿತು.