Advertisement

ನಿಷ್ಪಕ್ಷಪಾತ ಕಾರ್ಯ ನಿರ್ವಹಿಸಲು ಪೊಲೀಸರಿಗೆ ಸೂಚನೆ

03:19 PM Apr 22, 2019 | Naveen |

ಮುದ್ದೇಬಿಹಾಳ: ಲೋಕಸಭೆ ಚುನಾವಣೆ ಮತದಾನ ಕರ್ತವ್ಯಕ್ಕೆ ನೇಮಕಗೊಂಡಿರುವ ಪೊಲೀಸ್‌ ಸಿಬ್ಬಂದಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾರಾದರೂ ಯಾವುದೇ ಪಕ್ಷದ ಪರವಾಗಿ, ಪಕ್ಷಕ್ಕೆ ಸೇರಿದ ವ್ಯಕ್ತಿ ಪರವಾಗಿ ಕೆಲಸ ಮಾಡುವುದು ಕಂಡು ಬಂದಲ್ಲಿ ಅಂಥವರ ಮೇಲೆ ತಕ್ಷಣ ಕ್ರಮ ಜರುಗಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ಎಚ್ಚರಿಕೆ ನೀಡಿದರು.

Advertisement

ಇಲ್ಲಿನ ಪೊಲೀಸ್‌ ಠಾಣೆ ಆವರಣದಲ್ಲಿ ರವಿವಾರ ಸಂಜೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆಗಳಿಗೆ ನೇಮಕಗೊಂಡಿರುವ ವಿವಿಧ ಜಿಲ್ಲೆಗಳ ಪೊಲೀಸ್‌ ಸಿಬ್ಬಂದಿ ಸಭೆ ನಡೆಸಿ ಅವರು ಮಾತನಾಡಿದರು.

ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ಭದ್ರತಾ ಕರ್ತವ್ಯ ನಿರ್ವಹಿಸಬೇಕು. ಪೊಲೀಸರು ಚುನಾವಣಾ ಆಯೋಗದ ಅಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಹೀಗಾಗಿ ಚುನಾವಣಾ ಆಯೋಗದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಿಆರ್‌ಒ ಅನುಮತಿ ಇಲ್ಲದೆ ಮತಗಟ್ಟೆ ಒಳಗೆ ಪ್ರವೇಶಿಸಬಾರದು. ಪೊಲೀಸ್‌ ಕೆಲಸ ಮಾತ್ರ ಮಾಡಬೇಕು. ಅವಶ್ಯಕತೆ ಇದ್ದಷ್ಟೇ ನಡೆದುಕೊಳ್ಳಬೇಕು. ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಬೇಕು.

ಅನವಶ್ಯಕ ಗೊಂದಲ ಹುಟ್ಟು ಹಾಕಕೂಡದು. ಜನರನ್ನು ಸಾಲಾಗಿ ನಿಲ್ಲಿಸಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ವಿನಾಕಾರಣ ಬೈಯ್ಯುವುದು, ಹೊಡೆಯುವುದು ಮಾಡಬಾರದು. ಪೊಲೀಸರಿಂದಲೇ ಸಮಸ್ಯೆ ಆಯಿತು ಎನ್ನುವ ಆರೋಪಕ್ಕೆ ಅವಕಾಶ ಕೊಡಬಾರದು ಎಂದು ಕಿವಿಮಾತು ಹೇಳಿದರು.

ಡಿವೈಎಸ್ಪಿ ಮಹೇಶ್ವರಗೌಡ ಮಾತನಾಡಿ, ಈಗಾಗಲೆ ಪೊಲೀಸ್‌ ವರಿಷ್ಠಾಧಿಕಾರಿಗಳು ಹೊರಡಿಸಿರುವ ಸೂಚನಾ ಪತ್ರವನ್ನು ಎಲ್ಲರಿಗೂ ನೀಡಲಾಗಿದ್ದು ಅದನ್ನು ಓದಿಕೊಂಡು ಅದರಂತೆ ನಡೆದುಕೊಳ್ಳಬೇಕು. ವಿಕಲಚೇತನರಿಗೆ ಈ ಬಾರಿ ಹೊಸ ವ್ಯವಸ್ಥೆ ಕಲ್ಪಿಸಲಾಗಿದ್ದು ವಿಕಲಚೇತನ ಮತದಾರರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿದ್ದು ಅಂಥ ವಾಹನಗಳಿಗೆ ಗುರುತಿ ನ ಚೀಟಿ ನೀಡಲಾಗಿದೆ. ಇಂಥ ವಾಹನ ಮತಗಟ್ಟೆ ಇರುವ ಕೇಂದ್ರದಲ್ಲಿ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿ ಹೇಳಿದರು.

Advertisement

ಸಿಪಿಐ ರವಿಕುಮಾರ ಕಪ್ಪತ್ತನ್ನವರ ಮಾತನಾಡಿ, ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರಕ್ಕೆ ಒಟ್ಟಾರೆ ಅಂದಾಜು 400 ಪೊಲೀಸ್‌ ಸಿಬ್ಬಂದಿ ನಿಯೋಜಿಸಿದ್ದು ಓರ್ವ ಡಿವೈಎಸ್ಪಿ, 3 ಸಿಪಿಐ, 4 ಪಿಎಸೈ, 8 ಎಎಸ್‌ಐಗಳನ್ನು ಉಸ್ತುವಾರಿ ನೋಡಿಕೊಳ್ಳಲು ನೇಮಿಸಲಾಗಿದೆ ಎಂದು ತಿಳಿಸಿದರು. ಮುದ್ದೇಬಿಹಾಳ, ತಾಳಿಕೋಟೆ ಠಾಣೆ ಪಿಎಸೈಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next