Advertisement

ಎಂಬಿಪಿ ವಿರುದ್ಧ ಹರಿಹಾಯ್ದ ಬಿಜೆಪಿ

01:44 PM Apr 15, 2019 | Naveen |

ಮುದ್ದೇಬಿಹಾಳ: ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ವಿಜಯಪುರದ ಹೋಟೆಲೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಂಧಲೆ ನಡೆಸಿದ ತಮ್ಮ ಹಿಂಬಾಲಕರ ಗುಂಡಾವರ್ತನೆ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲರು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯಸಮ್ಮತ ಕ್ರಮ ಕೈಗೊಂಡು ತಾವೊಬ್ಬ ನಿಷ್ಪಕ್ಷಪಾತ ಗೃಹ ಸಚಿವ ಎನ್ನುವುದನ್ನು ಸಾಬೀತು ಮಾಡಬೇಕು ಎಂದು ಇಲ್ಲಿನ ಬಿಜೆಪಿ ಧುರೀಣರು ಸವಾಲು ಹಾಕಿದ್ದಾರೆ.

Advertisement

ಪಟ್ಟಣದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ಧುರೀಣರು, ಸಚಿವ ಪಾಟೀಲರು ಘಟನೆಗೆ ವಿಷಾಧ ವ್ಯಪ್ತಿಡಿಸಿದರೆ ಸಾಲದು. ಬಹಿರಂಗವಾಗಿ ನಡಹಳ್ಳಿ ಅವರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮತದಾನ ಮುಗಿದ ಮೇಲೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಅವರು ಎಂಬಿಪಿ ಹಿಂಬಾಲಕರ ಗುಂಡಾವರ್ತನೆಯನ್ನು ಉಗ್ರವಾಗಿ ಖಂಡಿಸಿ ಮಾತನಾಡಿ, ಹಿಂದೆ ನೀರಾವರಿ ಸಚಿವರಾಗಿದ್ದಾಗ ನಡೆಸಿದ ಅವ್ಯವಹಾರಗಳನ್ನು ದಾಖಲೆ ಸಮೇತ ಬಹಿರಂಗಪಡಿಸಲು ಯತ್ನಿಸಿದ ಶಾಸಕ ನಡಹಳ್ಳಿ ಮೇಲೆ ತಮ್ಮವರನ್ನು ಛೂ ಬಿಟ್ಟು ಅವ್ಯವಹಾರ ಬಹಿರಂಗಗೊಳ್ಳದಂತೆ ನೋಡಿಕೊಂಡಿದ್ದಾರೆ. ಇದನ್ನು ಜನಸಾಮಾನ್ಯರು ಸಹಿಸುವುದಿಲ್ಲ ಎಂದರು.

ಲೋಕಸಭೆಯ ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ನಡಹಳ್ಳಿಯವರು ಜನಪ್ರಿಯ ರಾಜಕಾರಣಿ. ಅವರ ಹೋರಾಟದ ಮನೋಭಾವ ಜಿಲ್ಲೆಯ ಅಷ್ಟೇ ಏಕೆ ಉತ್ತರ ಕರ್ನಾಟಕದ ಎಲ್ಲರಿಗೂ ಗೊತ್ತಿದೆ. ಇಂಥ ಒಬ್ಬ ಜನಪ್ರತಿನಿಧಿ ಮೇಲೆ ಗುಂಡಾ ಕಾರ್ಯಕರ್ತರನ್ನು ಛೂ ಬಿಟ್ಟು ಅವಮಾನ ಪಡಿಸಿದ್ದು ಖಂಡನೀಯ. ಇದಕ್ಕೆ ಗೃಹ ಮಂತ್ರಿಯ ಪ್ರಚೋದನೆ ಇದ್ದು ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ನಡೆಯತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ.

ನಿಮ್ಮ ನ್ಯೂನ್ಯತೆ ಎತ್ತಿ ತೋರಿಸಿದರೆ, ನಿಮ್ಮ ಲೂಟಿ ಬಹಿರಂಗಪಡಿಸಲು ಮುಂದಾದರೆ ನಿಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕಲು ಪ್ರಯತ್ನಿಸುವ ನಿಮ್ಮ ನಡವಳಿಕೆ ಪ್ರಜಾತಂತ್ರ ವಿರೋಧಿಯಾದದ್ದು ಎಂದು ಕಿಡಿಕಾರಿದರು.

Advertisement

ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ ಮಾತನಾಡಿ, ವಿರೋಧ ಪಕ್ಷದ ಶಾಸಕರ ಕರ್ತವ್ಯಕ್ಕೆ ಆಡಳಿತ ಪಕ್ಷದವರು ಅಡ್ಡಿ ಪಡಿಸಲು ಬಳಸಿಕೊಂಡ ಗುಂಡಾಗಿರಿ ದಾರಿ ಸರಿ ಅಲ್ಲ. ಶಾಸಕ ನಡಹಳ್ಳಿ ನಿಜವಾದ ಬಸವಾನುಯಾಯಿ ಆಗಿದ್ದು ಘಟನೆ ನಡೆದಾಗ ತುಂಬಾ ತಾಳ್ಮೆವಹಿಸಿ ಪರಿಸ್ಥಿತಿ ಕೈ ಮೀರುವುದನ್ನು ತಪ್ಪಿಸಿದ್ದಾರೆ. ಗೃಹಮಂತ್ರಿ ಎಂ.ಬಿ. ಪಾಟೀಲರು ವೀರಶೈವ ಲಿಂಗಾಯತ ಧರ್ಮ ಒಡೆಯಲು ಯತ್ನಿಸಿದ್ದಂತೆ ಅವರ ತಂದೆ ಮಾಜಿ ಸಚಿವ ದಿ| ಬಿ.ಎಂ. ಪಾಟೀಲರು ಧರ್ಮ ಒಡೆಯಲು ಯತ್ನಿಸಿ ಕಾಂಗ್ರೆಸ್‌ ಇಬ್ಭಾಗ ಮಾಡಿದ್ದರು. ಲಿಂಗಾಯತ ಸಮಾಜದ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಷಡ್ಯಂತ್ರ ನಡೆಸಿ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದರು ಎಂದು ಬಾಂಬ್‌ ಹಾಕಿದರು.

ಜಿಲ್ಲಾ ಧುರೀಣ ರಾಜೇಂದ್ರಗೌಡ ರಾಯಗೊಂಡ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ನಿರ್ವಹಿಸಬೇಕಾದ ಗೃಹ ಸಚಿವರೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಎಂಬಿಪಿ ಅವರಂತೆ ಕಾರ್ಯಕರ್ತವನ್ನು ಛೂ ಬಿಟ್ಟು ಗುಂಡಾಗಿರಿ ನಡೆಸಲು ನಮಗೂ ಗೊತ್ತಿದೆ. ನಿಮ್ಮ ಪತ್ರಿಕಾಗೋಷ್ಠಿಗೆ ನಮ್ಮ ಕಾರ್ಯಕರ್ತರೂ ದಾಳಿ ನಡೆಸಿ ಗಲಾಟೆ ಮಾಡಿಸುವುದೂ ಗೊತ್ತು. ಆದರೆ ನಾವು ನಿಜವಾದ ಬಸವಾನುಯಾಯಿಗಳು. ನೀವು
ರಾಜ್ಯಕ್ಕೆ ಸಚಿವರಾಗುವ ಬದಲು ನಿಮ್ಮ ಮತಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದೀರಿ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ನಿಮ್ಮ ಶವಯಾತ್ರೆ ನಡೆಸುವ ಕಾಲ ಬರಬಹುದು ಎಂದು ಎಚ್ಚರಿಸಿದರು.

ತಾಳಿಕೋಟೆ ಭಾಗದ ಧುರೀಣ ಶಿವನಗೌಡ ತಾಳಿಕೋಟೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಘಟನೆಯ ವಿಡಿಯೋಗಳನ್ನು ಬಳಸಿಕೊಂಡು ಕಿಡಿಗೇಡಿಗಳನ್ನು ಬಂಧಿಸಿ ಗುಂಡಾ ಕಾಯ್ದೆ ಅಡಿ ಕ್ರಮ ಜರುಗಿಸುವ ಮೂಲಕ ಎಂಬಿಪಿ ಅವರು ತಾವೊಬ್ಬ ನಿಷ್ಪಕ್ಷಪಾತ ಗೃಹ ಸಚಿವ ಎನ್ನುವುದನ್ನು ರಾಜ್ಯದ ಜನತೆಗೆ ತೋರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಅಶೋಕ ವನಹಳ್ಳಿ, ಸದಾನಂದ ಮಾಗಿ, ಧುರೀಣರಾದ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಶರಣು ಬೂದಿಹಾಳಮಠ, ಮಹಾಂತಗೌಡ ಪಾಟೀಲ ವಕೀಲರು, ಬಸನಗೌಡ ಪಾಟೀಲ ಸರೂರ, ಪರಶುರಾಮ ಮುರಾಳ, ರಾಜಶೇಖರ ಹೊಳಿ, ಪುನಿತ್‌ ಹಿಪ್ಪರಗಿ, ರಾಜಶೇಖರ ಮ್ಯಾಗೇರಿ, ಮಲ್ಲನಗೌಡ ಪಾಟೀಲ ವಕೀಲರು, ಮಂಜು ರತ್ನಾಕರ, ಸಂಗಮೇಶ ಹೊಳಿ, ಶಿವನಗೌಡ ತಾಳಿಕೋಟ, ಗೌರಮ್ಮ ಹುನಗುಂದ, ಮಹಾಂತೇಶ ಗಂಜ್ಯಾಳ, ಹನುಮಂತ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next