Advertisement
ಜನತಾ ಪರಿವಾರದಿಂದ ದೇಶಮುಖ ಕುಟುಂಬ ಜಗದೇವರಾವ್ ಹಾಗೂ ಅವರ ಪತ್ನಿ ವಿಮಲಾಬಾಯಿ ಇವರು ಆಯ್ಕೆ ಆದುದನ್ನು ಹೊರತುಪಡಿಸಿದರೆ ಮುದ್ದೇಬಿಹಾಳ ವಿಧಾನಸಭೆ ಬಹುತೇಕ ಕಾಂಗ್ರೆಸ್ ಭದ್ರ ಕೋಟೆ. ಇಂಥ ಭದ್ರ ಕೋಟೆಯಲ್ಲೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸುಮಾರು 5 ಸಾವಿರ ಹೆಚ್ಚಿನ ಮತಗಳನ್ನು ಬಾಚಿದ್ದರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ. ಈ ಬಾರಿ ಚಿತ್ರಣ ಹಲವು ರೀತಿಯಲ್ಲಿ ಭಿನ್ನವಾಗಿದೆ.
Related Articles
Advertisement
ಇಂಥ ಕಾಂಗ್ರೆಸ್ ಭದ್ರಕೋಟೆಯಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆ ಮಾಯವಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದ್ದರೆ, ಸಾಂಪ್ರದಾಯಿಕ ಕಾಂಗ್ರೆಸ್ ಮತಗಳು ಹಸ್ತದ ಚಿಹ್ನೆ ಕಾಣದೇ ಚದುರಿ ಹೋಗುವಂತೆ ಮಾಡಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ಬಿಜೆಪಿಗೆ ಕಾಂಗ್ರೆಸ್‌ಗಿಂತ ಸುಮಾರು 5 ಸಾವಿರ ಮತಗಳು ಹೆಚ್ಚು ಬಂದಿದ್ದವು.
ಬಿಜೆಪಿ ಹಾಗೂ ತಮ್ಮನ್ನು ಗೆಲ್ಲಿಸುವಲ್ಲಿ ಹೆಚ್ಚು ಆಸಕ್ತಿ ತೋರಿದ ಈ ಕ್ಷೇತ್ರಕ್ಕೆ ಗೆದ್ದು, ಮಂತ್ರಿಯಾದರೂ ರಮೇಶ ಜಿಗಜಿಣಗಿ ಅವರು ಹೇಳಿಕೊಳ್ಳುವಂಥ ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ ಎಂಬ ಅಸಮಾಧಾನ ಇದೆ. ಸಂಸದರ ನಿಧಿ ಬಳೆಯಲ್ಲೂ ಈ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂಬ ಬೇಸರ ಕಮಲ ಪಾಳೆಯದಲ್ಲಿ ಬೇಗುದಿ ಮೂಡಿಸಿದೆ. ಆದರೂ ಮತ್ತೂಮ್ಮೆ ಮೋದಿ, ಮಗದೊಮ್ಮೆ ಮೋದಿ ಎಂಬ ಯುವ ಪಡೆಯ ಪ್ರಭಾವ, ಹೊಸ ಮತದಾರರಲ್ಲಿ ಮೂಡಿರುವ ಮೋದಿ ಅಲೆ ಹಿಂದಿಗಿಂತ ಹೆಚ್ಚಿನ ಬಲ ತಂದಿದೆ. ಅಲ್ಲದೇ ಈ ಬಾರಿ ಎ.ಎಸ್. ಪಾಟೀಲ ನಡಹಳ್ಳಿ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನೇ ಸಳೆಯುವ ಶಕ್ತಿ ಅವರಿಗೆ ಕರಗತವಾಗಿದೆ. ಇದು ಬಿಜೆಪಿ-ಜಿಗಜಿಣಗಿಗೆ ಹೆಚ್ಚಿನ ಬಲ ತಂದಿದೆ ಎಂಬ ವಿಶ್ಲೇಷಣೆ ಬಿಜೆಪಿ ಪಾಳೆಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಮತ್ತೂಂದೆಡೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯರಲ್ಲಿ ಬಲ ಸಮುದಾಯದ ಜನರು ತಮ್ಮ ಸಮುದಾಯಕ್ಕೆ ಟಿಕೆಟ್ ನಿರೀಕ್ಷೆ ಹುಸಿ ಮಾಡಿರುವ ಮೈತ್ರಿ ಪಕ್ಷಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ಬೆಂಬಲಿಸಿದ್ದಾರೆ. ಇದು ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬುವಂತೆ ಮಾಡಿದೆ.
ಇದಲ್ಲದೇ ಇತರೆಡೆ ಇರುವಂತೆ ಈ ಕ್ಷೇತ್ರದಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಕೆಳ ಹಂತದ ಕಾರ್ಯಕರ್ತ ಒಪ್ಪಿಕೊಂಡಿಲ್ಲ. ಪಕ್ಷದ ನಾಯಕರಲ್ಲಿ, ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳದೇ ಅತೃಪ್ತಿ ಹೊರ ಹಾಕಿದ್ದೂ ಇದೆ. ಕೂಡಲೇ ಸಿ.ಎಸ್. ನಾಡಗೌಡ ಅವರು ಇಂತ ಅಸಮಾಧಾನಿತರನ್ನು ಮನವೊಲಿಸುವಲ್ಲಿ ಯಶಸ್ವಿಯಾದಂತೆ ಕಂಡರೂ ಮಿತ್ರ ಪಕ್ಷಗಳ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ.
ಇದಲ್ಲದೇ ಜಿಲ್ಲೆಯ 8 ಕ್ಷೇತ್ರಗಳಿಗೆ ಹೋಲಿಸಿದರೆ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯ ಪರಿಣಾಮ ಕಾಂಗ್ರೆಸ್ ಚಿಹ್ನೆ ಇಲ್ಲದಿರುವುದು ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ಬಿಜೆಪಿಯತ್ತ ವಾಲುವಂತೆ ಮಾಡಿದೆ ಎಂಬುದನ್ನು ಕಾಂಗ್ರೆಸ್ ಮುಖಂಡರೇ ಒಪ್ಪಿಕೊಳ್ಳುತ್ತಾರೆ.
ಮೋದಿ ಆಲೆ, ಕಾಂಗ್ರೆಸ್ ಚಿಹ್ನೆ ಇಲ್ಲದಿವುರುದು ಕಾಂಗ್ರೆಸ್ ಬೆಂಬಲಿ ಜೆಡಿಎಸ್ ಅಭ್ಯರ್ಥಿಗೆ ಮೇಲ್ನೋಟಕ್ಕೆ ಹಿನ್ನಡೆ ಎನಿಸಿದರೂ ಇದರ ಹೊರತಾಗಿಯೂ ಭಯ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರು ಹೈಕಮಾಂಡ್ ಆದೇಶದಂತೆ ಪ್ರಾಮಾಣಿಕವಾಗಿ ಒಗ್ಗೂಡಿ ಕೆಲಸ ಮಾಡಿದ್ದಾರೆ. ಜಿಗಜಿಣಗಿ ಅವರು ದಶಕದಿಂದ ಸಂಸದರಾದರೂ ಕ್ಷೇತ್ರ ಯಾವ ಹಳ್ಳಿಗೂ ಭೇಟಿ ನೀಡದೇ ಇರುವುದನ್ನು, ಒಂದೇ ಒಂದು ಅಭಿವೃದ್ಧಿ ಕೆಲಸಗಳನ್ನು ಮಾಡದಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಸುನೀತಾ ಚವ್ಹಾಣ ಅವರಿಗೆ ಹೆಚ್ಚಿನ ಮತಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗುತ್ತೇವೆ ಕಾದು ನೋಡಿ ಎಂಬ ವಿಶ್ವಾಸವೂ ಮಿತ್ರಪಕ್ಷಗಳ ನಾಯಕರಲ್ಲಿದೆ.
ಹೀಗಾಗಿ ಕಾಂಗ್ರೆಸ್ ಭದ್ರಕೋಟೆಯಲ್ಲೂ ಹೆಚ್ಚಿನ ಮತಗಳನ್ನು ಬಾಚಿದ್ದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಇರುವುದು ಹೆಚ್ಚಿನ ಬಲ ತಂದುಕೊಡುವುದೇ ಅಥವಾ ಮೈತ್ರಿ ಫಲದಿಂದ ಜೆಡಿಎಸ್ ಆಭ್ಯರ್ಥಿ ಡಾ| ಸುನೀತಾ ಚವ್ಹಾಣ ಮುನ್ನಡೆಗೆ ನೆರವಾಗುವುದೇ ಮೇ 23ರವರೆಗೆ ಕಾಯಬೇಕಿದೆ.
ಸಂಸದರಾಗಿ ಎರಡು ಅವಧಿಯಲ್ಲಿಯೂ ರಮೇಶ ಜಿಗಜಿಣಗಿ ಮುದ್ದೇಬಿಹಾಳ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂಬ ದೂರಿದೆ. ಆದರೆ ಮೋದಿ ಅಲೆ, ಹಸ್ತದ ಚಿಹ್ನೆ ಇಲ್ಲದೇ ಗೊಂದಲಕ್ಕೀಡಾಗಿ ಬಿಜೆಪಿ ಕಡೆ ವಾಲಿದ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು, ಪಕ್ಷದ ನಿಷ್ಠಾವಂಥ ಕಾರ್ಯಕರ್ತ ಪರಿಶ್ರಮದಿಂದಾಗಿ ಹಿಂದಿಗಿಂತ ಹೆಚ್ಚಿನ ಮತಳನ್ನು ತಂದುಕೊಡಲಿದೆ. ಈ ಬಾರಿ ಕನಿಷ್ಠ 25 ಸಾವಿರ ಹೆಚ್ಚಿನ ಮತಗಳನ್ನು ತಂದುಕೊಡುತ್ತೇವೆ.•ಎಂ.ಡಿ. ಕುಂಬಾರ,
ಅಧ್ಯಕ್ಷರು, ಬಿಜೆಪಿ ಮಂಡಲ, ಮುದ್ದೇಬಿಹಾಳ ಯುವ ಮತದಾರರಲ್ಲಿರುವ ಮೋದಿ ಅಲೆ, ಹಸ್ತದ ಚಿಹ್ನೆ ಇಲ್ಲದೇ ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರು ಗೊಂದಲಕ್ಕೀಡಾಗಿದ್ದು ನಿಜ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಇದನ್ನು ನಿವಾರಿಸುವಲ್ಲಿ ಯಶಸ್ವಿಯಾಗಿರುವ ಕಾರಣ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಡಾ| ಸುನೀತಾ ಚವ್ಹಾಣ ಅವರು ಒಟ್ಟು ಮತದಾನದಲ್ಲಿ ಶೇ. 60 ಮತಗಳನ್ನು ಪಡೆಯಲಿದ್ದಾರೆ. ಆ ಮೂಲಕ ಕನಿಷ್ಠ 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ವಿಶ್ವಾಸವಿದೆ.
•ಅಬ್ದುಲ್ ಗಫೂರ ಮಕಾಂದಾರ,
ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಮುದ್ದೇಬಿಹಾಳ ಜಿ.ಎಸ್. ಕಮತರ